ಗೋಣಿಕೊಪ್ಪಲು, ಜು. 12: ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿರುವ ಕ್ರೀಡಾ ವಸತಿ ಶಾಲೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದೀಗ ಹಾಸ್ಟೇಲ್ ನಿರ್ವಹಣೆ ಹೊತ್ತಿರುವ ಕೊಡಗು ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷರ,ಉಪಾಧ್ಯಕ್ಷರ ಮುಂದೆಯೇ ವಸತಿ ನಿಲಯದ ಅವ್ಯವಸ್ಥೆ, ಭ್ರಷ್ಟಾಚಾರ ಬಯಲಾಗಿದೆ.ಇಲ್ಲಿನ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಸಮಸ್ಯೆ ಎಳೆ ಎಳೆಯಾಗಿ ಜನ ಪ್ರತಿ ನಿಧಿಗಳ ಮುಂದೆ ಬಿಚ್ಚಿಟ್ಟರು.ಬುಧವಾರದಂದು ‘ಶಕ್ತಿ’ ಈ ಬಗ್ಗೆ ವರದಿ ಪ್ರಕಟಿಸಿ ಜನಪ್ರತಿನಿಧಿಗಳ ಕಣ್ಣು ತೆರೆಸುವ ಪ್ರಯತ್ನ ನಡೆಸಿತ್ತು. ಸುದ್ದಿ ತಿಳಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ವಸತಿ ನಿಲಯದ ಸಮಸ್ಯೆಗಳನ್ನು ಖುದ್ದಾಗಿ ಆಲಿಸಲು ಜಿಲ್ಲಾ ಪಂಚಾಯ್ತಿ ಅದ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಅವರು ಒಡಗೂಡಿ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡುವ ಮೂಲಕ ಇಲ್ಲಿಯ ಸಮಸ್ಯೆಗಳನ್ನು ಆಲಿಸಿದರು.ವಸತಿ ನಿಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿಲಯದಲ್ಲಿ ನೀರಿನ ವ್ಯವಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡಿರುವ ಕಳಪೆ ಮಟ್ಟದ ಜರ್ಕಿನ್, ಹಾಕಿಸ್ಟಿಕ್, ಶೂ ಮತ್ತಿತರ ವಸ್ತುಗಳನ್ನು ಜನಪ್ರತಿನಿಧಿಗಳ ಮುಂದೆ ಇಡುವ ಮೂಲಕ ಅಚ್ಚರಿ ಮೂಡಿಸಿದರು. ವಸತಿ ನಿಲಯದ ವಿದ್ಯಾರ್ಥಿಗಳ ಕ್ರೀಡೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಇಲ್ಲಿಯ ಹಾಕಿ ತರಬೇತುದಾರರು ಗುಣಮಟ್ಟದ ಹಾಕಿ ಕಿಟ್‍ಅನ್ನು

(ಮೊದಲ ಪುಟದಿಂದ) ವಿತರಿಸಲು ಲಿಖಿತವಾಗಿ ತಿಳಿಸಿದ್ದರೂ ಇದಾವದನ್ನು ಸರಬರಾಜು ಮಾಡದೆ ಕೇವಲ ಕಳಪೆ ಗುಣಮಟ್ಟದ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿರುವದು ಈ ಸಂದರ್ಭ ಬೆಳಕಿಗೆ ಬಂದಿತು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ವಿದ್ಯಾರ್ಥಿಗಳು ಬಳಸುವ ಶೌಚಾಲಯ, ಮಲಗುವ ಕೋಣೆ, ಭೋಜನ ಶಾಲೆ, ದಾಸ್ತಾನು ಕೊಠಡಿ, ಮಕ್ಕಳಿಗೆ ನೀಡುವ ಆಹಾರವನ್ನು ಇದೇ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ತಂಡದೊಂದಿಗೆ ಪರಿಶೀಲನೆ ನಡೆಸಿದರು.

