ಮಡಿಕೇರಿ, ಜು. 13: ಕೇಂದ್ರ ಸರಕಾರದ ಅಸಮರ್ಥ ಆಡಳಿತದಿಂದ ಸಾಕಷ್ಟು ರಾಷ್ಟ್ರೀಕೃತ ಬ್ಯಾಂಕ್‍ಗಳು ಆರ್ಥಿಕ ನಷ್ಟದಲ್ಲಿದ್ದು, ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದ್ದು, ಮುಂದಿನ ಲೋಕಸಭಾ ಅಧಿವೇಶನದಲ್ಲಿ ಪರಿಹಾರ ಮಾರ್ಗದ ಸಲಹೆಗಳನ್ನು ಮಂಡಿಸಲಾಗುವದೆಂದು ಕೇಂದ್ರ ಸಂಸದೀಯ ಆರ್ಥಿಕ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ವಿವರಿಸಿದರು.ಕರ್ನಾಟಕದ ವಿವಿಧೆಡೆ 10 ದಿನ ಅಧ್ಯಯನ ಪ್ರವಾಸ ಕೈಗೊಂಡಿರುವ 12 ಮಂದಿಯ ತಂಡ ಮಡಿಕೇರಿಗೆ ಭೇಟಿ ನೀಡಿದ್ದ ಸಂದರ್ಭ ಖಾಸಗಿ ರೆಸಾರ್ಟ್‍ನಲ್ಲಿ ‘ಶಕ್ತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ದೇಶದ ಹಾಗೂ ರಾಜ್ಯದ ರಾಜಕೀಯ, ಆರ್ಥಿಕ ಸ್ಥಿತಿಗತಿ ಬಗ್ಗೆ ಅಭಿಪ್ರಾಯ ಹಂಚಿ ಕೊಂಡರು.ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ನಿರ್ವಹಿಸಬೇಕಾದ ಭಾರತೀಯ ರಿಸರ್ವ್ ಬ್ಯಾಂಕ್ ತನಗೆ ಅಧಿಕಾರವಿಲ್ಲ ವೆಂದು ಕೈ ಕಟ್ಟಿ ಕುಳಿತಿದ್ದು, ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಗಮನ ಹರಿಸದೆ ಇರುವದರಿಂದ ಅನೇಕ ಬ್ಯಾಂಕ್‍ಗಳು ಆರ್ಥಿಕ ದಿವಾಳಿತನದತ್ತ ಹೋಗುತ್ತಿದ್ದು, ಹೀಗೆ ಮುಂದುವರಿದರೆ ಗಂಡಾಂತರ ಕಾದಿದೆ ಎಂದು ಮೊಯ್ಲಿ ಆತಂಕ ವ್ಯಕ್ತಪಡಿಸಿದರು. ಹಲವು ಬ್ಯಾಂಕ್‍ಗಳ ವಿಲೀನದಿಂದ ಆರ್ಥಿಕ ಚೈತನ್ಯ ಸಾಧ್ಯವಿಲ್ಲವೆಂದು ಅನಿಸಿಕೆ ವ್ಯಕ್ತಪಡಿಸಿದ ಅವರು, ಸಮರ್ಥ ನಿರ್ವಹಣೆ ಇಲ್ಲದ್ದರಿಂದಲೇ ವಿಜಯ ಮಲ್ಯ, ನೀರವ್ ಮೋದಿಯಂತಹವರು ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿ ಪಲಾಯನ ಗೈಯಲು ಸಾಧ್ಯವಾಯಿತು ಎಂದು ವಿಶ್ಲೇಷಿಸಿದರು.
ರಾಜ್ಯದಲ್ಲೂ ಇದೀಗ 44000 ಕೋಟಿ ರೂಪಾಯಿ ಸಾಲ ಮನ್ನಾ ಘೋಷಣೆಯಾಗಿದ್ದು, ಆರ್ಥಿಕ ವ್ಯವಸ್ಥೆ ನಿರ್ವಹಣೆ ಅಷ್ಟೊಂದು ಸುಲಭವಿಲ್ಲ ವೆಂದೂ ಮಾಜಿ ಹಣಕಾಸು ಸಚಿವರೂ ಆದ ವೀರಪ್ಪ ಮೊಯ್ಲಿ ಅನುಭವವನ್ನು ಹಂಚಿಕೊಂಡರು.
