ಸುಂಟಿಕೊಪ್ಪ, ಜು. 14: ಕೃಷಿ ಇಲಾಖೆಗೆ ಸೃಷ್ಟಿಸಿದ ಅವಾಂತರದಿಂದ ಕೃಷಿ ಅಭಿಯಾನಕ್ಕೆ ಬಂದ ರೈತರು ಬೇಸ್ತು ಬಿದ್ದರು. ನೂತನ ಮುಖ್ಯ ಮಂತ್ರಿಯಾಗಿ ಕುಮಾರಸ್ವಾಮಿ 2 ತಿಂಗಳು ಪೂರೈಸಲಿದ್ದಾರೆ. ಆದರೆ ಕೃಷಿ ಇಲಾಖೆ ಕೈಪಿಡಿ ಪ್ರಕಾರ ಈಗಿನ ರಾಜ್ಯದ ಸಿಎಂ ಸಿದ್ದರಾಮಯ್ಯ! ಕೃಷಿ ಮಂತ್ರಿ ಕೃಷ್ಣ ಭೈರೇಗೌಡ!!
ಸುಂಟಿಕೊಪ್ಪ ಮಿನಾಕ್ಷಮ್ಮ ಮಂಜುನಾಥಯ್ಯ ಕಲ್ಯಾಣ ಮಂಟಪದಲ್ಲಿ ಸೋಮವಾರಪೇಟೆ ಕೃಷಿ ಇಲಾಖೆವತಿಯಿಂದ ತೋಟಗಾರಿಕೆ, ಪಶುವೈದ್ಯ ಇಲಾಖೆ, ಮೀನುಗಾರಿಕೆ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹೋಬಳಿ ಮಟ್ಟದ ಕೃಷಿ ಅಭಿಯಾನ ಆಯೋಜಿಸಲಾಗಿತ್ತು. ಕೃಷಿ ಇಲಾಖೆಯಿಂದ ರೈತರ ಮಾಹಿತಿಗಾಗಿ ಕೈ ಪಿಡಿಯನ್ನು ಸಿದ್ದಪಡಿಸಲಾಗಿತ್ತು. ಕೈಪಿಡಿಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ; ಈಗಿನ ಕೃಷ್ಣೇಭೈರೇಗೌಡ ಕೃಷಿ ಮಂತ್ರಿ ಎಂದು ಭಾವಚಿತ್ರ ಹಾಕಲಾಗಿತ್ತು. ಕೃಷಿ ಇಲಾಖೆಯ ಅವಾಂತರವಾಗಿ ಗಮನಿಸಿದ ತಾ.ಪಂ. ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಸಭೆ ಆರಂಭದಲ್ಲೇ ಈ ಕೈಪಿಡಿಯನ್ನು ಪ್ರದರ್ಶಿಸಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ? ಕೃಷಿ ಇಲಾಖೆಯಲ್ಲಿ ಕರಪತ್ರ ಸಿದ್ಧಪಡಿಸಲು ಹಣ ಇಲ್ಲವೇ ಖಾರವಾಗಿ ಪ್ರಶ್ನಿಸಿದರು.
ಸಮಾರಂಭದ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಜಿ.ಪಂ. ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ಅವರು ರೈತರ ಸಾಲಮನ್ನಾ ಮಾಡಿ ಒಳ್ಳೆಯ ಕೆಲಸ ಮಾಡುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭಾವಚಿತ್ರದ ಬದಲು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರ ಹಾಕಿರುವದು ಸರಿಯಲ್ಲ. ಇನ್ನು ಮುಂದೆ ಹೀಗಾಗಬಾರದೆಂದು ಸೂಚ್ಯವಾಗಿ ಹೇಳಿದರು.
ಕೃಷಿ ಸಹಾಯಕ ನಿರ್ದೇಶಕ ಡಾ.ರಾಜಶೇಖರ ಅವರು ಇದು ಹಳೆಯ ಕೃಷಿ ಕೈಪಿಡಿ ಮಾಹಿತಿಗಾಗಿ ಮಾತ್ರ ರೈತರಿಗೆ ನೀಡಿದ್ದೇವೆ ಎಂದು ಸಬೂಬು ನೀಡಿದರು.