ಮಡಿಕೇರಿ, ಜು. 12: ರಾಷ್ಟ್ರದಲ್ಲೂ ಗಮನ ಸೆಳೆದಿದ್ದ ಕೊಡಗು ಮೂಲದ ಡಿವೈಎಸ್‍ಪಿ ಎಂ.ಕೆ. ಗಣಪತಿ ಅವರ ಸಂಶಯಾಸ್ಪದ ಸಾವಿನ ಪ್ರಕರಣದ ತನಿಖೆಗೆ ಇನ್ನೂ ಪೂರ್ಣ ವಿರಾಮ ಬಿದ್ದಂತಿಲ್ಲ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತನಿಖೆಗೆ ಮತ್ತೆ ಆರು ತಿಂಗಳು ಸಮಯದ ಅವಕಾಶ ಕೋರಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ ಬಗ್ಗೆ ತಿಳಿದು ಬಂದಿದೆ.
2016ರ ಜುಲೈಯಲ್ಲಿ ಡಿವೈಎಸ್‍ಪಿ ಗಣಪತಿ ಅವರು ಮಡಿಕೇರಿಯ ವಿನಾಯಕ ಲಾಡ್ಜ್‍ನಲ್ಲಿ ಸಾವಿಗೀಡಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದ್ದ ಈ ಪ್ರಕರಣ ಬಳಿಕ ಸಂಶಯಾಸ್ಪದ ಪ್ರಕರಣವಾಗಿ ಇಡೀ ರಾಜ್ಯದಲ್ಲಿ ಸೂಕ್ತ ತನಿಖೆಗೆ ಆಗ್ರಹಿಸಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ, ಸಿಓಡಿ ತನಿಖೆಗಳು ನಡೆದು ಆರೋಪಿತರನ್ನು ಈ ತನಿಖಾ ವರದಿಯಲ್ಲಿ ದೋಷಮುಕ್ತಗೊಳಿಸಲಾಗಿತ್ತು.
ಆದರೆ ಈ ತನಿಖೆಗಳ ಮೇಲೆ ವಿಶ್ವಾಸ ವ್ಯಕ್ತಪಡಿಸದೆ ಸಂಶಯ ವ್ಯಕ್ತಪಡಿಸಿದ್ದ ಮೃತ ಗಣಪತಿ ಅವರ ತಂದೆ ಮಾದಪಂಡ ಕೆ. ಕುಶಾಲಪ್ಪ ಹಾಗೂ ಸಹೋದರ ಎಂ.ಕೆ. ಮಾಚಯ್ಯ ಅವರುಗಳು ಸಿಬಿಐ ತನಿಖೆಗೆ ಒತ್ತಾಯಿಸಿ ಹೋರಾಟ ನಡೆಸಿದ್ದರು. ಇದರ ಫಲವಾಗಿ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಆರಂಭದಲ್ಲಿ ವಿಚಾರಣೆ ನಡೆಸಿದ ಸಿಬಿಐ ತಂಡ ವರದಿಯಲ್ಲಿ ಸಚಿವ ಜಾರ್ಜ್ ಸೇರಿದಂತೆ ಆರೋಪಿತರ ಹೆಸರನ್ನು ಉಲ್ಲೇಖಿಸಿ ಹೆಚ್ಚಿನ ತನಿಖೆ ನಡೆಸಲು ಆರು ತಿಂಗಳ ಸಮಯಾವಕಾಶ ಕೋರಿ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಿತ್ತು.
ಇದರ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಸಿಬಿಐಗೆ ಆರು ತಿಂಗಳ ಸಮಯ ನೀಡಿ ಆದೇಶ ನೀಡಿತ್ತು. ಇದಾದ ಬಳಿಕ ಚೆನ್ನೈಯ ಸಿಬಿಐ ಅಧಿಕಾರಿಗಳ ತಂಡ ಜಿಲ್ಲೆಗೆ ಹಲವು ಬಾರಿ ಭೇಟಿ ನೀಡಿ ತನಿಖೆ, ವಿಚಾರಣೆ ನಡೆಸಿತ್ತಾದರೂ ಈ ತನಕ ವರದಿ ಸಲ್ಲಿಕೆಯಾಗಿರಲಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ಆರು ತಿಂಗಳ ಅವಧಿ ಮುಕ್ತಾಯಗೊಂಡಿದ್ದು, ಸುಪ್ರೀಂ ಕೋರ್ಟ್‍ಗೆ ಸಿಬಿಐಗೆ ವರದಿ ಸಲ್ಲಿಸಬೇಕಿತ್ತು. ನ್ಯಾಯಾಲಯಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ತನಿಖಾ ವರದಿ ಸಲ್ಲಿಕೆಯಾಗಿರಲಿಲ್ಲ.
ಇದೀಗ ಜುಲೈ ತಿಂಗಳಿನಲ್ಲಿ ಪ್ರಕರಣ ವಿಚಾರಣೆಗೆ ಬರಲಿದ್ದು, ಸಿಬಿಐ ತನ್ನ ವರದಿಯನ್ನು ನೀಡಬೇಕಿದೆ. ಆದರೆ ಇದೀಗ ಸಿಬಿಐ ಇನ್ನಷ್ಟು ಹೆಚ್ಚಿನ ತನಿಖೆ ಮುಂದುವರಿಸಲು ಮತ್ತೆ ಆರು ತಿಂಗಳ ಸಮಯ ನೀಡಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ ಎನ್ನಲಾಗಿದೆ.