ಪ್ರ:- ನಿಮ್ಮ ಕೊಡಗಿನ ಭೇಟಿಯ ಉದ್ದೇಶವೇನು?
ಉ:- ಕೇಂದ್ರ ಸಂಸದೀಯ ಆರ್ಥಿಕ ಸಮಿತಿಯಲ್ಲಿ 32 ಮಂದಿ ಸದಸ್ಯ ರಿದ್ದು, 12 ಮಂದಿ ರಾಜ್ಯದ ಹಲವೆಡೆ ಅಧ್ಯಯನ ಪ್ರವಾಸ ಕೈಗೊಂಡಿ ದ್ದೇವೆ. ವಿವಿಧ ಬ್ಯಾಂಕ್‍ಗಳು ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದ್ದೇವೆ.
(ಮೊದಲ ಪುಟದಿಂದ) ವಾಣಿಜ್ಯೋದ್ಯಮಿಗಳು, ರೈತರೊಂದಿಗೂ ಸಂವಾದ ಮಾಡಿದ್ದೇವೆ. ಕೊಡಗಿನಲ್ಲೂ ಇಂದು ಕಾಫಿ ಬೆಳೆಗಾರರೊಂದಿಗೆ ಚರ್ಚಿಸಿದ್ದೇವೆ.; ಸಮಸ್ಯೆಗಳ ಬಗ್ಗೆ ಅರಿವಾಗಿದೆ. ಮುಂದೆ ಎಲ್ಲವನ್ನೂ ಕ್ರೋಢೀಕರಿಸಿ ಲೋಕಸಭಾ ಅಧಿವೇಶನದಲ್ಲಿ ಮಂಡಿಸುತ್ತೇವೆ.
ಪ್ರ:- ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಏನನ್ನಿಸಿತು ಸಮಿತಿಗೆ?
ಉ:- ಹಲವು ಬ್ಯಾಂಕ್‍ಗಳು ಗಂಡಾಂತರ ಪರಿಸ್ಥಿತಿಯಲ್ಲಿವೆ. ನಿರ್ವಹಣಾ ಅಸಮರ್ಥತೆಯಿಂದ ನಷ್ಟದಲ್ಲಿವೆ; ಕೇಂದ್ರದ ನಿರ್ವಹಣೆ ಸರಿಯಿಲ್ಲ. ಎಲ್ಲವನ್ನು ಕ್ರೋಢೀಕರಿಸಿ ವರದಿ ತಯಾರಿಸುತ್ತೇವೆ.
ಪ್ರ:- ಒಂದೇ ತೆರಿಗೆ ಪದ್ಧತಿಯ ಜಿಎಸ್‍ಟಿ ಜಾರಿಗೊಂಡು 1 ವರ್ಷ ಕಳೆದಿದೆಯಲ್ಲಾ? ಅದರ ಯಶಸ್ಸಿನ ಬಗ್ಗೆ ಏನನ್ನುತ್ತೀರಿ?
ಉ:- ಜಿಎಸ್‍ಟಿ ಒಂದು ಉತ್ತಮ ವ್ಯವಸ್ಥೆ. ಆದರೆ, ಕೇಂದ್ರ ಸರಕಾರ ಅದನ್ನು ಜಾರಿ ಮಾಡಿದ ರೀತಿ ಸರಿಯಿಲ್ಲ. ಯಾವದೇ ತಯಾರಿಯಿಲ್ಲದೆ, ಸರಿಯಾದ ಮಾರ್ಗದರ್ಶನ ಪಡೆಯದೆ ತರಾತುರಿಯಲ್ಲಿ ಈ ವ್ಯವಸ್ಥೆಯನ್ನು ದೇಶದ ಮೇಲೆ ಹೇರಲಾಗಿದೆ. ಅದರಲ್ಲಿನ ಗೊಂದಲ ಇನ್ನೂ ನಿವಾರಣೆಯಾಗಿಲ್ಲ. ದೇಶದ ಉದ್ಯಮದಲ್ಲಿ ಶೇಕಡಾ 40 ರಷ್ಟು ಅಸಂಘಟಿತ ವಲಯವಿದ್ದು, ಎಲ್ಲರೂ ಸಂಕಷ್ಟ ಎದುರಿಸುತ್ತಿದ್ದಾರೆ. ಜೊತೆಗೆ ನಗದು ಅಮಾನ್ಯಕರಣವೂ ದೇಶದ ಆರ್ಥಿಕ ಸ್ಥಿತಿಯನ್ನು ಕುಸಿಯುವತ್ತ ಮಾಡಿದೆ. ವಿದೇಶಿ ಹಾಗೂ ಸ್ವದೇಶಿ ಬಂಡವಾಳ ಹೂಡಿಕೆ ಕಡಿಮೆಯಾಗಿದೆ; ಉದ್ಯೋಗ ಸೃಷ್ಟಿ ಕುಸಿದಿದೆ.
