ಬೆಂಗಳೂರು, ಜು. 12: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಾ. 5 ರಂದು ಮಂಡಿಸಿದ್ದ 2018-19ನೇ ಸಾಲಿನ ಧನವಿನಿಯೋಗ ವಿಧೇಯಕ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಸಾಲ ಮನ್ನಾ ನಮ್ಮ ಸರ್ಕಾರದ ಬದ್ಧತೆಯಾಗಿತ್ತು. ಅದನ್ನು ಈಡೇರಿಸಲಿದ್ದೇವೆ ಎಂದರು. ಇದೇ ವೇಳೆ ರೈತರ ಚಾಲ್ತಿ ಸಾಲವನ್ನೂ ಮನ್ನಾ ಮಾಡುವದಾಗಿ ಘೋಷಿಸಿದ ಸಿಎಂ, ಒಂದು ಲಕ್ಷ ರೂಪಾಯಿವರೆಗಿನ ಚಾಲ್ತಿ ಬೆಳೆ ಸಾಲ ಮನ್ನಾ ಮಾಡಲಾಗುವದು. ಇದರಿಂದ ಸರ್ಕಾರಕ್ಕೆ 10,700 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದರು. ಈಗಾಗಲೇ ರಾಷ್ಟ್ರೀಕೃತ, ಸಹಕಾರಿ, ಕಿಸಾನ್ ಕಾರ್ಡ್ಗಳ 2 ಲಕ್ಷದವರೆಗಿನ ಸುಸ್ತಿ ಸಾಲವನ್ನು ಮನ್ನಾ ಮಾಡಲಾಗಿದ್ದು, ಚಾಲ್ತಿ ಸಾಲದ ರೈತರಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಈಗ ರೈತರ ಚಾಲ್ತಿ ಸಾಲವನ್ನೂ ಮನ್ನಾ ಮಾಡುತ್ತಿರುವದಾಗಿ ಸಿಎಂ ಹೇಳಿದ್ದಾರೆ. ಆದರೆ ಇದು ಸಹಕಾರಿ ವಲಯದ ಸಾಲಗಳಿಗೆ ಮಾತ್ರವೇ ಅನ್ವಯಿಸಲಿದ್ದು, ರಾಷ್ಟ್ರೀಕೃತ ಬ್ಯಾಂಕು ಅಥವಾ (ಮೊದಲ ಪುಟದಿಂದ) ಕಿಸಾನ್ ಕಾರ್ಡ್ಗೆ ಅನ್ವಯಿಸುವದಿಲ್ಲ. ಅನ್ನಭಾಗ್ಯ ಯೋಜನೆಯಲ್ಲಿ ನೀಡಲಾಗುತ್ತಿರುವ ಅಕ್ಕಿಯ ಪ್ರಮಾಣವನ್ನು 7 ಕೆ.ಜಿ.ಯೇ ಮುಂದುವರೆಸಿಕೊಂಡು ಹೋಗುವದಾಗಿ ಸಿಎಂ ತಿಳಿಸಿದ್ದಾರೆ. ಆದರೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವನ್ನು ಹಿಂಪಡೆಯುವದಿಲ್ಲ. ಆರ್ಥಿಕ ಕೊರತೆ ಇರುವದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಬಸ್ಪಾಸ್ ಒದಗಿಸಲು ಸಾಧ್ಯವಿಲ್ಲ ಎಂದಿರುವ ಕುಮಾರಸ್ವಾಮಿ, ಜೀವ ಬೇಕಾದರೂ ಕೊಟ್ಟು ರೈತರ ಪ್ರಾಣ ಕಾಪಾಡುತ್ತೇನೆ ಎಂದರು.