ಗೋಣಿಕೊಪ್ಪ ವರದಿ, ಜು. 12: ಬೆಮ್ಮತ್ತಿ ಕಾಫಿ ತೋಟದಲ್ಲಿ ಸೇರಿಕೊಂಡು ದಿನದೂಡುತ್ತಿದ್ದ 40 ವರ್ಷ ಪ್ರಾಯದ ಗಂಡಾನೆಯನ್ನು ಸೆರೆ ಹಿಡಿದು ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದೊಂದು ತಿಂಗಳಿನಿಂದ ಗಾಯಗೊಂಡು ಧನುಗಾಲ, ಬೆಮ್ಮತ್ತಿ ಗ್ರಾಮದಲ್ಲಿ ಸೇರಿಕೊಂಡು ಬೆಳೆ ನಾಶದಲ್ಲಿ ತೊಡಗಿಕೊಂಡಿತ್ತು. ನಿತ್ರಾಣ ಸ್ಥಿತಿಯಲ್ಲಿದ್ದ ಆನೆಯನ್ನು ಹಿಡಿದು ಚಿಕಿತ್ಸೆ ನೀಡಲು ಮುಂದಾದ ಅರಣ್ಯ ಇಲಾಖೆಗೆ ಅಲ್ಲಿನ ಕಾಫಿ ಬೆಳೆಗಾರ ಪಾರುವಂಗಡ ಬೆಳ್ಯಪ್ಪ ಅವರ ತೋಟದಲ್ಲಿ ಪತ್ತೆಯಾಯಿತು. ಇದರಂತೆ ಸಂಜೆ 6 ಗಂಟೆ ಸುಮಾರಿಗೆ ಸಾಕಾನೆ ಸಹಕಾರದಲ್ಲಿ ಹಿಡಿದು, ಚಿಕಿತ್ಸೆ ನೀಡಲಾಯಿತು.
ಸಾಕಾನೆಗಳಾದ ಅಭಿಮನ್ಯು, ಕೃಷ್ಣ ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಯಿತು. ಬೆಳಗ್ಗೆಯಿಂದ ಬೆಳ್ಯಪ್ಪ ಅವರ ತೋಟದಲ್ಲಿ ಪತ್ತೆಯಾದ ಆನೆ ಮಲಗಿಕೊಂಡು ಕಾಲ ಕಳೆಯುತ್ತಿತ್ತು. ನಂತರ ಡಾಟ್ ಮೂಲಕ ಸೆರೆ ಹಿಡಿಯಲು ಮುಂದಾದಾಗ ನಿಂತಿದ್ದ ಜಾಗದಿಂದ ಸುಮಾರು 30 ಮೀಟರ್ಗಳಷ್ಟು ದೂರ ಓಡಿದ್ದ ಆನೆಯು ನಂತರ ನಿತ್ರಾಣಗೊಂಡು ನಿಂತಿತ್ತು. ನಂತರ ಹಿಡಿದು ಹಗ್ಗದಿಂದ ಚಿಕಿತ್ಸೆ ನೀಡಲಾಯಿತು.
ಕಳೆದ ಒಂದು ತಿಂಗಳಿನಿಂದ ಗಾಯಗೊಂಡು ಗ್ರಾಮದಲ್ಲಿ ಸೇರಿಕೊಂಡಿದ್ದ ಆನೆಯು ತೋಟದಲ್ಲಿನ ಆಹಾರ ತಿಂದು ಬದುಕುತ್ತಿತ್ತು. ಮೈಯಲ್ಲಿ ಹೆಚ್ಚಿನ ಗಾಯವಿದ್ದ ಕಾರಣ ಕೆರೆಯಲ್ಲಿಯೇ ದಿನತಳ್ಳುತ್ತಿದ್ದ ಆನೆಯು ಮೈಯಲ್ಲಿನ ಗಾಯವನ್ನು ಕೆಸರಿನಿಂದ ವಾಸಿ ಮಾಡಿಕೊಂಡಿತ್ತು. ಆದರೆ, ಎರಡು ಕಾಲುಗಳಲ್ಲಿ ಹೆಚ್ಚಿನ ಗಾಯವಿದ್ದ ಕಾರಣ ನಡೆಯಲು ಆಗದೆ ಮೆಲ್ಲನೆ ನಡೆದುಕೊಂಡು ಕುಂಟುತ್ತಾ ತೋಟದಲ್ಲಿ ಆಹಾರ ತಿಂದು ಬದುಕುತ್ತಿತ್ತು. ತಿತಿಮತಿ ಆರ್ಆರ್ಟಿ ತಂಡವು ದಿನಂಪ್ರತಿ ಆನೆಯ ಚಲನ ವಲನ ನೋಡಿಕೊಂಡು ಕಾರ್ಯಾಚರಣೆ ನಡೆಸುತ್ತಿತ್ತು. ಆರ್ಆರ್ಟಿ ತಂಡದ ಸಲಹೆಯಂತೆ ಹಿಡಿದು ಚಿಕಿತ್ಸೆ ನೀಡಲಾಯಿತು.
