ಮಡಿಕೇರಿ, ಜು. 12: ವಾಹನಗಳಿಗೆ ಸಂಬಂಧಿಸಿದಂತೆ ನೋಂದಣಿ, ಮಾಲೀಕತ್ವ ಬದಲಾವಣೆ, ಸುಸ್ಥಿತಿ ದೃಢೀಕರಣ, ತೆರಿಗೆ ಪಾವತಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳು ಇನ್ನು ಮುಂದಕ್ಕೆ ಸಕಾಲ ಯೋಜನೆಯಡಿ ಬರಲಿವೆ. ಇದಕ್ಕಾಗಿ ಆನ್ಲೈನ್ ಮೂಲಕ ವಾಹನ -4 ಯೋಜನೆ ಜಾರಿಗೊಳ್ಳುತ್ತಿದೆ. ಅತಿ ಶೀಘ್ರದಲ್ಲೇ ಈ ಯೋಜನೆ ಜಾರಿಗೊಳ್ಳಲಿದ್ದು, ಇನ್ನು ಮುಂದಕ್ಕೆ ಎಲ್ಲಾ ಪ್ರಕ್ರಿಯೆಗಳು ಆನ್ಲೈನ್ ಮೂಲಕ ನಡೆಯಲಿದ್ದು, ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೇರ ಹಣ ಪಾವತಿ ಕಾರ್ಯ ಸ್ಥಗಿತಗೊಳ್ಳಲಿದೆ.ಈಗಾಗಲೇ ಸಕಾಲ ಯೋಜನೆಯಡಿ ‘ಸಾರಥಿ’ಯೋಜನೆಯಡಿ ಆನ್ಲೈನ್ ವ್ಯವಸ್ಥೆಯಡಿ ಚಾಲನಾ ತರಬೇತಿ ಪರವಾನಗಿ ಮನೆಗಳಿಗೆ ತಲಪುವ ವ್ಯವಸ್ಥೆ ಮಾಡಲಾಗಿದೆ. ಇದೀಗ ‘ವಾಹನ-4’ ಯೋಜನೆಯಡಿ ವಾಹನಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಆನ್ಲೈನ್ ಮೂಲಕ ಸಲ್ಲಿಸಬೇಕಿದೆ. ಹಾಗೆಯೇ ಹಣ ಪಾವತಿ ಕೂಡ ಆನ್ಲೈನ್ ಮೂಲಕವೇ ಆಗಲಿದೆ. ಈ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಇಲಾಖಾ ಅಧಿಕಾರಿಗಳು ಕಾರ್ಯತತ್ಪರರಾಗಿದ್ದು, ಈಗಾಗಲೇ ಕೆಲವೊಂದು ದಾಖಲೆಗಳಿಗೆ ಸಂಬಂಧಿಸಿದಂತೆ ಶುಲ್ಕ ಸ್ವೀಕಾರ ಮಾಡುವದನ್ನು ಸ್ಥಗಿತಗೊಳಿಸಿದ್ದಾರೆ.ಮುಂದಿನ ತಾ. 22 ರಿಂದ ವಾಹನ-4 ಯೋಜನೆ ಅಧಿಕೃತವಾಗಿ ಜಾರಿಗೊಳ್ಳುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ತಾ. 19 ರಿಂದ ಎಲ್ಲಾ ರೀತಿಯ ಶುಲ್ಕ, ತೆರಿಗೆ ಪಾವತಿ ಕಾರ್ಯ ಸ್ಥಗಿತಗೊಳ್ಳಲಿದೆ. ಈಗಾಗಲೇ ಹೊಸ ನೊಂದಣಿ, ವರ್ಗಾವಣೆ, ಇನ್ನಿತರ ದೀರ್ಘಾವಧಿಯ ದಾಖಲೆಗಳ ಶುಲ್ಕ ವಸೂಲಾತಿಯನ್ನು ಸ್ಥಗಿತಗೊಳಿಸಲಾಗಿದೆ. ತುರ್ತಾಗಿ ಆಗಬಹುದಾದ ದಾಖಲೆಗಳಿಗೆ ಮಾತ್ರ ಶುಲ್ಕ ಸ್ವೀಕಾರ ಮಾಡಲಾಗುತ್ತಿದೆ. ದೀರ್ಘಾವಧಿಯ ದಾಖಲೆ ಒದಗಿಸಲು ಸಕಾಲದಲ್ಲಿ ಒಂದು ತಿಂಗಳ ಕಾಲ ಕಾಲಾವಕಾಶ ಇರುವದರಿಂದ ಅಂತಹ ದಾಖಲೆಗಳಿಗೆ ಈಗ ಶುಲ್ಕ ಪಾವತಿಸಿದರೆ, ಅದು ಮತ್ತೆ ವಾಹನ ಮಾಲೀಕರಿಗೆ ಸಿಗುವದಿಲ್ಲ. ಆನ್ಲೈನ್ನಲ್ಲಿ ಮತ್ತೆ ಪಾವತಿ ಮಾಡ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾಲೀಕರಿಗೆ ನಷ್ಟವಾಗ ಬಾರದೆಂಬ ಉದ್ದೇಶದಿಂದ ಅಂತಹ ದಾಖಲೆಗಳಿಗೆ ಶುಲ್ಕ ಸ್ವೀಕಾರ ಮಾಡುವದನ್ನು
(ಮೊದಲ ಪುಟದಿಂದ) ಸ್ಥಗಿತಗೊಳಿಸಿರುವದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಸಾಕಷ್ಟು ದಾಖಲೆಗಳು ವಿಲೇವಾರಿ ಯಾಗದೆ ಬಾಕಿ ಉಳಿದಿದೆ. ದೂರದ ಊರುಗಳಿಂದ ಸಾರಿಗೆ ಕಚೇರಿ ಕೆಲಸಕ್ಕಾಗಿ ಬರುವವರು ಇಲ್ಲಿ ಬಂದು ತಮ್ಮ ಕೆಲಸ ಆಗದೇ ಹಿಂದಿರುಗುವದಕ್ಕಿಂತ ‘ವಾಹನ-4’ ಯೋಜನೆ ಜಾರಿಗೊಂಡ ಬಳಿಕ ವ್ಯವಹರಿಸಿದರೆ, ಅನವಶ್ಯಕವಾಗಿ ಬಂದು - ಹೋಗುವ ಸಮಯ ಹಾಗೂ ಹಣ ಉಳಿತಾಯವಾಗಲಿದೆ.