ಮಡಿಕೇರಿ, ಜು. 12: ಮಡಿಕೇರಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಕೆ.ಕೆ. ದಾಮೋದರ್ ಮತ್ತು ಕಾರ್ಯದರ್ಶಿಯಾಗಿ ಪಟ್ಟಮಂಡ ಪಿ. ಸೋಮಣ್ಣ ಅಧಿಕಾರ ವಹಿಸಿಕೊಂಡಿದ್ದಾರೆ. ನಗರದ ಕೊಡವ ಸಮಾಜದಲ್ಲಿ ಆಯೋಜಿತ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ನೂತನ ಆಡಳಿತ ಮಂಡಳಿಯ ನಿರ್ದೇಶಕರಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದ ಲಯನ್ಸ್ ಜಿಲ್ಲೆ 317 -ಡಿ. ಯ ಎರಡನೇ ಉಪ ರಾಜ್ಯಪಾಲ ಡಾ. ಗೀತಾ ಪ್ರಕಾಶ್ ಎ. ನೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮುನ್ನುಗ್ಗಿರುವ ಲಯನ್ಸ್ ಸಂಸ್ಥೆಯಲ್ಲಿ ಮಹಿಳಾ ಸದಸ್ಯೆಯರ ಸೇರ್ಪಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿಯೇ ಲಯನ್ಸ್ ಕ್ಲಬ್‍ನ ಅಂತರರಾಷ್ಟ್ರೀಯ ಅಧ್ಯಕ್ಷೆಯಾಗಿ ಐರ್ಲೆಂಡ್‍ನ ಗುಡ್ರನ್ ಅಧಿಕಾರ ವಹಿಸಿಕೊಂಡಿದ್ದು ಪುರುಷ - ಮಹಿಳೆ ಎಂಬ ತಾರತಮ್ಯವಿಲ್ಲದೇ ಲಯನ್ಸ್ ಕ್ಲಬ್ ಎಲ್ಲರಿಗೂ ಸಮಾನ ಅವಕಾಶವನ್ನು ನೀಡಿದೆ ಎಂದರು. ಲಯನ್ಸ್ ಜಿಲ್ಲೆ 317 ಡಿ. ನಲ್ಲಿ ಪ್ರಸ್ತುತ 38015 ಸದಸ್ಯರಿದ್ದು, ಕಳೆದೊಂದು ವರ್ಷದಲ್ಲಿಯೇ 1028 ಸದಸ್ಯರು ಸೇರ್ಪಡೆಯಾಗಿದ್ದು, ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಯನ್ನು ಸೇರುತ್ತಿರುವದು ಉತ್ತಮ ಬೆಳವಣಿಗೆ ಎಂದೂ ಡಾ. ಗೀತಾ ಪ್ರಕಾಶ್ ಶ್ಲಾಘಿಸಿದರು.
ಲಯನ್ಸ್ ಕ್ಲಬ್‍ನ 54ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಕೆ.ಕೆ. ದಾಮೋದರ್ ಮುಂದಿನ ಒಂದು ವರ್ಷ ವಿವಿಧ ಕಾರ್ಯಯೋಜನೆಗಳ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಜನರಿಗೆ ಪ್ರಯೋಜನಕಾರಿಯಾಗುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದಾಗಿ ಹೇಳಿದರು. ಮಡಿಕೇರಿಯ ಲಯನ್ಸ್ ಕ್ಲಬ್ ಕಟ್ಟಡದ ಎರಡನೇ ಮಹಡಿ ನಿರ್ಮಾಣ ಕಾರ್ಯ ಕೂಡ ಹಮ್ಮಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಸಮಾರಂಭದಲ್ಲಿ ಅನಿತಾ ಸೋಮಯ್ಯ, ದಂಬೆಕೋಡಿ ಭೀಷ್ಮ ಮಾದಪ್ಪ, ಕೆ.ಸಿ. ನಟರಾಜ್ ಅವರು ಮಡಿಕೇರಿ ಲಯನ್ಸ್ ಕ್ಲಬ್ ಸದಸ್ಯರಾಗಿ ಸೇರ್ಪಡೆಗೊಂಡರು. ವೇದಿಕೆಯಲ್ಲಿ ನಿರ್ಗಮಿತ ಅಧ್ಯಕ್ಷ ಕೆ.ಎ. ಬೊಳ್ಳಪ್ಪ, ಕವಿತಾ ಬೊಳ್ಳಪ್ಪ, ಲಯನೆಸ್ ನೂತನ ಅಧ್ಯಕ್ಷೆ ವನಜಾ ದಾಮೋದರ್, ರತ್ನಾ ಚರ್ಮಣ, ಕೆ. ಮಧುಕರ್, ವಲಯಾಧ್ಯಕ್ಷರಾದ ಸಿಮ್ಸ್ ಮಂದಣ್ಣ, ಮಹೇಶ್ ಉಪಸ್ಥಿತರಿದ್ದರು.
ಪ್ರಮುಖರಾದ ಗೀತಾ ಮಧುಕರ್, ಬಿ.ಸಿ. ನಂಜಪ್ಪ, ವಿಲ್ಮಾ ನಂಜಪ್ಪ, ಅಂಬೆಕಲ್ ನವೀನ್ ಕುಶಾಲಪ್ಪ, ಬಾಬುಚಂದ್ರ ಉಳ್ಳಾಗಡ್ಡಿ, ಮಧುಕರ್ ಶೇಠ್, ಎಂ.ಎ. ನಿರಂಜನ್, ಬಿ.ವಿ. ಮೋಹನ್ ದಾಸ್, ದಿನೇಶ್ ರಾವ್, ಜೆ.ವಿ. ಕೋಠಿ, ಮುರುಗೇಶ್ ಸೇರಿದಂತೆ ಜಿಲ್ಲೆಯ ವಿವಿಧ ಲಯನ್ಸ್ ಕ್ಲಬ್‍ಗಳ ಸದಸ್ಯರು ಪಾಲ್ಗೊಂಡಿದ್ದರು.