ಸೋಮವಾರಪೇಟೆ,ಜು.12: ಕಳೆದ 2013ರ ಸೆಪ್ಟೆಂಬರ್ 25ರಂದು ನಡೆದ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿ ಈರ್ವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನಿಗೆ ಇಲ್ಲಿನ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಆರೋಪಿ ಚಾಲಕ ಸಿದ್ದಲಿಂಗಪುರ ಗ್ರಾಮದ ಕೆ.ಎನ್. ವಿಜಯಕುಮಾರ್ ಅವರಿಗೆ ಎರಡು ವರ್ಷ ಸಜೆ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಧೀಶರಾದ ಎಸ್.ಎಸ್. ಭರತ್ ಅವರು ಆರೋಪಿಗೆ ಕಲಂ 279 ರಲ್ಲಿ ಒಂದು ಸಾವಿರ ದಂಡ, ತಪ್ಪಿದಲ್ಲಿ ಮೂರು ತಿಂಗಳು ಸಜೆ, ಕಲಂ 338ರಲ್ಲಿ ಒಂದು ಸಾವಿರ ದಂಡ, ತಪ್ಪಿದಲ್ಲಿ ಮೂರು ತಿಂಗಳು ಸಜೆ, 304 ಎ.ರಲ್ಲಿ 2ವರ್ಷಗಳ ಸಜೆ ಹಾಗೂ 9 ಸಾವಿರ ದಂಡ ಮತ್ತು 187ರ ಐಎಂಎ ಆಕ್ಟ್‍ನಲ್ಲಿ ಒಂದು ಸಾವಿರ ದಂಡ ಹಾಗೂ ಮೂರು ತಿಂಗಳ ಸಜೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಕಳೆದ 2013ರ ಸೆಪ್ಟೆಂಬರ್ 25ರಂದು ಪಟ್ಟಣದ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ರಾತ್ರಿ 8.30ಕ್ಕೆ ಮದರಸಾ ದಿಂದ ತೆರಳುತ್ತಿದ್ದ ಮಹಮ್ಮದ್ ಖಾಲಿದ್, ಆಯಿಷಾ ಮತ್ತು ರೆಹಮತ್ ಅವರುಗಳಿಗೆ ಹಿಂಬದಿಯಿಂದ ಆಗಮಿಸಿದ ಖಾಸಗಿ ಬಸ್, ಇಲ್ಲಿನ ಕಾವೇರಿ ಪ್ರಾವಿಷನ್ ಸ್ಟೋರ್ ಮುಂಭಾಗ ಡಿಕ್ಕಿಪಡಿಸಿದ್ದು, ಮೂವರು ಮಕ್ಕಳು ತೀವ್ರಗಾಯಗೊಂಡಿದ್ದರು.
ತಕ್ಷಣ ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಅಷ್ಟರಲ್ಲಾಗಲೇ ಮಹಮ್ಮದ್ ಖಾಲಿದ್ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದರು. ಉಳಿದ ಈರ್ವರು ವಿದ್ಯಾರ್ಥಿಗಳನ್ನು ಮೈಸೂರು ಮತ್ತು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ನಂತರ ಗುಣಮುಖರಾಗಿದ್ದರು.