ಭಾಗಮಂಡಲ, ಜು. 12: ಸುವರ್ಣ ಮಹೋತ್ಸವ ಆಚರಿಸಿದ್ದ ಸಹಸ್ರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದ ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜನ್ನು ಆದಿಚುಂಚನಗಿರಿ ಮಹಾಸಭಾಕ್ಕೆ ಹಸ್ತಾಂತರಿಸಲು ಇಂದು ಭಾಗಮಂಡಲದಲ್ಲಿ ನಡೆದ ಆಡಳಿತ ಮಂಡಳಿ ಸರ್ವ ಸದಸ್ಯರ ಸಭೆಯಲ್ಲಿ ನಿರ್ಧರಿಸಲಾಯಿತು.
ಕಳೆದ ಹಲವು ವರ್ಷಗಳಿಂದ ಶಾಲೆಗೆ ಮಕ್ಕಳ ಸಂಖ್ಯೆ ಇಳಿಕೆಗೊಂಡಿದ್ದು ಸಂಸ್ಥೆಯ ಕಟ್ಟಡ ದುರಸ್ತಿಯಲ್ಲಿದ್ದು, ದುರಸ್ತಿ ಮಾಡಲು ಮತ್ತು ಸಂಸ್ಥೆ ನಡೆಸಲು ಕೋಟ್ಯಾಂತರ ರೂಪಾಯಿ ಹಣ ಅಗತ್ಯವಿರುವ ಹಿನ್ನೆಲೆ ಶಾಲೆಯನ್ನು ಹಸ್ತಾಂತರಿಸಲು ಸಂಸ್ಥೆಯ ಅಧ್ಯಕ್ಷ ಸತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಈ ಸಂದರ್ಭ ಮಾತನಾಡಿದ ಮಡಿಕೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗುರುರಾಜ್, ಸಂಸ್ಥೆಯ ಹಸ್ತಾಂತರದಿಂದ ಮಹಾಸಂಸ್ಥಾನದ ಉನ್ನತ ಮಟ್ಟದ ಶಿಕ್ಷಣ ನಾಡಿನ ಜನತೆಗೆ ಸಿಗಲಿದೆ. ರಾಷ್ಟ್ರಮಟ್ಟದಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯವಾಗಿ 40-50 ಮಂದಿಗೆ ಉದ್ಯೋಗ ಸಿಗಲಿದೆ. ಜಿಲ್ಲೆಯ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಜಾಸ್ತಿಯಾಗಿದೆ. ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಸಂಸ್ಥೆಯ ಹಸ್ತಾಂತರದಿಂದ ಕಡಿಮೆ ಖರ್ಚಿನಲ್ಲಿ ಉನ್ನತ ಶಿಕ್ಷಣ ಸಿಗಲಿದೆ ಎಂದರು. ಇನ್ನೋರ್ವ ಅತಿಥಿ ನಾಗರಾಜ್ ಮಾತನಾಡಿ, ವ್ಯಕ್ತಿ ಪ್ರತಿಷ್ಠೆಗಾಗಿ ಹಸ್ತಾಂತರಕ್ಕೆ ತಡೆ ಮಾಡದೆ ಇದರಿಂದ ಸ್ಥಳೀಯರಿಗೆ ಉತ್ತಮ ಅವಕಾಶ ಲಭಿಸಲಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಡಾ. ದಯಾನಂದ್ ಮಾತನಾಡಿ, ಇಂದು ಇಂಗ್ಲಿಷ್ ಅನಿವಾರ್ಯವಾಗಿದೆ. ಕನ್ನಡ ಮಾಧ್ಯಮಕ್ಕೆ ಮಕ್ಕಳ ಸಂಖ್ಯೆ ಕೊರತೆಯಾಗಿದೆ. ಮಠಕ್ಕೆ ಹಸ್ತಾಂತರಿಸಿದಲ್ಲಿ ಎಲ್ಲಾ ಮೂಲಭೂತ ಸೌಲಭ್ಯವುಳ್ಳ ಶಾಲೆಯಾಗಲಿದೆ. ಇತ್ತೀಚೆಗೆ ಅನುದಾನಿತ ಶಾಲೆಗಳಿಗೆ ಸರ್ಕಾರದಿಂದ ಸ್ಪಂದನ ಕಡಿಮೆಯಾಗಿದೆ. ಭಾಗಮಂಡಲ ಮಳೆಯಿಂದಾಗಿ ಇಲ್ಲಿನ ಜನರ ಆರ್ಥಿಕ ಸ್ಥಿತಿ ಕಡಿಮೆ ಇದ್ದು, ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಉತ್ತಮ ಶಿಕ್ಷಣ ಸಿಗಲಿದೆ. ಕಾವೇರಿ ಕ್ಷೇತ್ರ ಇಲ್ಲವೆಂದಾದಲ್ಲಿ ಭಾಗಮಂಡಲ ಇರುತ್ತಿರಲಿಲ್ಲ. ಈ ಭಾಗದ ಅಭಿವೃದ್ಧಿ ಹೆಚ್ಚಾಗಲಿದೆ. ಅಲ್ಲದೆ ಆದಿಚುಂಚನಗಿರಿ ಸಂಸ್ಥಾನಕ್ಕೆ ಈ ವ್ಯಾಪ್ತಿಯಲ್ಲಿ ಮೆಡಿಕಲ್ ಕಾಲೇಜು ನಡೆಸುವ ಚಿಂತನೆ ಇದೆ. ಗುಣಾತ್ಮಕ ಶಿಕ್ಷಣ ಸಿಗಲಿದ್ದು ಒಮ್ಮತದ ನಿರ್ಧಾರ ಕೈಗೊಳ್ಳಬೇಕು ಎಂದರು. ನಾರಾಯಣಾಚಾರ್ ಮಾತನಾಡಿ ಕಾಲೇಜು ಮಾತ್ರವಲ್ಲ ಕ್ಷೇತ್ರಕ್ಕೆ ಭಕ್ತಾದಿಗಳು ಹೆಚ್ಚಾಗಲಿದ್ದಾರೆ. ಅಭಿವೃದ್ಧಿಯೊಂದಿಗೆ ವೃದ್ಧಾಶ್ರಮ, ಅನಾಥಾಶ್ರಮ ನಡೆಸಲು ಚಿಂತನೆ ಹೊಂದಿದ್ದಾರೆ ಎಂದರು. ನಿರ್ದೇಶಕ ಮೊಟ್ಟನ ರವಿಕುಮಾರ್, ಕೊಡಗಿನಲ್ಲಿ ಬಹಳಷ್ಟು ಸಂಸ್ಥೆಗಳು ಮಠದ ವತಿಯಿಂದ ನಡೆಯುತ್ತಿದ್ದು ಉತ್ತಮ ರೀತಿಯಿಂದ ನಡೆಯುವದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಸುನಿಲ್‍ಪತ್ರಾವೊ, ಕುಯ್ಯಮುಡಿ ಮನೋಜ್, ಕುದುಪಜೆ ಪಳಂಗಪ್ಪ, ಸೂರ್ತಲೆ ಸೋಮಣ್ಣ, ದೇವಂಗೋಡಿ ಹರ್ಷ, ದಂಡಿನ ಜಯಂತ್, ಕುದುಪಜೆ ಪ್ರಕಾಶ್ ಮಾತನಾಡಿ, ಶಾಲೆಗೆ ಇರುವ ಹದಿನಾರು ಏಕರೆ ಜಾಗದಲ್ಲಿ ಕಾವೇರಿ ವಿದ್ಯಾಸಂಸ್ಥೆ ಹೆಸರಿನಲ್ಲಿ ಎರಡು ಏಕರೆ ಜಾಗ ಉಳಿಸಿಕೊಂಡು ಸಂಸ್ಥೆಯ ಹೆಸರಿನಲ್ಲಿ ಇರುವದು ಒಳಿತು. ಹಳೆ ವಿದ್ಯಾರ್ಥಿ ಸಂಘವನ್ನು ರಚಿಸಿ ಬಾಕಿ ಉಳಿದ ಜಾಗವನ್ನು ಹಸ್ತಾಂತರಿಸಿ ಎಂದು ಸಲಹೆ ನೀಡಿದರು. ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಮಾತನಾಡಿ, ಜಾಗವನ್ನು ಎಷ್ಟು ಹಸ್ತಾಂತರಿಸಬೇಕು ಎಷ್ಟು ಉಳಿಸಿಕೊಳ್ಳಬೇಕು ಎಂದು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗುವದು. ಮಹಾ ಸಂಸ್ಥಾನಕ್ಕೆ ನೀಡುವ ಒಪ್ಪಿಗೆ ಮಹಾಸಭೆಯಲ್ಲಿ ಬೇಕಾಗಿದೆ, ಮುಂದಿನ ದಿನಗಳಲ್ಲಿ ಷರತ್ತುಗಳೊಂದಿಗೆ ನೀಡಲಾಗುವದು. ಭಾಗಮಂಡಲ ವ್ಯಾಪ್ತಿಯ ಮಕ್ಕಳಿಗೆ ಪ್ರಯೋಜನವಾಗಲಿದ್ದು ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲು ಮಾತುಕತೆ ನಡೆಸಲಾಗುವದು ಎಂದರು. ಸಂಸ್ಥೆಯ ಉಪಾಧ್ಯಕ್ಷ ಹ್ಯಾರೀಸ್, ನಂಜುಂಡಪ್ಪ, ಪ್ರಾಂಶುಪಾಲೆ ಜಾನಕಿ, ಮುಖ್ಯ ಶಿಕ್ಷಕಿ ಪೂರ್ಣಿಮಾ, ನಿರ್ದೇಶಕರಾದ ಪಾಂಡಿ ತಿಮ್ಮಯ್ಯ, ಮತ್ತಾರಿ ರಾಜ, ನಿಡ್ಯಮಲೆ ರವೀಂದ್ರ ಉಪಸ್ಥಿತರಿದ್ದರು.