ಮಡಿಕೇರಿ, ಜ. 12: ಉತ್ತರ ಕೊಡಗಿನ ಪುಷ್ಪಗಿರಿ ಬೆಟ್ಟ ತಪ್ಪಲು ಸಹಿತ ತಲಕಾವೇರಿ - ಭಾಗಮಂಡಲ, ನಾಪೋಕ್ಲು, ಬಿಟ್ಟಂಗಾಲ ಸೇರಿದಂತೆ ಬರಪೊಳೆ ತಟದ ಗ್ರಾಮಗಳನ್ನು ಒಳಗೊಂಡಂತೆ ದಕ್ಷಿಣ ಕೊಡಗಿನ ಬ್ರಹ್ಮಗಿರಿ ತಪ್ಪಲು ಪ್ರದೇಶದ ಕುಟ್ಟ, ಶ್ರೀಮಂಗಲ, ಹುದಿಕೇರಿ, ಬಿರುನಾಣಿ, ಕುರ್ಚಿ, ಟಿ.ಶೆಟ್ಟಿಗೇರಿ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ವಿಪರೀತ ಗಾಳಿ - ಮಳೆಯೊಂದಿಗೆ ಜನತೆ ಹೈರಾಣಾಗಿದ್ದಾರೆ. ಇತ್ತ ಗಾಳಿಬೀಡು-ಕಾಲೂರು ರಸ್ತೆಯಲ್ಲಿ ಭೂ ಕುಸಿತದಿಂದ ಗ್ರಾಮೀಣ ಸಂಪರ್ಕ ಕಡಿತಗೊಂಡಿದ್ದರೆ, ಈಚೆಗೆ ನಿರ್ಮಾಣಗೊಂಡಿರುವ ಹಟ್ಟಿಹೊಳೆ-ಹಮ್ಮಿಯಾಲ ರಸ್ತೆಯ ಹಚ್ಚಿನಾಡು ಬಳಿ ಭಾರೀ ಮರವೊಂದರ ಸಹಿತ ಭೂ ಕುಸಿದು ನಾಲ್ಕಾರು ವಿದ್ಯುತ್ ಕಂಬಗಳು ನೆಲಕಚ್ಚುವದರೊಂದಿಗೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.ಪರಿಣಾಮ ಹಚ್ಚಿನಾಡು, ಹಮ್ಮಿಯಾಲ, ಮುಟ್ಲು ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪೂರ್ಣ ವಿದ್ಯುತ್ ಸ್ಥಗಿತಗೊಂಡು ಆ ಭಾಗದ ಜನತೆ ತೀವ್ರ ಮಳೆ - ಗಾಳಿಯ ನಡುವೆ ನಾಲ್ಕೈದು ದಿನಗಳಿಂದ ಕಾರ್ಗತ್ತಲೆಯಲ್ಲಿ ರಾತ್ರಿ ಕಳೆಯುವಂತಾಗಿದೆ.

ಸೂರ್ಲಬ್ಬಿ ಬಳಿಯ ಸುಬ್ರಹ್ಮಣ್ಯ ದೇವಾಲಯದ ಹತ್ತಿರ ವಿದ್ಯುತ್ ತಂತಿ ತುಂಡಾಗಿ ರಸ್ತೆ ಬದಿ ಕಾಡಿನಲ್ಲಿ ಹರಡಿಗೊಂಡಿದ್ದು, ಕುಂಬಾರಗಡಿಗೆ ಗ್ರಾಮದ ಕೆಲವೆಡೆ ಕಳೆದ 20 ದಿನಗಳಿಂದ ಅಲ್ಲಿನ ನಿವಾಸಿಗಳು ವಿದ್ಯುತ್ ಇಲ್ಲದೆ ರಾತ್ರಿ ಕತ್ತಲೆಯಲ್ಲಿ ಕಳೆಯುತ್ತಿದ್ದಾರೆ.

