ಸಿದ್ದಾಪುರ, ಜು. 14: ನೆಲ್ಯಹುದಿಕೇರಿ ವ್ಯಾಪ್ತಿಯ ಬೆಟ್ಟದಕಾಡು, ಬಲಂಜಿಕರೆ, ಅರೆಕಾಡು ಭಾಗದ ಕಾಫಿತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಅರಣ್ಯಕ್ಕೆ ಅಟ್ಟಿದ್ದಾರೆ.

ಇಂದು ಬೆಳಗ್ಗಿನಿಂದಲೇ ಬಲಂಜಿಕರೆ, ಬೆಟ್ಟದಕಾಡು ಭಾಗದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಪಟಾಕಿ ಸಿಡಿಸಿ ದುಬಾರೆ ಅರಣ್ಯಕ್ಕೆ ಅಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ 25 ಮಂದಿ ಅರಣ್ಯ ಸಿಬ್ಬಂದಿಗಳ 3 ತಂಡಗಳು ಭಾಗವಹಿಸಿತ್ತು. ಕಾರ್ಯಾಚರಣೆ ಸಂದರ್ಭ ಕಾಫಿ ತೋಟಗಳಲ್ಲಿ ಮರಿ ಆನೆ ಸೇರಿದಂತೆ 10 ಕ್ಕೂ ಅಧಿಕ ಕಾಡಾನೆಗಳು ಕಂಡುಬಂದವು ಎಂದು ತಿಳಿದುಬಂದಿದೆ. ಡಿ.ಸಿ.ಎಫ್ ಮಂಜುನಾಥ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯ ನೇತೃತ್ವವನ್ನು ಎ.ಸಿ.ಎಫ್ ಎಮ್.ಎಸ್ ಚಿಣ್ಣಪ್ಪ ವಹಿಸಿದ್ದರು. ಈ ಸಂದರ್ಭ ಕುಶಾಲನಗರದ ವಲಯ ಅರಣ್ಯಾಧಿಕಾರಿ ಅರುಣ್, ಉಪ ವಲಯ ಅರಣ್ಯಾಧಿಕಾರಿ ರಂಜನ್ ಸೇರಿದಂತೆ ಸಿಬ್ಬಂದಿಗಳು ಇದ್ದರು.

ಗ್ರಾಮಸ್ಥರೊಂದಿಗೆ ಸಭೆ

ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಗ್ರಾಮಸ್ಥರು ಹಾಗೂ ಬೆಳೆಗಾರರು ಇತ್ತೀಚೆಗೆ ಸಭೆ ನಡೆಸಿ, ಕಾಡಾನೆ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಬೇಕು ಹಾಗೂ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ಒತ್ತಾಯಿಸಿ ಅರಣ್ಯ ಇಲಾಖೆಯ ವಿರುದ್ದ ತಾ. 16 ರಂದು ನೆಲ್ಯಹುದಿಕೇರಿ ಬಂದ್ ಮಾಡಿ ಪ್ರತಿಭಟನೆ ನಡೆಸುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಡಿಕೇರಿ ವಿಭಾಗದ ಡಿ.ಸಿ.ಎಫ್ ಮಂಜುನಾಥ್ ಅವರು ನೆಲ್ಯಹುದಿಕೇರಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಈಗಾಗಲೇ ನೆಲ್ಯಹುದಿಕೇರಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲಾಗುವದು ಹಾಗೂ ಕಾಡಾನೆ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಸರಕಾರ ರೈಲ್ವೆ ಹಳಿ ಬೇಲಿ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿದ್ದು, ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವದೆಂದು ಮಾಹಿತಿ ನೀಡಿದರು. ಅಲ್ಲದೇ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟಲು ಉಪ ವಲಯ ಅರಣ್ಯಾಧಿಕಾರಿ ರಂಜನ್ ನೇತೃತ್ವದಲ್ಲಿ ತಂಡವನ್ನು ರಚಿಸಿ, ನಾಡಿಗೆ ಕಾಡಾನೆ ಬರದಂತೆ ಕ್ರಮ ಕೈಗೊಳ್ಳಲಾಗುವ ದೆಂದು ಭರವಸೆ ನೀಡಿದರು.

-ಎ.ಎನ್. ವಾಸು