ವಸತಿ ನಿಲಯದ ಅವ್ಯವಸ್ಥೆಯ ಬಗ್ಗೆ ಇದೀಗ ನೂತನವಾಗಿ ನೇಮಕಗೊಂಡಿರುವ ವಾರ್ಡನ್ ಸುರೇಶ್ ಅವರನ್ನು ಪ್ರಶ್ನಿಸಿದಾಗ ಉತ್ತರ ದೊರಕಲಿಲ್ಲ. ವಿದ್ಯಾರ್ಥಿಗಳಿಗೆ ವಿತರಿಸಿರುವ ಸವಲತ್ತುಗಳ ದಾಖಲೆ ಪುಸ್ತಕಗಳನ್ನು ಪರಿಶೀಲಿಸಿದ ಅಧ್ಯಕ್ಷ ಕಿರುಣ್ ಕಾರ್ಯಪ್ಪ ಕೆಲ ಕಾಲ ಸ್ತಬ್ಧಗೊಂಡರು. ಕಾರಣ ದಾಖಲೆ ಪುಸ್ತಕದಲ್ಲಿ 2013ರಲ್ಲಿ ವಿತರಿಸಿದ ವಸ್ತುಗಳ ಬಗ್ಗೆ ಮಾಹಿತಿ ಲಭ್ಯತೆ ಬಿಟ್ಟಲ್ಲಿ 2018ರಲ್ಲಿ ವಿತರಿಸಿದ ವಸ್ತುಗಳು ನಮೂದಾಗಿದ್ದವು. ಮಧ್ಯದ 5 ವರ್ಷಗಳ ಕಾಲ ಯಾವದೇ ದಾಖಲೆಗಳು ಪುಸ್ತಕದಲ್ಲಿ ನೋಂದಾವಣೆ ಮಾಡಿರುವದಿಲ್ಲ. ಈ ಬಗ್ಗೆ ವಾರ್ಡನ್ ಸುರೇಶ್ ಬಳಿ ಉತ್ತರವಿರಲಿಲ್ಲ. ಬಹುಶಃ ಇಲಾಖೆ ಸರಬರಾಜು ಮಾಡಿಲ್ಲವೋ ಅಥವಾ ಈ ಹಿಂದಿನ ವಾರ್ಡನ್ ನೋಂದಣಿ ಮಾಡಿಲ್ಲವೋ ಎಂಬ ಪ್ರಶ್ನೆ ಉದ್ಭವಿಸಿತು.

ವಿದ್ಯಾರ್ಥಿಗಳು ಮಲಗುವ ಕೊಠಡಿಯಲ್ಲಿ ಸರಿಯಾದ ಬೆಳಕಿಲ್ಲದೆ, ಹಳೇ ಕಾಲದ ಬಲ್ಬ್‍ಗಳು ಉರಿಯುತ್ತಿದ್ದವು. ಶೌಚಾಲಯಕ್ಕೆ ಬ್ಲೀಚಿಂಗ್ ಪೌಡರ್, ಫಿನಾಯಿಲ್ ಬಳಸದೇ ದುರ್ಗಂಧ ಬೀರುತ್ತಿದ್ದವು. ದಾಸ್ತನು ಕೊಠಡಿಯಲ್ಲಿ ಈರುಳ್ಳಿ, ಆಲೂಗೆಡ್ಡೆ ಇತರ ತರಕಾರಿಗಳು, ಜೂಸ್‍ಗೆ ಬಳಸುವ ಮೂಸಂಬಿಗಳು. ಕೊಳೆತು ಹಾಳಾಗಿರುವದನ್ನು ಸ್ವತಃ ಜಿ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು ವೀಕ್ಷಿಸುವ ಮೂಲಕ ಇಲ್ಲಿಯ ವ್ಯವಸ್ಥೆಯ ಬಗ್ಗೆ ಆಕ್ರೋಶಗೊಂಡರು.