ಅಲ್ಲಲ್ಲಿ ಮನೆಗಳಿಗೆ ಹಾನಿ : ಕಳೆದ ರಾತ್ರಿ ಸುರಿದ ಭಾರೀ ಮಳೆ - ಗಾಳಿಯ ಪರಿಣಾಮ; ಅನೇಕ ಕಡೆಗಳಲ್ಲಿ ಮರಗಳು ನೆಲ ಕಚ್ಚುವದರೊಂದಿಗೆ ಬರೆ ಕುಸಿದಿರುವ ಸಂದರ್ಭ ಕೆಲವರ ಮನೆಗಳಿಗೆ ಹಾನಿ ಉಂಟಾಗಿದೆ. ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಜಿಲ್ಲಾ ಆಡಳಿತದ ಮುಖಾಂತರ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಮಡಿಕೇರಿ ತಾಲೂಕಿನ ಕಡಗದಾಳು ಗ್ರಾ.ಪಂ. ವ್ಯಾಪ್ತಿಯ ಇಂದಿರಾ ಬಿದ್ದಪ್ಪ ಎಂಬವರ ಕೊಟ್ಟಿಗೆಯ ಮೇಲೆ ಮರ ಬಿದ್ದು ಮೇಲ್ಛಾವಣಿ ಹೆಂಚುಗಳು ಪುಡಿಯಾಗಿ ಗೋಡೆ ಜಖಂಗೊಂಡು ಸಾವಿರಾರು ರೂ.ಗಳ ನಷ್ಟ ಸಂಭವಿಸಿದೆ. ಇದೇ ಗ್ರಾಮದ ಸೋಮಯ್ಯ ಎಂಬವರ ಮನೆಯ ಗೋಡೆ ಭಾಗಶಃ ಬಿದ್ದು ಮೇಲ್ಛಾವಣಿಗೂ ಜಖಂ ಆಗಿದೆ ಎಂದು ಕಂದಾಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಮರಗೋಡುವಿನಲ್ಲಿ ನಿರ್ಮಾಣ

(ಮೊದಲ ಪುಟದಿಂದ) ಹಂತದ ಮನೆ ಹಾಗೂ ಕೆ. ಬಾಡಗದಲ್ಲಿ ಚಂಗಪ್ಪ ಎಂಬವರ ಮನೆಗೂ ಮಳೆಯಿಂದ ಹಾನಿಯಾಗಿದೆ.

ಸೋಮವಾರಪೇಟೆ ತಾಲೂಕಿನ ನಂದಿಗುಂದ ಗ್ರಾಮದ ಪುಷ್ಪಕೇಶವ ಎಂಬವರ ಮನೆಗೋಡೆ ಬಿದ್ದು ಅಂದಾಜು ರೂ. 20 ಸಾವಿರ ನಷ್ಟ ಸಂಭವಿಸಿದೆ. ಅಪ್ಪಶೆಟ್ಟಳ್ಳಿ ಗ್ರಾಮದ ಲಕ್ಷ್ಮಮ್ಮ ಹಾಗೂ ಕಮಲಮ್ಮ ಎಂಬವರಿಗೆ ಸೇರಿದ ಮನೆಗೂ ಮಳೆಯಿಂದ ಬರೆ ಕುಸಿದು ಹಾನಿಯಾಗಿದೆ. ಈ ಬಗ್ಗೆ ಕಂದಾಯ ಅಧಿಕಾರಿಗಳು ಸ್ಥಳ ಮಹಜರು ನಡೆಸಿ ಕ್ರಮ ಕೈಗೊಂಡಿದ್ದಾರೆ.

ಅಲ್ಲದೆ, ಸೋಮವಾರಪೇಟೆ ತಾಲೂಕಿನ ಕಲ್ಕಂದೂರು ಗ್ರಾಮದಲ್ಲಿ ವಿದ್ಯುತ್ ಕಂಬಗಳು ಬೀಳುವದರೊಂದಿಗೆ ಆ ಭಾಗದಲ್ಲಿ ಸಂಪರ್ಕ ಸ್ಥಗಿತಗೊಂಡು ಗ್ರಾಮಸ್ಥರು ಕತ್ತಲೆಯಲ್ಲಿ ಕಳೆಯುವಂತಾಗಿದೆ.

ಭಾಗಮಂಡಲ ತಹಶೀಲ್ದಾರ್ ಭೇಟಿ : ತಲಕಾವೇರಿ - ಭಾಗಮಂಡಲ ವ್ಯಾಪ್ತಿಯಲ್ಲಿ ವರುಣ - ವಾಯು ರೌದ್ರನರ್ತನ ಮುಂದುವರಿದಿದ್ದು, ಇಂದು ನಾಪೋಕ್ಲು ಮಾರ್ಗದಲ್ಲಿ ನಾಲ್ಕು ಅಡಿ ನೀರು ಹರಿಯುತ್ತಿದ್ದರೆ, ಭಾಗಮಂಡಲ - ಮಡಿಕೇರಿ ರಸ್ತೆಯಲ್ಲಿ 2 ಅಡಿಗೂ ಅಧಿಕ ನೀರು ಹರಿಯತೊಡಗಿದೆ. ಹೀಗಾಗಿ ಪೊಲೀಸರು ಯಾವದೇ ವಾಹನಗಳು ರಸ್ತೆ ದಾಟಿ ಹೋಗಲು ಬಿಡುತ್ತಿಲ್ಲ. ಮಡಿಕೇರಿ ತಾಲೂಕು ತಹಶೀಲ್ದಾರ್ ಕುಸುಮ ಅವರು ಖುದ್ದು ಪರಿಸ್ಥಿತಿ ವೀಕ್ಷಿಸಿ ಕಂದಾಯ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚಿಸಿದರು.

ಸಿಲುಕಿಕೊಂಡ ವಾಹನ : ತಮಿಳುನಾಡಿನಿಂದ ಬಂದಿದ್ದ ಪ್ರವಾಸಿ ತಂಡದ ವಾಹನವೊಂದು ಅಯ್ಯಂಗೇರಿ ಮಾರ್ಗದಲ್ಲಿ ತೆರಳದಂತೆ ಸೂಚಿಸಿದರೂ ಲೆಕ್ಕಿಸದೆ ನಾಪೋಕ್ಲುವಿನತ್ತ ತೆರಳುವಾಗ ನಡುವೆ ನೀರಿನಲ್ಲಿ ವಾಹನ ಸಿಲುಕಿಕೊಂಡಿತು. ಬಳಿಕ ಸಾರ್ವಜನಿಕರು, ಪೊಲೀಸ್, ಗೃಹರಕ್ಷಕರು ರ್ಯಾಫ್ಟಿಂಗ್ ಮೂಲಕ ವಾಹನದಲ್ಲಿದ್ದ 10 ಮಂದಿಯನ್ನು ದಡ ಸೇರಿಸಿ, ಕೆಟ್ಟು ನಿಂತಿದ್ದ ವಾಹನವನ್ನು ತಳ್ಳಿಕೊಂಡು ಬಂದು ಪಕ್ಕಕ್ಕೆ ಇರಿಸಲಾಯಿತು.

ಕಟ್ಟುನಿಟ್ಟಿನ ಕ್ರಮ : ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಪೊಲೀಸರು ಪ್ರವಾಸಿಗರ ಸಹಿತ ಯಾವದೇ ವಾಹನವು ನೀರಿನಲ್ಲಿ ದಾಟಿಸುವ ಯತ್ನಕ್ಕೆ ತಡೆ ಹಾಕಿದ್ದು, ಅಪಾಯ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

ಅಲ್ಲಲ್ಲಿ ಮಳೆ : ಕಳೆದ 24 ಗಂಟೆಗಳಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತ 3.48 ಇಂಚು, ನಾಪೋಕ್ಲು ವ್ಯಾಪ್ತಿಯಲ್ಲಿ 3.55 ಇಂಚು, ಸಂಪಾಜೆ ಹೋಬಳಿಗೆ 2.31 ಇಂಚು ಮಳೆಯಾಗಿದೆ. ವೀರಾಜಪೇಟೆ ವ್ಯಾಪ್ತಿಗೆ 2.50 ಇಂಚು, ಅಮ್ಮತ್ತಿ 2.36 ಇಂಚು, ಶ್ರೀಮಂಗಲ 3.09 ಇಂಚು, ಹುದಿಕೇರಿ 3.81 ಇಂಚು ಹಾಗೂ ಬಾಳೆಲೆಗೆ 1.51 ಮತ್ತು ಪೊನ್ನಂಪೇಟೆ ಸರಹದ್ದಿನಲ್ಲಿ 1.59 ಇಂಚು ಮಳೆ ದಾಖಲಾಗಿದೆ.

ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹಾಗೂ ಶಾಂತಳ್ಳಿಗೆ ಭಾರೀ ಮಳೆಯಾಗಿದ್ದು, ತಾಲೂಕು ಕೇಂದ್ರದಲ್ಲಿ 3.30 ಇಂಚು ಮಳೆ ಸುರಿದಿದೆ. ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ 2.75 ಇಂಚು, ಕುಶಾಲನಗರ ಸುತ್ತಮುತ್ತ 0.71 ಇಂಚು ಹಾಗೂ ಸುಂಟಿಕೊಪ್ಪ ಸುತ್ತಲಿನ ಪ್ರದೇಶಗಳಲ್ಲಿ 1.33 ಇಂಚು ಮಳೆಯಾಗಿದೆ.

ಹಾರಂಗಿ ನೀರಿನ ಮಟ್ಟ : 2859 ಗರಿಷ್ಠ ನೀರಿನ ಪ್ರಮಾಣದ ಹಾರಂಗಿ ಜಲಾಶಯದಲ್ಲಿ ಪ್ರಸಕ್ತ 2856.44 ಅಡಿ ನೀರಿನ ಮಟ್ಟ ಕಾಯ್ದುಕೊಳ್ಳಲಾಗಿದೆ. 15162 ಕ್ಯೂಸೆಕ್ಸ್ ಜಲಾಶಯಕ್ಕೆ ನೀರು ಬರುತ್ತಿದ್ದು, 18334 ಕ್ಯೂಸೆಕ್ಸ್ ಹೊರಬಿಡಲಾಗಿದೆ. ನಾಲೆಗೆ 45 ಕ್ಯೂಸೆಕ್ಸ್ ಬಿಡಲಾಗಿದೆ.

ಒಟ್ಟಿನಲ್ಲಿ ಕಳೆದ 24 ಗಂಟೆಗಳಲ್ಲಿ ರಾತ್ರಿ ವೇಳೆ ವಿಪರೀತ ಮಳೆಯಾಗಿದ್ದು, ಹಗಲಿನಲ್ಲಿ ಸ್ವಲ್ಪ ಸುಧಾರಣೆ ಕಂಡುಬಂತು. ಮಧ್ಯಾಹ್ನ ಬಳಿಕ ಶಾಂತಳ್ಳಿ ಬೆಟ್ಟ ಸಾಲುಗಳೊಂದಿಗೆ ಪುಷ್ಪಗಿರಿಯಿಂದ ಬ್ರಹ್ಮಗಿರಿ ಸಾಲುಗಳಲ್ಲಿ ಮಳೆ ಜೋರಾಗಿದ್ದು, ನದಿಗಳಲ್ಲಿ ನೀರಿನ ಹರಿಯುವಿಕೆ ಏರತೊಡಗಿದೆ. ಜಿಲ್ಲಾಡಳಿತ ವ್ಯಾಪಕ ಮುಂಜಾಗ್ರತಾ ಕ್ರಮಗಳಿಗೆ ಆಯ ಇಲಾಖೆಗಳಿಗೆ ಸೂಚಿಸಿದೆ.

