ಸೋಮವಾರಪೇಟೆ, ಜು. 12: ವರುಣನ ರುದ್ರನರ್ತನಕ್ಕೆ ಸೋಮವಾರಪೇಟೆ ನಲುಗುತ್ತಿದೆ. ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಹಾಗೂ ಐಗೂರು ಗ್ರಾ.ಪಂ.ನ ಕಿಬ್ರಿ ಪೈಸಾರಿ ಗ್ರಾಮದಲ್ಲಿ ಅತೀ ಹೆಚ್ಚು ಹಾನಿ ಸಂಭವಿಸಿದ್ದು ಬಡಮಂದಿ ನಿರಾಶ್ರಿತರಾಗುತ್ತಿದ್ದಾರೆ. ಕೂಲಿಕಾರ್ಮಿಕ ಕುಟುಂಬಗಳೇ ಹೆಚ್ಚು ವಾಸವಿರುವ ಈ ಗ್ರಾಮದಲ್ಲಿ ಸಣ್ಣಪುಟ್ಟ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಭಾರೀ ಮಳೆಗೆ ಅನಾಹುತಗಳು ಸಂಭವಿಸುತ್ತಿವೆ.
ನಿನ್ನೆ ಸುರಿದ ಧಾರಾಕಾರ ಮಳೆಗೆ ಬಜೆಗುಂಡಿ ಗ್ರಾಮದ ಮಣಿ ಅವರ ಮನೆ ಕುಸಿದು ಬಿದ್ದಿದೆ. ಅತೀ ಶೀತದಿಂದಾಗಿ ಗೋಡೆಗಳು ಕುಸಿದಿದ್ದು, ಪರಿಣಾಮ ಛಾವಣಿ ನೆಲಕ್ಕಚ್ಚಿದೆ. ಇದರಿಂದಾಗಿ ಮಣಿಯವರ ಕುಟುಂಬಕ್ಕೆ ನೆಲೆ ಇಲ್ಲದಂತಾಗಿದ್ದು, ಸಾವಿರಾರು ರೂಪಾಯಿ ನಷ್ಟವೂ ಸಂಭವಿಸಿದೆ.
ಇದರೊಂದಿಗೆ ಬಜೆಗುಂಡಿ ಗ್ರಾಮದ ಸುಮತಿ ಅವರ ಮನೆಯ ಪಕ್ಕದ ರಸ್ತೆಯಲ್ಲಿ ಬರೆ ಕುಸಿತ ಸಂಭವಿಸಿದ್ದು, ರಸ್ತೆಯೂ ಕುಸಿಯುವ ಭೀತಿ ಎದುರಾಗಿದೆ. ಗಿರಿಜಮ್ಮ, ರಾಜು, ನೀಲಮ್ಮ, ರಘು, ಕಿಟ್ಟ ಅವರುಗಳ ಮನೆಯ ಸಮೀಪವೂ ಬರೆ ಕುಸಿತಗೊಂಡಿದ್ದು, ಅಪಾಯದ ಮುನ್ಸೂಚನೆ ನೀಡಿದೆ.
ಬೇಳೂರು ಗ್ರಾ.ಪಂ. ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ಹಲವಷ್ಟು ತಡೆಗೋಡೆಗಳನ್ನು ನಿರ್ಮಿಸಬೇಕಿದೆ. ಈ ಹಿನ್ನೆಲೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಅನುದಾನ ಒದಗಿಸುವಂತೆ ಜಿ.ಪಂ. ಕಾರ್ಯನಿರ್ವಹಣಾಧಿಕಾರಿಯವರಲ್ಲಿ ಮನವಿ ಮಾಡಲಾಗಿದೆ ಎಂದು ಗ್ರಾ.ಪಂ. ಸದಸ್ಯ ಕೆ.ಎ. ಯಾಕೂಬ್ ತಿಳಿಸಿದ್ದಾರೆ. ಇದರೊಂದಿಗೆ ಮನೆಗಳು ಸಂಪೂರ್ಣ ಹಾನಿಯಾದರೆ ಸರ್ಕಾರದಿಂದ ಕೇವಲ 95 ಸಾವಿರ ಮಾತ್ರ ಪರಿಹಾರ ನೀಡಲಾಗುತ್ತಿದೆ. ಈ ಹಣದಲ್ಲಿ 2 ಗೋಡೆ ನಿರ್ಮಿಸಲೂ ಸಹ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪರಿಹಾರ ಮೊತ್ತವನ್ನು ಹೆಚ್ಚಿಸುವತ್ತ ಸರ್ಕಾರ ಗಮನಹರಿಸಬೇಕೆಂದು ಯಾಕೂಬ್ ಒತ್ತಾಯಿಸಿದ್ದಾರೆ.
ಹೆಸರಿನಂತೆಯೇ ಗುಂಡಿ ಪ್ರದೇಶವಾಗಿರುವ ಬಜೆಗುಂಡಿ ಗ್ರಾಮದಲ್ಲಿ ಕೂಲಿ ಕಾರ್ಮಿಕ ಕುಟುಂಬಗಳೇ ನೆಲೆಸಿದ್ದು, ಲಭ್ಯವಿದ್ದ ಜಾಗದಲ್ಲೇ ಮಣ್ಣು ಸಮತಟ್ಟುಗೊಳಿಸಿ ಸಣ್ಣಪುಟ್ಟ ಮನೆ ನಿರ್ಮಿಸಿಕೊಂಡಿದ್ದಾರೆ. ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯಿಂದ ಬಲಭಾಗದ ಗುಂಡಿ ಪ್ರದೇಶದಲ್ಲಿರುವ ಗ್ರಾಮದಲ್ಲಿ ಪ್ರತಿವರ್ಷ ಹಾನಿ ಪ್ರಕರಣಗಳು ಸಂಭವಿಸುತ್ತಲೇ ಇವೆ.
ಗ್ರಾಮ ಪಂಚಾಯಿತಿ ಮತ್ತು ಸರ್ಕಾರದಿಂದ ಹಲವಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಇಲ್ಲಿ ಶಾಶ್ವತ ಪರಿಹಾರಗಳು ಕಾಣುತ್ತಿಲ್ಲ. ಪ್ರತಿಮನೆಗೂ ತಡೆಗೋಡೆ ನಿರ್ಮಿಸಬೇಕಾದ ಪರಿಸ್ಥಿತಿ ಬಜೆಗುಂಡಿ ಗ್ರಾಮದಲ್ಲಿದೆ. ಕಳೆದ 20 ದಿನಗಳ ಹಿಂದಷ್ಟೇ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಾಲಿನಲ್ಲಾದರೂ ಸಮಸ್ಯೆಗಳಿಂದ ಮುಕ್ತಿ ಕಾಣಬಹುದು ಎಂಬ ನಿರೀಕ್ಷೆ ಗ್ರಾಮಸ್ಥರಲ್ಲಿದೆ.