ವಿದ್ಯಾರ್ಥಿಗಳಿಗೆ ನೀಡುವ ಮಾಂಸಹಾರಿ ಊಟದಲ್ಲಿ ಕುರಿ ಮಾಂಸದಲ್ಲಿ ಕೇವಲ ಮೂಳೆಗಳು ಹಾಗೂ ಕೋಳಿ ಮಾಂಸದಲ್ಲಿ ಸ್ಕಿನ್‍ಗಳು ಮಾತ್ರ ಹೆಚ್ಚಾಗಿ ಊಟಕ್ಕೆ ಬಡಿಸುತ್ತಾರೆಂದು ವಿದ್ಯಾರ್ಥಿಗಳು ಅದುಮಿಟ್ಟುಕೊಂಡಿದ್ದ ತಮ್ಮ ನೋವನ್ನು ತೋಡಿಕೊಂಡರು. ಈ ಬಗ್ಗೆ ಅಡುಗೆಯವರನ್ನು ಅಧ್ಯಕ್ಷರು ಪ್ರಶ್ನಿಸಿದಾಗ ಗುತ್ತಿಗೆದಾರರು ನೀಡುವ ವಸ್ತುಗಳನ್ನು ಬಳಸುತ್ತೇವೆ ಎಂದು ಹಾರಿಕೆಯ ಉತ್ತರ ನೀಡಿದರು. ಈ ಮಾತಿನಿಂದ ಅಸಮಾಧಾನಗೊಂಡ ಅಧ್ಯಕ್ಷರು ವಾರ್ಡನ್ ಸುರೇಶ್ ಬಳಿ ವಿಚಾರಿಸಿದಾಗ ಊಟದ ವಿಷಯದಲ್ಲಿ ನಮಗೇನು ಮಾಹಿತಿ ಇಲ್ಲ. ಇಲಾಖೆ ವಹಿಸಿರುವ ಗುತ್ತಿಗೆದಾರರು ಇದರ ಜವಾಬ್ದಾರಿ ನಿಭಾಯಿಸುತ್ತಾರೆ ಎಂದರು. ಈ ಸಂದರ್ಭ ವಿದ್ಯಾರ್ಥಿಗಳು ನಮಗೆ ಕುಡಿಯಲು ನೀಡುವ ಹಾಲು ಗುಣಮಟ್ಟದಾಗಿರುವದಿಲ್ಲ ಕೇವಲ ನೀರಿನ ಅಂಶವೇ ಅಧಿಕ ಪ್ರಮಾಣದಲ್ಲಿ ಇರುತ್ತದೆ ಎಂದು ನೋವನ್ನು ತೋಡಿಕೊಂಡರು. ಈ ವಿಷಯದಲ್ಲಿ ಪ್ರಶ್ನಿಸಿದಾಗ ಪ್ರತಿ ನಿತ್ಯ 60 ಮಕ್ಕಳಿಗೆ 16 ಲೀ. ಬಳಸುತ್ತೇವೆ ಎಂದು ಅಡುಗೆಯವರು ಉತ್ತರಿಸಿದರು. ನಂತರ ಅಡುಗೆ ಕೋಣೆಯಲ್ಲಿ ಹಾಲನ್ನು ಪರೀಕ್ಷಿಸಿದಾಗ ಹಾಲಿನ ಗುಣಮಟ್ಟ ತೀರಾ ಕಳಪೆಯಾಗಿರುವದು ತಿಳಿದು ಬಂತು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಬಾನಂಡ ಪ್ರಥ್ಯುರವರು ವಸತಿ ನಿಲಯದ ಕಡತಗಳನ್ನು ಪರಿಶೀಲಿಸಿದರು. ಈ ಸಂದರ್ಭ ಕಡತದಲ್ಲಿ ಇಲಾಖೆಯು ನೀಡಿರುವ ಸಾಮಗ್ರಿಗಳ ಬಗ್ಗೆ ಯಾವದೇ ನೋಂದಣಿ ಇಲ್ಲದ ಬಗ್ಗೆ ಅಸಮಾಧಾನಗೊಂಡರು. ವಿದ್ಯಾರ್ಥಿಗಳನ್ನು ಜಾಣ್ಮೆಯಿಂದ ಪ್ರಶ್ನಿಸಿ ಮಕ್ಕಳ ಮನಸ್ಸಿನಲ್ಲಿದ್ದ ನೋವುಗಳನ್ನು ಹೊರ ತರುವಲ್ಲಿ ಯಶಸ್ವಿಯಾದರು. ಈ ಭೇಟಿಯ ಸಂದರ್ಭ ತರಬೇತುದಾರರಾದ ಚಂಗಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಎನ್.ಜಿ.ಕಿರಣ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ,ಜಪ್ಪು ಸುಬ್ಬಯ್ಯ,ಮತ್ತಿತರರು ಹಾಜರಿದ್ದರು.