ಕತ್ತಲೆಯಲ್ಲಿ ಗ್ರಾಮಗಳು

ಆಲೂರುಸಿದ್ಧಾಪುರ : ಆಲೂರುಸಿದ್ಧಾಪುರ ಹಂಡ್ಲಿ ಸೇರಿದಂತೆ ಸುತ್ತಮುತ್ತ ಮತ್ತೆ ಭಾರೀ ಮಳೆ ಗಾಳಿ ಮುಂದುವರಿದಿದ್ದು, ಕೆಲವೆಡೆ ರಸ್ತೆಗೆ ಅಡ್ಡಲಾಗಿ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ; ಅನೇಕ ಗ್ರಾಮಗಳು ಕಳೆದ ಮೂರು ದಿನಗಳಿಂದ ಕತ್ತಲೆಯಲ್ಲಿ ಕಳೆಯುವಂತಾಗಿದೆ.

ಆಲೂರು ಗ್ರಾಮ ಪಂಚಾಯಿತಿಗೆ ಒಳಪಡುವ ಕಣಿವೆ ಬಸವನಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಒಳ ಚರಂಡಿ ಇಲ್ಲದೆ ರಸ್ತೆಯೆಲ್ಲ ಕೆರೆಗಳಾಂತಾಗಿವೆ.

ಶನಿವಾರಸಂತೆ ಕುಶಾಲನಗರ ಮುಖ್ಯ ರಸ್ತೆಯ ಆಲೂರುಸಿದ್ದಾಪುರ ಸೇರಿದಂತೆ ಅಲ್ಲಲ್ಲಿ ರಸ್ತೆಯ ಒಳ ಚರಂಡಿಗಳು ಮುಚ್ಚಿರುವದರಿಂದ ಮುಖ್ಯ ರಸ್ತೆಯಲ್ಲೇ ಮಳೆ ನೀರೆಲ್ಲ ಹರಿಯುತ್ತಿದೆ. ಇದರಿಂದ ಗುಂಡಿ ಇರುವ ರಸ್ತೆಗಳು ಕೆರೆಯಂತಾಗಿವೆ. ಶನಿವಾರಸಂತೆ ಗ್ರಾಮ ಪಂಚಾಯಿತಿಯ ಕೆಲವೆಡೆ ಒಳ ಚರಂಡಿ ಸರಿ ಇಲ್ಲದೆ ನೀರೆಲ್ಲ ರಸ್ತೆಯಲ್ಲೆ ಹರಿದರೆ ಹಂಡ್ಲಿ ಗ್ರಾಮ ಪಂಚಾಯಿತಿಯ ಗುಡುಗಳಲೆ ಸೇತುವೆ ಮೇಲೆಯೆ ಮಳೆ ನೀರೆಲ್ಲ ಸಂಗ್ರಹವಾಗುತ್ತಿದ್ದು, ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಭಾರೀ ಗಾಳಿ ಸಹಿತ ಮಳೆಯಾಗುತ್ತಿರುವದರಿಂದ ಕೆಲ ಕಾಫಿ ತೋಟಗಳಲ್ಲಿ ಕಾರ್ಮಿಕರಿಗೆ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.

ನೀರಿನ ಇಳಿಮುಖ

ವೀರಾಜಪೇಟೆ : ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗ್ಗಿನಿಂದ ಇಂದು ಬೆಳಗ್ಗಿನ ತನಕ ಒಟ್ಟು 2.6 ಇಂಚುಗಳಷ್ಟು ಮಳೆ ಸುರಿದಿದೆ. ಜಲಾವ್ರತಗೊಂಡ ಗದ್ದೆ, ಬಾಣೆ ಜಾಗಗಳಲ್ಲಿ ನೀರಿನ ಮಟ್ಟ ಇಳಿಮುಖಗೊಳ್ಳುತ್ತಿದೆ. ಬೇತ್ರಿಯ ಕಾವೇರಿ ಹೊಳೆ, ಕದನೂರಿನ ಕಾವೇರಿ ಉಪ ಹೊಳೆಯ ನೀರಿನ ಮಟ್ಟ ಇಳಿಯುತ್ತಿದೆ. ಆರ್ಜಿ, ಪೆರುಂಬಾಡಿ, ಬಿಟ್ಟಂಗಾಲ, ವಿ.ಬಾಡಗದಲ್ಲಿಯೂ ನೀರಿನ ಮಟ್ಟ ಇಳಿಕೆ ಕಂಡು ಬಂದಿದೆ.

