ಮಡಿಕೇರಿ, ಜು. 12: ಕೊಡಗಿನ ದುಬಾರೆ ಸೇರಿದಂತೆ ಶ್ರೀಮಂಗಲ ಹಾಗೂ ಇತರೆಡೆಗಳಲ್ಲಿ ರ್ಯಾಫ್ಟಿಂಗ್ ನಡೆಸುವ ಬಗ್ಗೆ ಜಿಲ್ಲಾಡಳಿತದಿಂದ ನಿರ್ವಹಣಾ ಸಮಿತಿಯೊಂದನ್ನು ರಚಿಸಿ, ಕೆಲವು ಷರತ್ತುಗಳನ್ನು ಸಂಬಂಧಿಸಿದವರಿಗೆ ವಿಧಿಸಿತ್ತು.ಈ ಸಂಬಂಧ ಮಾದಯ್ಯ ಎಂಬವರು ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಈ ವಿವಾದವನ್ನು ಜಿಲ್ಲಾ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ಅರ್ಜಿದಾರರಿಗೆ ಸೂಚಿಸಿ ಆದೇಶ ನೀಡಿರುವದಾಗಿ ಗೊತ್ತಾಗಿದೆ.
ಮೇಲಿನ ವಿವಾದಕ್ಕೆ ಸಂಬಂಧಿಸಿದಂತೆ ಕೊಡಗು ರ್ಯಾಫ್ಟಿಂಗ್ ನಿರ್ವಹಣಾ ಸಲಹಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರನ್ನು ‘ಶಕ್ತಿ’ ಸಂಪರ್ಕಿಸಿ ಮಾಹಿತಿ ಬಯಸಿದಾಗ, ನ್ಯಾಯಾಲಯದ ನಿರ್ದೇಶನದಂತೆ ಅಗತ್ಯ ಕ್ರಮವಹಿಸಲಾಗುವದು ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ಈ ಸಂಬಂಧ ಜಿಲ್ಲಾಡಳಿತದಿಂದ ನ್ಯಾಯಾಲಯಕ್ಕೆ ಅಗತ್ಯ ಮಾಹಿತಿ ಸಲ್ಲಿಸುವ ಮುಖಾಂತರ; ರ್ಯಾಫ್ಟಿಂಗ್‍ನಿಂದ ಯಾರಿಗೂ ತೊಂದರೆ ಉಂಟಾಗದಂತೆ ಕಾನೂನಿನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆಗೆ ಕೋರುವದರೊಂದಿಗೆ, ಅಲ್ಲಿಂದ ಲಭ್ಯವಾಗುವ ಸಲಹೆಯಂತೆ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದರು.