ಮಡಿಕೇರಿ, ಜು. 12: ಕೃಷಿ ಪ್ರಧಾನವಾಗಿರುವ ಕೊಡಗು ಜಿಲ್ಲೆಯ ಬಹುತೇಕ ಆರ್ಥಿಕತೆ ಕೃಷಿ ಫಸಲನ್ನೇ ಅವಲಂಬಿಸಿವೆ. ಕಾಫಿ ಹಾಗೂ ಭತ್ತ ಪ್ರಮುಖ ಬೆಳೆಯಾದರೂ ಇತ್ತೀಚಿನ ವರ್ಷಗಳಲ್ಲಿ ವಾತಾವರಣದ ಏರುಪೇರು - ಕಾರ್ಮಿಕರ ಸಮಸ್ಯೆ, ವನ್ಯಪ್ರಾಣಿಗಳ ಉಪಟಳ ಸೇರಿದಂತೆ ಹತ್ತು ಹಲವು ಕಾರಣಗಳಿಂದಾಗಿ ರೈತರು, ಬೆಳೆಗಾರರು ಕೇವಲ ಈ ಎರಡು ಬೆಳೆಗಳನ್ನು ಮಾತ್ರ ಅವಲಂಬಿಸದೆ ಹಲವು ಮಿಶ್ರ ಬೆಳೆಗಳನ್ನು ಬೆಳೆದು ಬದುಕು ಕಂಡು ಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ ಈ ಪ್ರಯತ್ನಗಳಿಗೆ ವಾತಾವರಣದ ಅಸಹಜತೆಯಿಂದಾಗಿ ಪ್ರಯತ್ನ ನಡೆಸಿದರೂ ಫಸಲು ಕೈಗೆ ಸಿಗದೆ ವರ್ಷಂಪ್ರತಿ ರೈತರು ಸಮಸ್ಯೆಗಳನ್ನೇ ಎದುರಿಸುವಂತಾಗಿದೆ .ಈ ಹಿಂದೆ ಬರಗಾಲದಂತಹ ಪರಿಸ್ಥಿತಿಗೆ ಒಳಗಾಗಿದ್ದ ಹೆಚ್ಚು ಮಳೆಯಾಗುವ ಪ್ರದೇಶವಾದ ಕೊಡಗು ಜಿಲ್ಲೆಯನ್ನು ಸರಕಾರವೇ ಬರಪೀಡಿತ ಜಿಲ್ಲೆಯೆಂದು ಘೋಷಿಸಿತ್ತು. ಈ ಸನ್ನಿವೇಶದಿಂದ ವಿವಿಧ ಬೆಳೆಗಳ ಮೇಲಾಗಿರುವ ವ್ಯತಿರಿಕ್ತ ಪರಿಣಾಮ ಗಳನ್ನು ಸುಧಾರಿಸಿ ಕೊಳ್ಳುವಲ್ಲಿ ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಈ ವರ್ಷ ಅತಿವೃಷ್ಟಿಯ ಸಮಸ್ಯೆಯನ್ನು ಎದುರಿಸುವಂತಾಗಿದೆ.ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಾರ್ಷಿಕವಾಗಿ ಸುರಿಯುವ ಮಳೆ ಈಗಾಗಲೇ ಕೇವಲ ಆರು ತಿಂಗಳ ಅವಧಿಯಲ್ಲೇ ಸುರಿದಿದೆ. ಮೇ ತಿಂಗಳಿನಲ್ಲಿಯೂ ಅಧಿಕ ಮಳೆ ಸುರಿದಿದ್ದು, ಒಂದೆಡೆಯಾದರೆ ಜೂನ್ ಎರಡನೇ ವಾರದಿಂದ ಆರಂಭಗೊಂಡ ಮುಂಗಾರು ಮಳೆ
(ಮೊದಲ ಪುಟದಿಂದ) ಪ್ರಸಕ್ತ ವರ್ಷ ತನ್ನ ಪ್ರತಾಪವನ್ನು ತೋರುತ್ತಿದ್ದು, ಕೃಷಿ ಫಸಲನ್ನು ಅವಲಂಬಿಸಿರುವವರನ್ನು ಕಂಗೆಡಿಸುವಂತೆ ಮಾಡಿದೆ. ಆರಂಭದಲ್ಲಿ ಅಬ್ಬರ ತೋರಿ ತುಸು ವಿರಾಮ ನೀಡಿದಂತಿದ್ದ ಮುಂಗಾರು ಮಳೆ ಇದೀಗ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದು, ವಾಯು - ವರುಣನ ಆರ್ಭಟಕ್ಕೆ ಇಡೀ ಜಿಲ್ಲೆ ತತ್ತರಿಸುವಂತಾಗಿದೆ.