ಸುಂಟಿಕೊಪ್ಪ : ಕೆದಕಲ್ ಗ್ರಾಮದ ನಿವಾಸಿ ಬಿ.ಬಿ.ರಮೇಶ ರೈ ಅವರ ಕೊಟ್ಟಗೆ ಮೇಲೆ ಭಾರೀ ಮಳೆ, ಬಿರುಗಾಳಿಗೆ ಮರ ಬಿದ್ದು ಕೊಟ್ಟಿಗೆ ಮೇಲ್ಚಾವಣಿ ಶೀಟುಗಳು ಧ್ವಂಸವಾಗಿದೆ.

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಭಾರೀ ಮಳೆ ಬಿರುಗಾಳಿಗೆ ಮರಗಳು ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದು ಅಪಾರ ನಷ್ಟ ಒಂದೆಡೆಯಾದರೆ ಹಲವು ಗ್ರಾಮಗಳಲ್ಲಿ ಕಾರ್ಗತ್ತಲೆ ಮೂಡಿಸಿದೆ. ಗ್ರಾಮಗಳಿಗೆ ತೆರಳುವ ರಸ್ತೆಗಳಲ್ಲಿ ಸಂಪರ್ಕ ಕಡಿತಗೊಂಡಿದೆ.

ಪನ್ಯ ನಾಕೂರು ಕಾನ್‍ಬೈಲು ಸುಂಟಿಕೊಪ್ಪದ ಲಕ್ಷ್ಮಿ ತೋಟದಲ್ಲಿ ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿದ್ದು ವಿದ್ಯುತ್ ಕಡಿತಗೊಂಡಿದೆ. ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಕತ್ತಲಿನಲ್ಲಿ ದಿನ ದೂಡುವಂತಾಗಿದೆ. ಸುಂಟಿಕೊಪ್ಪ ಹೋಬಳಿಯಲ್ಲಿ ಎಲ್ಲೆಂದರಲ್ಲಿ ವಿದ್ಯುತ್ ಕಂಬ ಉರುಳಿ ಬಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ ಎಂದು ಸೆಸ್ಕ್ ಇಂಜಿನಿಯರ್ ರಮೇಶ್ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.

ಕುಶಾಲನಗರ : ಕುಶಾಲನಗರ ವ್ಯಾಪ್ತಿಯಲ್ಲಿ ಗುರುವಾರ ಮಳೆ ಕ್ಷೀಣಿಸುವದರೊಂದಿಗೆ ಬಿಸಿಲು ಕಾಣಿಸಿಕೊಂಡರೂ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆ ಕಂಡುಬಂದಿತ್ತು. ನದಿ ಅಪಾಯದ ಮಟ್ಟ ಮೀರಿ ಹರಿದು ನದಿ ತಟದ ಹಳ್ಳಕೊಳ್ಳಗಳಲ್ಲಿ ನೀರು ತುಂಬಿದ ದೃಶ್ಯ ಗೋಚರಿಸಿದೆ.

ನದಿಯ ಗರಿಷ್ಠ ಪ್ರಮಾಣ 7 ಮೀ ಗಿಂತಲೂ ಎತ್ತರದಲ್ಲಿ ನೀರು ಹರಿಯುವದರೊಂದಿಗೆ ನೆರೆಯ ಟಿಬೇಟಿಯನ್ ಕ್ಯಾಂಪ್, ಆವರ್ತಿ, ಕೂಡಿಗೆ ವ್ಯಾಪ್ತಿಯಲ್ಲಿ ಸಂಪರ್ಕ ರಸ್ತೆಗಳು ಕಡಿತಗೊಂಡಿದ್ದವು. ಹಾರಂಗಿ ನದಿಯಿಂದ ಹೆಚ್ಚುವರಿ ನೀರನ್ನು ಬಿಟ್ಟ ಹಿನ್ನೆಲೆಯಲ್ಲಿ ಕಾವೇರಿ ನದಿಯ ಹಿನ್ನೀರು ಈ ಅವಾಂತರಗಳಿಗೆ ಕಾರಣವಾಗಿತ್ತು. ಕುಶಾಲನಗರದಿಂದ ಮೈಸೂರಿಗೆ ತೆರಳುವ ಹೆದ್ದಾರಿಯ ಕೊಪ್ಪ ವ್ಯಾಪ್ತಿಯಲ್ಲಿ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು ಸ್ವಲ್ಪ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಹೆಚ್ಚಿನ ಅನಾಹುತ ಕಂಡುಬಂದಿಲ್ಲ.

