ಕುಶಾಲನಗರ, ಜು. 13: ಕುಶಾಲನಗರ ಕಾರು ಚಾಲಕರು ಮತ್ತು ಮಾಲೀಕರ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಅಡವಿಟ್ಟ ಚಿನ್ನವನ್ನು ಗ್ರಾಹಕರಿಗೆ ಹಿಂತಿರುಗಿಸದ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ಹಿತರಕ್ಷಣಾ ವೇದಿಕೆಯ ಪ್ರಮುಖರು ಗ್ರಾಹಕರಿಗೆ ನ್ಯಾಯ ಒದಗಿಸುವಂತೆ ಕೋರಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ಗುರುವಾರ ನಡೆಯಿತು.
ಬಾಪೂಜಿ ಬಡಾವಣೆಯಲ್ಲಿರುವ ಸಂಘದ ಕಚೇರಿಯಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರ ನಡೆದಿದ್ದು, ಈ ಹಿನ್ನೆಲೆಯಲ್ಲಿ ಸಂಘದ ಗ್ರಾಹಕರು ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು ಈ ಬಗ್ಗೆ ಪೊಲೀಸ್ ಪುಕಾರು ನೀಡಲಾಗಿದ್ದರೂ ಯಾವದೇ ನ್ಯಾಯ ದೊರಕಿಲ್ಲ. ನೂರಾರು ಗ್ರಾಹಕರ ಹೆಸರಿನಲ್ಲಿ ಆಡಳಿತ ಮಂಡಳಿ ಕೆಲವು ಮಂದಿ ಮತ್ತು ಕಚೇರಿ ಸಿಬ್ಬಂದಿಗಳು ಅಧ್ಯಕ್ಷರು ಸೇರಿ 1 ಕೋಟಿ ರೂ.ಗಳಿಗೂ ಅಧಿಕ ಹಣ ಅವ್ಯವಹಾರವಾಗಿದೆ ಎನ್ನುವ ಆರೋಪ ಬಹಿರಂಗವಾಗಿದ್ದರೂ ಇನ್ನೂ ಯಾವದೇ ಕಾನೂನು ಕ್ರಮಕೈಗೊಂಡಿಲ್ಲ. ತಕ್ಷಣ ಆರೋಪಿಗಳ ಮೇಲೆ ಕಾನೂನು ಕ್ರಮಕೈಗೊಳ್ಳುವ ದರೊಂದಿಗೆ ಗ್ರಾಹಕರಿಗೆ ನೀಡಬೇಕಾದ ಚಿನ್ನ ಹಾಗೂ ಪಿಗ್ಮಿ ಹಣದ ಮೊತ್ತವನ್ನು ಕೂಡಲೆ ಸಂದಾಯ ಮಾಡುವಂತೆ ಈ ಸಂದರ್ಭ ಒತ್ತಾಯಿಸಿದರು. ಬ್ಯಾಂಕ್ ಸಿಬ್ಬಂದಿಗಳು, ಅಧ್ಯಕ್ಷರು ಸೇರಿದಂತೆ ಗ್ರಾಹಕರ ಪಿಗ್ಮಿ ಖಾತೆಯಲ್ಲಿ ಬೇನಾಮಿ ದಾಖಲೆ ನೀಡಿ 1 ಕೋಟಿಗೂ ಮಿಕ್ಕಿ ಹಣ ನಗದೀಕರಿಸಿರುವ ಆರೋಪದ ಹಿನ್ನೆಲೆಯಲ್ಲಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪುಕಾರು ದಾಖಲಾಗಿದೆ.
ಬೀಗ ಜಡಿದ ಸಂದರ್ಭ ಗ್ರಾಹಕರಿಗೆ ಯಾವದೇ ರೀತಿ ಸ್ಪಂದಿಸದ ಸಂಘದ ಸಿಬ್ಬಂದಿಗಳನ್ನು ಒಳಗೆ ಕೂಡಿಡಲಾಗಿತ್ತು. ಬೀಗ ಜಡಿಯುವ ಮೊದಲು ಪ್ರತಿಭಟನಾಕಾರರು ಸಂಘದ ಅಧ್ಯಕ್ಷರು, ನಿರ್ದೇಶಕರಿಗೆ ಹಲವು ಬಾರಿ ಮನವಿ ಮಾಡಿದರೂ ಬಾರದಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ ಎಂದು ಕುಶಾಲನಗರ ಹಿತರಕ್ಷಣಾ ಸಮಿತಿಯ ಸಂಚಾಲಕರಾದ ಕೆ.ಜಿ.ಮನು, ಮಂಜುನಾಥ್, ಎಂ.ಡಿ.ಕೃಷ್ಣಪ್ಪ, ಕೆ.ಎಸ್.ನಾಗೇಶ್ ಮತ್ತಿತರರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಾಂತರ ಅವ್ಯವಹಾರ ನಡೆಸಿದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಬೀಗ ಜಡಿದ ನಂತರ ಸ್ಥಳಕ್ಕೆ ಆಗಮಿಸಿದ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು ಪ್ರತಿಭಟನಾ ಕಾರರನ್ನು ತರಾಟೆಗೆ ತೆಗೆದುಕೊಂಡ ದೃಶ್ಯ ಗೋಚರಿಸಿತು. ಈ ಬಗ್ಗೆ ಪುಕಾರು ಸಲ್ಲಿಸಿರುವದಾಗಿ ಸಂಘದ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.