- ಹೆಚ್.ಕೆ. ಜಗದೀಶ್

ಟೆಂಡರ್ ನಡೆದೆ ಇಲ್ಲ.!

ನಿಲಯದ ಅಭಿವೃದ್ಧಿಯ ಬಗ್ಗೆ ಇಲಾಖಾಧಿಕಾರಿಗಳಿಗೆ ಜವಾಬ್ದಾರಿ ಇಲ್ಲದಂತಾಗಿದೆ. ಪ್ರತಿ ವರ್ಷ ನಡೆಯಬೇಕಾದ ಟೆಂಡರ್ ಪ್ರಕ್ರಿಯೆ ನಡೆಯುತ್ತಿಲ್ಲ. ಕಳೆದ 4 ವರ್ಷಗಳಿಂದ ಇಲ್ಲಿಗೆ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ದಿನಸಿ ಸರಬರಾಜು ಮಾಡುವ ಗುತ್ತಿಗೆದಾರನೇ ಇಲ್ಲಿಗೂ ಕೂಡ ವಸ್ತುಗಳನ್ನು ಸರಬರಾಜು ಮಾಡಿದ್ದಾನೆ. ಈ ಬಗ್ಗೆ ಇಲಾಖಾಧಿಕಾರಿಗಳನ್ನು ಪ್ರಶ್ನಿಸಿದರೆ ಇವರ ಬಳಿ ಸರಿಯಾದ ಉತ್ತರವಿಲ್ಲ; ಇಂತಹ ವಿಷಯದಲ್ಲಿ ಮುಂದಿನ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಗಂಭೀರ ಕ್ರಮಕೈಗೊಳ್ಳುತ್ತೇನೆ.

-ಲೋಕೇಶ್ವರಿ ಗೋಪಾಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರು

ಬುಲಾವ್

ವಸತಿ ನಿಲಯದ ಸಮಸ್ಯೆಗಳನ್ನು ಕಂಡು ಬೇಸರಗೊಂಡ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ವಸತಿ ನಿಲಯದ ಸಮಸ್ಯೆಗಳನ್ನು ಬಗೆ ಹರಿಸುವ ಪ್ರಯತ್ನದಲ್ಲಿ ಎರಡು ದಿನದ ಒಳಗೆ ಇಲ್ಲಿಯ ಕಡತಗಳೊಂದಿಗೆ ಮಡಿಕೇರಿಯ ಕಛೇರಿಗೆ ಆಗಮಿಸಿ ವಿವರ ನೀಡುವಂತೆ ಹಾಸ್ಟೇಲ್ ವಾರ್ಡನ್ ಸುರೇಶ್ ಅವರಿಗೆ ಸೂಚನೆÉ ನೀಡಿ ಬುಲಾವ್ ಮಾಡಿದರು.