ಶನಿವಾರಸಂತೆ : ಹೋಬಳಿಯಾದ್ಯಂತ ಗುರುವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕೆಲ ಕಾಲ ಬಿಡುವು ನೀಡುತ್ತಾ ಇದ್ದಕ್ಕಿದ್ದಂತೆ ಜೋರಾಗಿ ಸುರಿಯುತ್ತಿತ್ತು. ಒಟ್ಟು ಒಂದು ಇಂಚು ಮಳೆಯಾಗಿದೆ. ಗಾಳಿಯ ಆರ್ಭಟ ಮಾತ್ರ ಹೆಚ್ಚಾಗಿದ್ದು, ಗಾಳಿಯ ರಭಸಕ್ಕೆ ಅಲ್ಲಲ್ಲಿ ಹಾನಿಗಳಾಗಿವೆ.

ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮದಲ್ಲಿ ಕೂಲಿ ಕಾರ್ಮಿಕ ಮಹಿಳೆ ಕಮಲಮ್ಮ ಅವರ ಮನೆಯ ಮೇಲೆ ಬೆಳಗಿನ ಜಾವ 4 ಗಂಟೆಗೆ ಮರ ಬಿದ್ದು ಹಾನಿಯಾಗಿದೆ. ಬಿದರೂರು ಗ್ರಾಮದ ಗದ್ದೆ ಬಯಲಿನಲ್ಲಿ 3 ವಿದ್ಯುತ್ ಕಂಬಗಳು ಧರೆಗುರುಳಿವೆ. ಚಿಕ್ಕಕೊಳತ್ತೂರು ಗ್ರಾಮದ ಸರ್ಕಾರಿ ಶಾಲೆಯ ಬಳಿ 5 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ನಾಗರಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ವಿದ್ಯುತ್ ಇಲಾಖೆ ನೌಕರರು ದುರಸ್ತಿ ಕಾರ್ಯಕೈಗೊಂಡಿದ್ದರು.

ಕರಡಿಗೋಡಿನಲ್ಲಿ ಮನೆ ಜಲಾವೃತ

ಸಿದ್ದಾಪುರ : ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಸಿದ್ದಾಪುರದ ಕರಡಿಗೋಡು ಗ್ರಾಮದ ನದಿದಡದಲ್ಲಿ ಪ್ರವಾಹ ನೀರು ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ 9 ಮನೆಗಳು ಜಲಾವೃತಗೊಂಡಿದೆ. ನದಿಯಲ್ಲಿ ಅಪಾಯದ ಮಟ್ಟದಲ್ಲಿ ಪ್ರವಾಹ ನೀರು ಹರಿಯುತ್ತಿದ್ದು, ನದಿದಡದ ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ.