5 ತಿಂಗಳ ಹಿಂದಷ್ಟೆ ಜಂಗಲಾಡಿ ಎಂಬಲ್ಲಿ ಮತ್ತೊಂದು ಗಂಡಾನೆಯೊಂದಿಗೆ ಕಾದಾಡಿ ಗಾಯಗೊಂಡಿದ್ದು, ಈ ಸಂದÀರ್ಭ ಮತ್ತೊಂದು ಆನೆ ಸಾವನ್ನಪ್ಪಿತ್ತಾದರೂ ಮೈಯಲ್ಲಿ ಹೆಚ್ಚಿನ ಗಾಯವಿದ್ದ ಕಾರಣ ಕಾಗೆ, ಪಕ್ಷಿಗಳಿಂದ ರಕ್ಷಿಸಿಕೊಳ್ಳಲು ಕೆರೆಯಲ್ಲಿಯೇ ದಿನದೂಡಿ ಗಾಯ ವಾಸಿ ಮಾಡಿಕೊಂಡು ದಿನದೂಡುತ್ತಿತ್ತು. ಕಾಲಿನಲ್ಲಿನ ಗಾಯ ವಾಸಿಯಾಗದ ಕಾರಣ ಆನೆ ನಿತ್ರಾಣ ಸ್ಥಿತಿಯಲ್ಲಿತ್ತು. 20 ದಿನಗಳ ಹಿಂದಷ್ಟೆ ಬೆಮ್ಮತ್ತಿಯಲ್ಲಿ ಬೈಕ್ ಸವಾರ ಮಜೀದ್ ಎಂಬವರ ಮೇಲೆ ಧಾಳಿ ನಡೆಸಿ ಬೈಕ್ ಜಖಂಗೊಳಿಸಿತ್ತು.
ಕಾರ್ಯಾಚರಣೆ ಸಂದÀರ್ಭ ತಿತಿಮತಿ, ಪೊನ್ನಂಪೇಟೆ ಆರ್ಆರ್ಟಿ ತಂಡ, ಐಎಫ್ಎಸ್ ಅಧಿಕಾರಿ ಶಿವಶಂಕರ್, ಎಸಿಎಫ್ ಶ್ರೀಪತಿ, ಪೊನ್ನಂಪೇಟೆ ಆರ್ಎಫ್ಓ ಗಂಗಾಧರ, ತಿತಿಮತಿ ಆರ್ಆರ್ಟಿ ತಂಡದ ನಾಯಕ ಸಂಜು ಸಂತೋಷ್ ಪಾಲ್ಗೊಂಡಿದ್ದರು. ಪಶುವೈದ್ಯಾಧಿಕಾರಿ ಮುಜಿಬ್ ಚಿಕಿತ್ಸೆ ನೀಡಿದರು.
ಸಂಕೇತ್ ಭೇಟಿ: ಮಾಂiÀiಮುಡಿ ಪಂಚಾಯಿತಿ ವ್ಯಾಪ್ತಿಯ ಧನುಗಾಲ ಗ್ರಾಮ ಬೆಮ್ಮತ್ತಿಯಲ್ಲಿ ಆನೆಯನ್ನು ಸೆರೆಹಿಡಿದ ಸ್ಥಳಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಭೇಟಿ ನೀಡಿ ಆನೆ ಕಾರ್ಯಾಚರಣೆಯ ಮಾಹಿತಿ ಪಡೆದರು. ಕಳೆದ ಕೆಲವು ದಿನಗಳ ಹಿಂದೆ ಈ ಕಾಡಾನೆಯು ಬೈಕ್ ಸವಾರನೊಬ್ಬನ ಮೇಲೆ ಧಾಳಿ ನಡೆಸಿದ ಬಗ್ಗೆ ಎಸಿ ಎಫ್ ಶ್ರೀಪತಿ ಸಂಕೇತ್ ಪೂವಯ್ಯನವರಿಗೆ ಮಾಹಿತಿ ಒದಗಿಸಿದರು. ಮಳೆಯನ್ನು ಲೆಕ್ಕಿಸದೆ ಅರಣ್ಯ ಸಿಬ್ಬಂದಿಗಳು ಕಾಡಾನೆಯನ್ನು ಸೆರೆಹಿಡಿದ ಬಗ್ಗೆ ಸಂಕೇತ್ ಶ್ಲಾಘನೆ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ನಿರಂತರ ಆನೆ ದಾಳಿ ನಡೆಸುತ್ತಿದ್ದು, ಇವುಗಳನ್ನು ನಿಯಂತ್ರಣಕ್ಕೆ ತರಲು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ, ಅರಣ್ಯ ಸಿಬ್ಬಂದಿಗಳಿಗೆ ಹೆಚ್ಚಿನ ಸವಲತ್ತು ವಿತರಿಸುವಂತೆ ಜಿಲ್ಲಾ ಅರಣ್ಯ ಅಧಿಕಾರಿಗಳನ್ನು ಈ ಸಂಧರ್ಭ ಒತ್ತಾಯಿಸಿದರು.
-ಸುದ್ದಿಪುತ್ರ, ಜಗದೀಶ್