ಮಡಿಕೇರಿ, ಜು. 12: ಆರ್‍ಟಿಓ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ನಾಗರಿಕರು ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆಯಿತು.
ಮಡಿಕೇರಿಗೆ ನಿಯೋಜನೆಗೊಂಡಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಹುಣಸೂರು, ಮಂಡ್ಯದ ಆರ್‍ಟಿಓ ಕಚೇರಿಯ ಜವಾಬ್ದಾರಿಯನ್ನು ಕೂಡ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ಆರ್‍ಟಿಓ ಕಚೇರಿಗೆ ಅಧಿಕಾರಿ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದರ ಪರಿಣಾಮವಾಗಿ ನೂರಕ್ಕೂ ಅಧಿಕ ಸಾರ್ವಜನಿಕರ ಕಡತಗಳು ವಿಲೇವಾರಿಯಾಗದೇ ಹಾಗೇ ಉಳಿದುಕೊಂಡಿದೆ. ಕೆಲದಿನಗಳ ಹಿಂದೆ ಆರ್‍ಟಿಓ ಕಚೇರಿಗೆ ಕರೆ ಮಾಡಿದ ಸಂದರ್ಭ ಇಂದು ಅಧಿಕಾರಿ ಕಚೇರಿಯಲ್ಲಿರುತ್ತಾರೆ ಎಂಬ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ವಿವಿಧೆಡೆಗಳಿಂದ ನಾಗರಿಕರು ಆರ್‍ಟಿಓ ಕಚೇರಿಗೆ ತಮ್ಮ ಕೆಲಸಗಳಿಗಾಗಿ ಬಂದಿದ್ದಾರೆ. ಆದರೆ ಇಂದು ಕೂಡ ಆರ್‍ಟಿಓ ಅವರು ಲಭ್ಯವಾಗಲಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಕ್ರಮಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಆರೋಪ
ಸಾರಿಗೆ ಇಲಾಖೆ ಅಧಿಕಾರಿ ಕಚೇರಿಗೆ ಬರಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಅವರ ಕೆಳಗಿರುವ ಅಧಿಕಾರಿಗೆ ಅಧಿಕಾರದ ಜವಾಬ್ದಾರಿ ವಹಿಸಿದರೆ, ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಅಧಿಕಾರಿಯ ಸಹಿ ಇಲ್ಲದೆ ಕಡತಗಳು ವಿಲೇವಾರಿಯಾಗುತ್ತಿಲ್ಲ. ಇದರಿಂದ ಪ್ರವಾಸಿ ಬಾಡಿಗೆ ವಾಹನಗಳಿಗೆ ಭಾರೀ ತೊಂದರೆಯಾಗುತ್ತಿದೆ ಎಂದು ಕೊಡಗು ಜಿಲ್ಲಾ ಪ್ರವಾಸಿ ವಾಹನ ಮಾಲೀಕರ ಸಂಘದವರು ಆರೋಪಿಸಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ, ಸಮಸ್ಯೆ ಬಗೆಹರಿಸಬೇಕಿದೆ. ಇಲ್ಲವಾದಲ್ಲಿ ಸಂಘದ ಮೂಲಕ ಪ್ರತಿಭಟನೆ ನಡೆಸಲಾಗುವದೆಂದು ಸಂಘದ ಅಧ್ಯಕ್ಷ ಕುಳಿಯಕಂಡ ಸಂಪತ್, ಉಪಾಧ್ಯಕ್ಷ ರಫೀಕ್, ಕಾರ್ಯದರ್ಶಿ ಪಿ.ಸಿ. ರಾಜು ಅವರುಗಳು ತಿಳಿಸಿದ್ದಾರೆ.