ಕರಡಿಗೋಡು ಗ್ರಾಮದ ನದಿ ದಡದಲ್ಲಿ ಪ್ರವಾಹದ ನೀರಿನ ಹೊಡೆತಕ್ಕೆ ನದಿ ದಡ ಕುಸಿದು ಹಲವಾರು ಮಂದಿಯ ಮನೆಯ ಹಿಂಭಾಗ ಕುಸಿದಿದೆ. ಅಲ್ಲದೇ ಮನೆ ಬಿರುಕು ಬಿಟ್ಟಿದೆ. ಸಿದ್ದಾಪುರ- ಕರಡಿಗೋಡು ರಸ್ತೆಯಲ್ಲಿ ಪ್ರವಾಹ ನೀರು ರಸ್ತೆಯ ಮೇಲೆ ಬಂದಿದ್ದು, ಸಂಪರ್ಕ ಕಡಿತಗೊಂಡಿದೆ. ಗುಹ್ಯ ಗ್ರಾಮದ ಐತಿಹಾಸಿಕ ಶ್ರೀ ಅಗಸ್ತ್ಯೇಶ್ವರ ದೇವಾಲಯಕ್ಕೆ ತೆರಳುವ ರಸ್ತೆಯು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಸಿದ್ದಾಪುರದ ಕಾವೇರಿ ನದಿಯ ಬಳಿವಿರುವ ಪೂವಯ್ಯನವರ ಗದ್ದೆಗಳು ಕೂಡ ಜಲಾವೃತಗೊಂಡಿದೆ. ಕರಡಿಗೋಡುವಿನಲ್ಲಿ ಪ್ರವಾಹ ನೀರು ಏರಿಕೆಯಾದ ಹಿನ್ನೆಲೆಯಲ್ಲಿ ಕಂದಾಯ ಪರಿವೀಕ್ಷಕ ವಿನು ಹಾಗೂ ಗ್ರಾಮಲೆಕ್ಕಿಗರಾದ ಅನಿಲ್‍ಕುಮಾರ್, ಮಂಜುನಾಥ್, ಸಹಾಯಕ ಕೃಷ್ಣ ಮಂಜು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ನೆಲ್ಯಹುದಿಕೇರಿಯ ಗ್ರಾಮದ ಬೆಟ್ಟದ ಕಾಡುವಿನ ನದಿದಡದ ನಿವಾಸಿಗಳಿಗೆ ಸ್ಥಳೀಯ ಅಂಗನವಾಡಿಯಲ್ಲಿ ಗಂಜಿಕೇಂದ್ರ ತೆರೆಯಲಾಗಿದೆ. ಸ್ಥಳಕ್ಕೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಮಹೇಶ್, ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮಲೆಕ್ಕಿಗ ಅನುಷ, ಸಹಾಯಕ ಸ್ವಾಮಿ ಅವರು ಭೇಟಿ ನೀಡಿ ಪರಿಶೀಲಿಸಿದರು.

ತಿತಿಮತಿಗೆ ಭೇಟಿ

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಮಳೆ ಹಾನಿ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು. ತಿತಿಮತಿ ಬಳಿ ನೂತನವಾಗಿ ನಿರ್ಮಾಣವಾಗಿರುವ ಸೇತುವೆಯನ್ನು ವೀಕ್ಷಣೆ ಮಾಡಿದರು. ಕಳೆದ ಎರಡು ದಿನಗಳಿಂದ ಈ ಸೇತುವೆ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿವೆ.

ಭಾರೀ ಮಳೆಗೆ ಮೂರು ಮನೆಗಳು ಕುಸಿತ

ಕೂಡಿಗೆ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಮೂರು ಮನೆಗಳು ಕುಸಿತಗೊಂಡಿವೆ. ಭಾರೀ ಮಳೆಗೆ ಅಲ್ಲಿನ ನಿವಾಸಿಗಳಾದ ಕುಮಾರ್, ದೊಡ್ಡಯ್ಯ, ರತ್ನ ಎಂಬವರುಗಳಿಗೆ ಸೇರಿದ ಮನೆಯ ಗೋಡೆ ಇಂದು ಬೆಳಿಗ್ಗೆ 10 ಗಂಟೆಗೆ ಕುಸಿದಿದೆ. ಯಾವದೇ ಪ್ರಾಣಹಾನಿ ಆಗಿಲ್ಲ. ಸ್ಥಳಕ್ಕೆ ಕೂಡಿಗೆ ಗ್ರಾ.ಪಂ. ಸದಸ್ಯ ಟಿ.ಕೆ. ವಿಶ್ವನಾಥ್, ಗ್ರಾಮ ಲೆಕ್ಕಿಗ ಸಚಿನ್ ಭೇಟಿ ನೀಡಿ ಪರಿಶೀಲಿಸಿದರು.