ಹಲವು ಮಾನವ ಪ್ರಾಣಹಾನಿ, ಜಾನುವಾರು ಸಾವು ಪ್ರಕರಣಗಳಲ್ಲದೆ ಸಾರ್ವಜನಿಕ ಆಸ್ತಿಪಾಸ್ತಿಗೂ ಕೋಟಿಗಟ್ಟಲೆ ನಷ್ಟ ಸಂಭವಿಸಿದೆ. ಮಳೆಯ ತೀವ್ರತೆಯಿಂದಾಗಿ ಶಾಲಾ - ಕಾಲೇಜುಗಳಿಗೆ ಈಗಾಗಲೇ ಹಲವಾರು ದಿನಗಳ ರಜೆ ಘೋಷಿಸಲ್ಪಡಬೇಕಾದ ಅನಿವಾರ್ಯತೆಯೂ ಈ ವರ್ಷದ ಮುಂಗಾರಿನ ಅಬ್ಬರಕ್ಕೆ ಸಾಕ್ಷಿಯಾಗಿದೆ. ರಸ್ತೆ, ಸೇತುವೆ ಕುಸಿತ, ನೂರಕ್ಕೂ ಅಧಿಕ ಮನೆಗಳು ಜಖಂಗೊಂಡಿರುವದು, ಅಂತರರಾಜ್ಯ ರಸ್ತೆ ಸಂಪರ್ಕ ಕಡಿತ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ವ್ಯಾಪಕ ನಷ್ಟ, ವಾಹನಗಳ ಮೇಲೆ ಮರ, ಬರೆಗಳು ಬಿದ್ದು ಉಂಟಾಗಿರುವ ಹಾನಿಯಿಂದಾಗಿ ಕೊಡಗಿನ ಜನರು ತತ್ತರಿಸಿದ್ದಾರೆ. ಜಲಾವೃತವಾಗುವ ಪ್ರದೇಶಗಳು ಹಲವು ಬಾರಿ ಸಂಪೂರ್ಣ ಜಲಾವೃತಗೊಂಡಿದ್ದಲ್ಲದೆ, ನೀರಿನ ಹರಿವಿನ ಹೆಚ್ಚಳದಿಂದಾಗಿ ಜಿಲ್ಲೆಯ ಜನ ಆತಂಕದ ಛಾಯೆಯನ್ನು ಅನುಭವಿಸುತ್ತಿದ್ದು, ಇನ್ನೂ ಇದು ಮರೆಯಾಗಿಲ್ಲ.
ಸರಾಸರಿ 40.97 ಇಂಚು ಹೆಚ್ಚು ಮಳೆ
ಕಳೆದ ವರ್ಷ ಜನವರಿಯಿಂದ ಜುಲೈ 12ರ ತನಕ ಜಿಲ್ಲೆಯಲ್ಲಿ ಸುರಿದಿದ್ದ ಮಳೆಯ ಪ್ರಮಾಣಕ್ಕೆ ಹೋಲಿಸಿದರೆ, ಈ ಬಾರಿ ಇದೇ ಅವಧಿಯಲ್ಲಿ ದಾಖಲೆಯ ಮಳೆಯಾಗಿದೆ. ಈಗಾಗಲೇ ಕಳೆದ ಸಾಲಿಗಿಂತ ಈ ಬಾರಿ ಜಿಲ್ಲೆಯಲ್ಲಿ ಸರಾಸರಿ 40.97 ಇಂಚಿನಷ್ಟು ಅಧಿಕ ಮಳೆ ಬಿದ್ದಿದೆ.ಕಳೆದ ವರ್ಷ ಜನವರಿಯಿಂದ ಜುಲೈ 12ರ ತನಕ ಜಿಲ್ಲೆಯಲ್ಲಿ 32.89 ಇಂಚು ಮಳೆಯಾಗಿದ್ದರೆ, ಈ ಬಾರಿ 73.86 ಇಂಚು ಮಳೆ ಸುರಿದಿದೆ. ತಾಲೂಕುವಾರು ಸರಾಸರಿ ತೆಗೆದುಕೊಂಡಲ್ಲೂ ಈ ಬಾರಿ 30 ರಿಂದ 50 ಇಂಚಿನಷ್ಟು ಅಧಿಕ ಮಳೆ ಸುರಿದಿದ್ದು, ಇನ್ನೂ ಮಳೆಗಾಲದ ಅವಧಿ ಹೆಚ್ಚಿರುವದು ಮುಂದೇನು ಎಂಬ ಪ್ರಶ್ನೆ ಮೂಡಿಸಿದೆ.