ಹಾನಿಪೀಡಿತ ಪ್ರದೇಶಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ಮಂಜುನಾಥ್, ಸದಸ್ಯೆ ವೀಣಾ ರಮೇಶ್, ಕವಿತ ಬಾಲಕೃಷ್ಣ, ಅಭಿವೃದ್ಧಿ ಅಧಿಕಾರಿ ಚನ್ನಕೇಶವ, ಜಿ.ಪಂ. ಅಭಿಯಂತರರಾದ ಭರತ್, ಜಯಪ್ರಕಾಶ್ ಅವರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಿಬ್ರಿಯಲ್ಲಿ ಸ್ಥಳಾಂತರ: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಬ್ರಿ ಪೈಸಾರಿಯಲ್ಲಿ ಗುರುವ ಅವರ ಮನೆಯ ಬಳಿಯಿರುವ ಬರೆಕುಸಿದ್ದು, ಕಲ್ಲುಬಂಡೆಗಳು ಉರುಳಿಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಯಾವದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯ ಇವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಇದರೊಂದಿಗೆ ಮಾಧವ ಅವರ ಮನೆಯ ಮೇಲೂ ಬಂಡೆಗಳು ಉರುಳಿದ್ದು, ಗೋಡೆ, ಹಂಚುಗಳು ಜಖಂಗೊಂಡಿವೆ. ಕೃಷ್ಣ ಅವರ ಮನೆಯೊಳಗೆ ಬರೆಕುಸಿತದಿಂದ ಮಣ್ಣು ನುಗ್ಗಿದ್ದು, ಬಂಡೆಗಳು ಉರುಳುವ ಸಂಭವವಿರುವದರಿಂದ ಕುಟುಂಬವನ್ನೂ ಬೇರೆಡೆಗೆ ಸ್ಥಳಾಂತರಿಸಲು ಗ್ರಾ.ಪಂ. ಆಡಳಿತ ಚಿಂತನೆ ಹರಿಸಿದೆ. ಸ್ಥಳಕ್ಕೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಸದಸ್ಯ ದಿನೇಶ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾಲೂಕು ಕಚೇರಿಗೆ ವರದಿ ಸಲ್ಲಿಸಿದ್ದಾರೆ.
ಮುಂದುವರೆದ ಮಳೆ: ತಾಲೂಕಿನಾದ್ಯಂತ ಮಳೆ ಮುಂದುವರೆದಿದೆ. ಶಾಂತಳ್ಳಿ ಹೋಬಳಿಗೆ ಪ್ರಸಕ್ತ ಸಾಲಿನಲ್ಲಿ 100 ಇಂಚಿಗೂ ಅಧಿಕ ಮಳೆ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲೇ 8 ಇಂಚು ಮಳೆ ಸುರಿದಿದೆ. ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿರುವ ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ, ಕೊತ್ನಳ್ಳಿ, ಬೆಂಕಳ್ಳಿ, ಮಲ್ಲಳ್ಳಿ, ಹೆಗ್ಗಡಮನೆ, ಬೆಟ್ಟದಳ್ಳಿ, ಹರಗ, ಕುಂದಳ್ಳಿ ಭಾಗದಲ್ಲಿ ದಿನದ 24 ಗಂಟೆಯೂ ಮಳೆಯಾಗುತ್ತಿದೆ.
ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿ ಹೇಳತೀರದ್ದಾಗಿದೆ. ಪ್ರಸಕ್ತ ವರ್ಷದ ಮಾರ್ಚ್, ಏಪ್ರಿಲ್‍ನಲ್ಲಿ ಕೈಗೊಂಡ ರಸ್ತೆ ಕಾಮಗಾರಿಗಳೂ ಸಹ ವರುಣನ ಅಬ್ಬರಕ್ಕೆ ನಲುಗಿವೆ. ನಿನ್ನೆ ಸುರಿದ ಧಾರಾಕಾರ ಮಳೆಗೆ ನಂದಿಗುಂದ ಗ್ರಾಮದ ಪುಷ್ಪಾವತಿ ಕೇಶವಮೂರ್ತಿ ಎಂಬವರ ವಾಸದ ಮನೆಯ ಗೋಡೆ ಕುಸಿದಿದೆ. ಅಪ್ಪಶೆಟ್ಟಳ್ಳಿ ಗ್ರಾಮದ ಲಕ್ಷ್ಮಮ್ಮ ಪುಟ್ಟಸ್ವಾಮಿ ಅವರ ಮನೆಯ ಮೇಲೆ ಮರ ಬಿದ್ದು, ಹಾನಿ ಸಂಭವಿಸಿದೆ. ಅಭಿಮಠ ಬಾಚಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಿದ್ದ ಟ್ಯಾಂಕ್ ಒಡೆದು ಹೋಗಿದೆ.