ಮಡಿಕೇರಿ, ಜು. 12: ಈಚೆಗೆ ನಡೆದ ಚುನಾವಣೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿ ಸದಸ್ಯರುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅತ್ಯಧಿಕ ಮತಗಳನ್ನು ಪಡೆದಿದ್ದ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಸದಸ್ಯೆ ಲೀಲಾ ಶೇಷಮ್ಮ ಹಾಗೂ ಹಿರಿಯ ಸದಸ್ಯ ಕೆ.ಎಂ. ಗಣೇಶ್ ಅವರುಗಳ ಸದಸ್ಯತ್ವ ಅನರ್ಹಗೊಂಡಿದೆ. ಈ ನಡುವೆ ತಾ. 13ರಂದು (ಇಂದು) ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಈ ಸಂಬಂಧ ತೆರೆಮರೆಯಲ್ಲಿ ಭಾರೀ ರಾಜಕೀಯ ಕಸರತ್ತು ನಡೆಯುತ್ತಿದೆ. ಈ ಮೊದಲು ಬಿಜೆಪಿಯನ್ನು ಬೆಂಬಲಿಸಿ ಸದಸ್ಯತ್ವದಿಂದ ವಜಾಗೊಂಡಿದ್ದ ವೀಣಾಕ್ಷಿ ಹಾಗೂ ಶ್ರೀಮತಿ ಬಂಗೇರಾ ಮತ್ತೆ ಮೇಲ್ನೊಟಕ್ಕೆ ಕಾಂಗ್ರೆಸ್‍ನಲ್ಲಿದ್ದಾರೆ. ಹೀಗಿದ್ದು, ಪ್ರಸಕ್ತ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ತಲಾ 8 ಸದಸ್ಯರಿದ್ದಾರೆ. ಆ ಪೈಕಿ ಅಧ್ಯಕ್ಷೆಯಾಗಿ ಕಾಂಗ್ರೆಸ್‍ನ ಕಾವೇರಮ್ಮ ಸೋಮಣ್ಣ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಟಿ.ಎಸ್. ಪ್ರಕಾಶ್ ಕೂಡ ಸೇರಿದ್ದಾರೆ.
ಇನ್ನು ಎಸ್‍ಡಿಪಿಐನ ನಾಲ್ವರು ಹಾಗೂ ಜೆಡಿಎಸ್‍ನ ಒಬ್ಬರು ಸದಸ್ಯರಿದ್ದು, ಇವರು ಬೆಂಬಲಿಸುವ ಸದಸ್ಯ ಕಾಮಗಾರಿ ಅಧ್ಯಕ್ಷ ಸ್ಥಾನ ಅಲಂಕರಿಸಲಿದ್ದಾರೆ. ಈ ಸಂಬಂಧ ಇಂದು ಬಿರುಸಿನ ರಾಜಕೀಯ ಕಸರತ್ತು ನಡೆದಿದ್ದು, ಕಾಂಗ್ರೆಸ್ಸಿಗರು ಎಸ್‍ಡಿಪಿಐ ಸದಸ್ಯ ಕೆ.ಜೆ. ಪೀಟರ್ ಅವರನ್ನು ಕಣಕ್ಕಿಳಿಸುವ ಮಾತು ಕೇಳಿ ಬರುತ್ತಿದೆ. ಬಿಜೆಪಿ ತನ್ನ ಅಭ್ಯರ್ಥಿಯಾಗಿ ಸದಸ್ಯ ಪಿ.ಟಿ. ಉಣ್ಣಿಕೃಷ್ಣ ಅವರನ್ನು ಅಖಾಡಕ್ಕಿಳಿಸುವ ಸುಳಿವು ಲಭಿಸಿದೆ.
ಕೆ.ಎಂ. ಗಣೇಶ್ ಆಕ್ರೋಶ : ಈಗಷ್ಟೇ ವಜಾಗೊಂಡಿರುವ ಸದಸ್ಯ ಕೆ.ಎಂ. ಗಣೇಶ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ನಗರೋತ್ಥಾನ ನಿಧಿ ರೂ. 35 ಕೋಟಿಗಾಗಿ ವಾಮಮಾರ್ಗದಿಂದ ಸ್ಥಾಯಿ ಸಮಿತಿಗಾದಿಗೆ ಯತ್ನಿಸುವ ಮೂಲಕ ತಾನು ಹಾಗೂ ಲೀಲಾ ಶೇಷಮ್ಮರನ್ನು ಸದಸ್ಯತ್ವದಿಂದ ತರಾತುರಿಯಲ್ಲಿ ವಜಾಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾವದೇ ಟೆಂಡರ್ ಇತ್ಯಾದಿ ಕರೆಯದೆ ಕಾಂಗ್ರೆಸ್ ಅಧಿಕಾರ ಮತ್ತು ಹಣ ದುರ್ಬಳಕೆಯ ಉದ್ದೇಶದಿಂದ ತಮ್ಮಗಳಿಗೆ ಅನ್ಯಾಯ ಎಸಗಿರುವದಾಗಿ ಜರಿದರು.
ಒಟ್ಟಿನಲ್ಲಿ ಇಂದು ನಗರಸಭೆಯ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದ್ದು, ಮುಂದಿನ 6 ತಿಂಗಳ ನಗರಸಭಾ ಆಳ್ವಿಕೆಯತ್ತ ಮುನ್ನುಡಿಯಾಗಲಿದೆ. ಆ ವೇಳೆಗೆ ನೂತನ ಆಡಳಿತ ಮಂಡಳಿ ಚುನಾವಣೆ ಎದುರಾಗಲಿದೆ.