ಗೋಣಿಕೊಪ್ಪಲು.ಜು.13.ದ.ಕೊಡಗಿನ ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡಾನೆಯ ಹಾವಳಿ ಹೆಚ್ಚಾಗುತ್ತಿದ್ದು ಸಾರ್ವಜನಿಕರು, ಕಾರ್ಮಿಕರು,ದಿನ ನಿತ್ಯದ ಬದುಕನ್ನು ಮುಂದುವರೆಸಬೇಕಾದ ಅನಿವಾರ್ಯತೆ ಬಂದೊದಗಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ಹೋರಾಟಗಳು ನಡೆಸುತ್ತಿದ್ದಾರೆ. ಈ ಮಧ್ಯೆ ಇಂದು ಕೂಡಾ ವ್ಯಕ್ತಿ ಆನೆ ಧಾಳಿಗೆ ಒಳಗಾಗಿ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಕಳೆದ ಏಳು ವರ್ಷಗಳಿಂದ ಪಾಲಿಬೆಟ್ಟದ ಟಾ.ಟಾ. ಕಂಪೆನಿಯಲ್ಲಿ ಕಾಡಾನೆ ‘ಟ್ರ್ಯಾಕರ್ ಗನ್ ಮ್ಯಾನ್’ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೂಲತಃ ಗೂಡ್ಲೂರು ಗ್ರಾಮದ ಕೆ.ಕೆ.ರಾಮಯ್ಯ ಶುಕ್ರವಾರ ಮುಂಜಾನೆ ಎಂದಿನಂತೆ ಟಾಟಾ ಕಾಫಿ ಪಾಲಿಬೆಟ್ಟ ತೋಟದ ಮಟ್ಟಪರಂಬು ಡಿವಿಜನ್‍ನಲ್ಲಿ ಕೆಲಸ ಆರಂಭಿಸಿದರು. ಸುಮಾರು ಎರಡು ಕಿ.ಮೀ. ವಿಸ್ತೀರ್ಣದ ಕಾಫಿ ತೋಟದಲ್ಲಿ ಕಾರ್ಮಿಕರು ಎಂದಿನಂತೆ ಕೆಲಸ ನಿರ್ವಹಿಸಬೇಕಾಗಿತ್ತು. ಕಾಡಾನೆಗಳು ತೋಟದೊಳಗೆ ಇರುವದನ್ನು ಗಮನಿಸಿದ ನಂತರವೇ ಕಾರ್ಮಿಕರು ಆ ತೋಟಕ್ಕೆ ತೆರಳಬೇಕು.ಈ ಕೆಲಸ ನಿರ್ವಹಣೆಯನ್ನು ‘ಟ್ರ್ಯಾಕರ್ ಗನ್ ಮ್ಯಾನ್’ ಆಗಿದ್ದ ರಾಮಯ್ಯನವರು ನಿರ್ವಹಿಸುತ್ತಿದ್ದರು. ಮಾಮೂಲಿ ಕೆಲಸಕ್ಕೆ ತೆರಳಿದ ರಾಮಯ್ಯನವರು ತೋಟದ ಅರ್ಧ ಭಾಗಕ್ಕೆ ತೆರಳುತ್ತಿದ್ದಂತೆಯೇ ವಿಪರೀತವಾದ ಮಳೆಯಿಂದ ತೋಟದಲ್ಲಿರುವ ಕಾಡಾನೆಯನ್ನು ಗ್ರಹಿಸುವಲ್ಲಿ ವಿಫಲರಾದರು. ದಿಢೀರನೆ ತೋಟದಲ್ಲಿದ್ದ ಕಾಡಾನೆಯು ತೋಟದ ರಸ್ತೆಗೆ ಆಗಮಿಸಿದ್ದರಿಂದ ರಾಮಯ್ಯನವರಿಗೆ ಗಾಬರಿಯಾಗಿದೆ. ತನ್ನಲ್ಲಿರುವ ಗನ್ ಅನ್ನು ಉಪಯೋಗಿಸುವಷ್ಟರಲ್ಲಿ ಕಾಡಾನೆ ರಾಮಯ್ಯನವರನ್ನು ಬೀಳಿಸಿ ಗಾಬರಿಯಿಂದ ತೆರಳಿದೆ. ತಲೆ ಭಾಗಕ್ಕೆ ತೀವ್ರ ಗಾಯಗೊಂಡರೂ ಅದೃಷ್ಟವಶಾತ್ ರಾಮಯ್ಯ ಪ್ರಾಣಾಪಾಯದಿಂದ ಪಾರಾದರು. ಧೈರ್ಯದಿಂದ 1.5 ಕಿ.ಮೀ. ದೂರ ಓಡಿ ಬಂದು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ಸಂಸ್ಥೆಯ ಆಸ್ಪತ್ರೆಯಲ್ಲಿ ತಕ್ಷಣ ಚಿಕಿತ್ಸೆ ಲಭ್ಯವಾದ ಕಾರಣ ತಲೆ ಭಾಗದಿಂದ ಹರಿಯುತ್ತಿದ್ದ ರಕ್ತ ನಿಯಂತ್ರಣಕ್ಕೆ ಬಂದಿದೆ.

ಜೆಡಿಎಸ್‍ನ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯನವರು ಪಾಲಿಬೆಟ್ಟ ಟಾಟಾ ಕಾಫಿ ಆಸ್ಪತ್ರೆಗೆ ತೆರಳಿ ಕಾರ್ಮಿಕ ರಾಮಯ್ಯನ ಆರೋಗ್ಯ ಕ್ಷೇಮಾ ವಿಚಾರಿಸಿದರು. ವೈಯಕ್ತಿಕವಾಗಿ 10 ಸಾವಿರ ಸಹಾಯ ಧನ ನೀಡುವ ಮೂಲಕ ಕಾರ್ಮಿಕನ ಸಂಕಷ್ಟದಲ್ಲಿ ಭಾಗಿಗಳಾದರು.

ಸ್ಥಳದಿಂದ ಕರ್ನಾಟಕ ರಾಜ್ಯ ವನ್ಯ ಜೀವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್‍ರವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಜಿಲ್ಲೆಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕು ತಕ್ಷಣ ನೊಂದ ರಾಮಯ್ಯನವರಿಗೆ ಪರಿಹಾರವನ್ನು ವಿತರಿಸಲು ಇಲ್ಲಿಯ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿಕೊಂಡರು.ಸಂಕೇತ್ ಭೇಟಿಯ ಸಂದರ್ಭ ಜೆಡಿಎಸ್‍ನ ಪ್ರಮುಖರಾದ ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಅಮ್ಮತ್ತಿ ಜಯಮ್ಮ, ಕಾರ್ಮಿಕ ವಿಭಾಗದ ಮುಖಂಡ ರೆನ್ನಿ, ಗೂಡ್ಲೂರು ಭಾಗದ ಪಕ್ಷದ ಮುಖಂಡರಾದ ದೇವರಾಜು ವಿ.ಸಿ.,ವಸಂತ್, ಸೋಮಯ್ಯ ಜಿ.ಬಿ.ಪ್ರಕಾಶ್, ದಿನೇಶ್, ರತನ್, ಪೂವಯ್ಯ, ಯೋಗೇಶ್, ಮುಂತಾದವರು ಉಪಸ್ಥಿತರಿದ್ದರು.

- ಹೆಚ್.ಕೆ.ಜಗದೀಶ್, ವಾಸು ಸಿದ್ದಾಪುರ