ಮಡಿಕೇರಿ ತಾಲೂಕಿನಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ 45.25 ಇಂಚು ಮಳೆ ಬಿದ್ದಿದ್ದು, ಈ ವರ್ಷ ಈಗಾಗಲೇ 101.44 ಇಂಚಿನಷ್ಟು ಮಳೆಯಾಗುವ ಮೂಲಕ ತಾಲೂಕಿನಲ್ಲಿ 56.19 ಇಂಚು ಅಧಿಕ ಮಳೆ ದಾಖಲಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ 28.90 ಇಂಚು ಮಳೆಯಾಗಿತ್ತು. ಈ ಬಾರಿ ಸರಾಸರಿ 64.29 ಇಂಚು ಮಳೆಯೊಂದಿಗೆ 28.90 ಇಂಚು ಹೆಚ್ಚು ಮಳೆ ಸುರಿದಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಈ ಅವಧಿಯವರೆಗೆ 24.54 ಇಂಚು ಮಳೆ ಬಿದ್ದಿದ್ದರೆ, ಪ್ರಸಕ್ತ ಸಾಲಿನಲ್ಲಿ ಈಗಾಗಲೇ 55.85 ಇಂಚು ಮಳೆ ಸುರಿಯುವದರೊಂದಿಗೆ 31 ಇಂಚಿನಷ್ಟು ಅಧಿಕ ಮಳೆಯಾಗಿರುವದು ಜಿಲ್ಲಾಡಳಿತದ ಅಂಕಿ - ಅಂಶದಿಂದ ತಿಳಿದು ಬಂದಿದೆ.
ಇನ್ನು ಈ ಮೂರು ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಿದೆ. ವೀರಾಜಪೇಟೆ ತಾಲೂಕಿನ ಬಿ. ಶೆಟ್ಟಿಗೇರಿಯ ಕುರುಡಪೊಳೆ ವ್ಯಾಪ್ತಿಯಲ್ಲಿ ಕಳೆದ ಇಡೀ ವರ್ಷದಲ್ಲಿ 105 ಇಂಚು ಮಳೆ ದಾಖಲಾಗಿತ್ತು. ಆದರೆ, ಈ ಬಾರಿ ಜುಲೈ 12ರ ವೇಳೆಗಾಗಲೇ ಈ ಪ್ರಮಾಣ 98.43 ಇಂಚು ದಾಖಲಾಗಿರುವದಾಗಿ ಅಲ್ಲಿನ ನಿವಾಸಿ, ಕಾಳೇಂಗಡ ತರುಣ್ ತಮ್ಮಯ್ಯ ಅವರು ಮಾಹಿತಿ ನೀಡಿದ್ದಾರೆ. ಅರಣ್ಯದ ಅಂಚಿನ ಭಾಗ, ಬೆಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ. ವ್ಯಾಪಕ ಮಳೆಯಿಂದಾಗಿ ಕಾಫಿ ಸೇರಿದಂತೆ ವಿವಿಧ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಕಾಫಿ ಉದುರುವಿಕೆ ಹೆಚ್ಚಾಗುತ್ತಿರುವದು ಮಾತ್ರವಲ್ಲದೆ ಮಣ್ಣು ತೇವಾಂಶದಿಂದ ಕೂಡಿರುವದರಿಂದ ಮುಂದಿನ ದಿನಗಳು ಕೃಷಿ ಫಸಲನ್ನು ಅವಲಂಭಿಸಿದ ರೈತರಿಗೆ ಭಾರೀ ಹೊಡೆತವನ್ನೇ ನೀಡಲಿದೆ ಎಂದು ಹಲವಾರು ಅನುಭವಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧಾರಾಕಾರ ಮಳೆ ಒಂದೆಡೆಯಾದರೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತೋಟಗಳಲ್ಲೇ ಬೀಡುಬಿಟ್ಟಿರುವ ಕಾಡಾನೆಗಳ ಉಪಟಳದಿಂದಾಗಿ ಬೆಳೆಗಾರರು ಮತ್ತೊಂದು ಸಮಸ್ಯೆಯನ್ನೂ ಎದುರಿಸುವಂತಾಗಿದೆ.
ಬರಗಾಲದಿಂದಾಗಿ ಎಷ್ಟು ಸಮಸ್ಯೆ ಉಂಟಾಗುತ್ತದೆಯೋ ಅತಿವೃಷ್ಟಿಯಿಂದಲೂ ಇದಕ್ಕೆ ಮಿಗಿಲಾದ ದುಷ್ಪರಿಣಾಮಗಳು ಎದುರಾಗುತ್ತವೆ. ಎಲ್ಲೆಲ್ಲೂ ಹಸಿರು ಕಂಡು ಬಂದರೂ ಫಸಲು ಸಿಗದಿದ್ದಲ್ಲಿ ಬದುಕು ಸಾಗಿಸುವದು ದುಸ್ತರವಾಗಲಿದೆ. ಈ ಬಗ್ಗೆ ಸರಕಾರ ವಿಶೇಷ ಗಮನ ಹರಿಸುವಂತಾಗಬೇಕು ಎಂಬದು ಕೃಷಿಕರ ಒತ್ತಾಯವಾಗಿದೆ.