ಸುದ್ದಿ ನೋಡಿ ಬಂದಿದ್ದೇನೆ

‘ಶಕ್ತಿ’ ಯಲ್ಲಿ ನಿಲಯದ ಬಗ್ಗೆ ಪ್ರಕಟವಾಗಿರುವ ಸುದ್ದಿಯನ್ನು ತಿಳಿದು ನಿಲಯಕ್ಕೆ ಬಂದಿದ್ದೇನೆ. ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ವಿವರ ನೀಡಿದರು. ಅಧಿಕಾರ ಪಡೆದು ಎರಡು ವಾರಗಳು ಕಳೆದಿವೆ. ಒಂದು ವಾರದ ಹಿಂದೆ ನಿಲಯಕ್ಕೆ ಭೇಟಿ ನೀಡಿದ್ದೆ ಇಷ್ಟೊಂದು ಸಮಸ್ಯೆಗಳು, ಭ್ರಷ್ಟಾಚಾರಗಳು ಕಣ್ಣಾಮುಂದೆಯೇ ನಡೆದಿರುವದು ಸಹಿಸಿಕೊಂಡು ಇರಲು ಸಾಧ್ಯವಿಲ್ಲ.

ಮಕ್ಕಳನ್ನು ರಾಷ್ಟ್ರೀಯ ಮಟ್ಟಕ್ಕೆ ತಯಾರು ಮಾಡುವ ಈ ನಿಲಯದಲ್ಲಿ ಈ ರೀತಿ ಇನ್ನು ಮುಂದೆ ನಡೆಯಲು ಅವಕಾಶ ನೀಡುವದಿಲ್ಲ. ಇಲ್ಲಿಯ ಸಮಸ್ಯೆಗಳನ್ನು ವಿವರವಾಗಿ ತಿಳಿಯಲು ಅಧಿಕಾರಿಗಳ ಮಟ್ಟದಲ್ಲಿ ತಾ. 16 ರಂದು ಸ್ಥಾಯಿ ಸಮಿತಿ ಸಭೆಯನ್ನು ಕರೆದಿದ್ದೇನೆ. ವಿವರವಾಗಿ ಎಲ್ಲವನ್ನು ಚರ್ಚಿಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುತ್ತೇನೆ. ವಸತಿ ನಿಲಯಕ್ಕೆ ಸಲಹಾ ಸಮಿತಿ ಇಲ್ಲದಿರುವದು ಗಮನಕ್ಕೆ ಬಂದಿದೆ. ವರದಿ ಪ್ರಕಟಿಸಿ ಗಮನ ಸೆಳೆದಿರುವ ಬಗ್ಗೆ ‘ಶಕ್ತಿ’ಗೆ ಅಭಿನಂದಿಸಿದ ಅಧ್ಯಕ್ಷ ಕಿರಣ್ ಕಾರ್ಯಪ್ಪ ಇಲ್ಲಿಯ ಸಮಸ್ಯೆಗಳನ್ನು ಬಗೆ ಹರಿಸುವ ಪ್ರಯತ್ನಕ್ಕೆ ಮಾಧ್ಯಮದ ಸಹಕಾರ ಬೇಕೆಂದು ಮನವಿ ಮಾಡಿದರು.

ಕ್ರಮಕೈಗೊಳ್ಳುತ್ತೇನೆ

ವಸತಿ ನಿಲಯಗಳ ಮೇಲು ಉಸ್ತುವಾರಿಯ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಜಿಲ್ಲಾ ಮಟ್ಟದ ಅಧಿಕಾರಿ ಜಯಲಕ್ಷ್ಮಿಬಾಯಿ ಅವರ ಮೇಲೆ ಹಲವು ಆರೋಪದ ಮಾತುಗಳು ಕೇಳಿ ಬಂದಿವೆ. ಜನಪ್ರತಿನಿಧಿಗಳ ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡುತ್ತ ಜಾರಿಕೊಳ್ಳುವದು ಕಂಡು ಬಂದಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುತ್ತೇನೆ. ಇಲ್ಲಿಯ ವ್ಯವಸ್ಥೆಗಳನ್ನು ಸರಿ ಪಡಿಸುವ ಪ್ರಯತ್ನ ನಡೆಸುತ್ತೇನೆ.

-ಬಿ.ಎ. ಹರೀಶ್, ಜಿ.ಪಂ. ಅಧ್ಯಕ್ಷರು