ಪ್ರ:- ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದಿರಿ; ರಾಜಕೀಯ ಸ್ಥಿತಿ ಹೇಗಿದೆ? ನರೇಂದ್ರ ಮೋದಿಯವರ ವಿರುದ್ಧ ವಿರೋಧ ಪಕ್ಷಗಳೆಲ್ಲ ಒಂದಾಗುತ್ತಿವೆಯಲ್ಲಾ? ಯಶಸ್ಸಾಗುತ್ತೀರಾ?
ಉ:- 2019ರ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಂದಾಗಿ ಬಿಜೆಪಿಯನ್ನು ಸೋಲಿಸುತ್ತೇವೆ. ನರೇಂದ್ರ ಮೋದಿ ಅವರ ಸರ್ವಾಧಿಕಾರ ಹಾಗೂ ಕೋಮುವಾದದ ವಿರುದ್ಧ ಈ ನಿಲುವು ಅನಿವಾರ್ಯವಾಗಿದೆ. ಹಲವು ರಾಜ್ಯಗಳಲ್ಲಿ ಹೊಂದಾಣಿಕೆ ಸಾಧ್ಯವಿಲ್ಲದಿದ್ದರೂ, ಕೇಂದ್ರದಲ್ಲಿ ಒಂದಾಗಿ ಚುನಾವಣೆಯನ್ನು ಎದುರಿಸುತ್ತೇವೆ; ಯಶಸ್ಸು ಕಾಣುತ್ತೇವೆ.
ಪ್ರ:- ರಾಜ್ಯದಲ್ಲೂ ಹೊಂದಾಣಿಕೆ ಸರ್ಕಾರ ಮಾಡಿದ್ದೀರಿ... ಜೆಡಿಎಸ್ ಪಕ್ಷ ಕಾಂಗ್ರೆಸ್ ಪಕ್ಷದ ಮೇಲೆ ಸವಾರಿ ಮಾಡುತ್ತದೆ ಮುಂದೆ, ಎಂದು ಅನ್ನಿಸುತ್ತಿದೆಯೇ?
ಉ:- ರಾಜ್ಯದ ಹಿತದೃಷ್ಟಿಯಿಂದ ಹೊಂದಾಣಿಕೆ ಅಗತ್ಯವಿತ್ತು. ನಾನು ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಸಮಿತಿಯ ಅಧ್ಯಕ್ಷನಾಗಿದ್ದೇನೆ. ಸಮನ್ವಯ ಸಮಿತಿಯೂ ಇದೆ. ಸರ್ಕಾರದ ಯಾವದೇ ನಿರ್ಧಾರಗಳು ಎರಡೂ ಪಕ್ಷಗಳ ಚರ್ಚೆಯ ಬಳಿಕವಷ್ಟೇ ಪ್ರಕಟಿಸಲ್ಪಡುತ್ತವೆ. ಹಾಗಾಗಿ ಸವಾರಿ ಸಾಧ್ಯವಿಲ್ಲ.
ಪ್ರ:- ರೈತರ ಸಾಲಮನ್ನಾ 34 ಸಾವಿರದಿಂದ 44 ಸಾವಿರಕ್ಕೆ ಏರಿಸಲಾಗಿದೆ. ಈ ಹೊರೆಯನ್ನು ನಿಭಾಯಿಸುವದಾದರೂ ಹೇಗೆ?
ಉ:- ಹಣಕಾಸು ಸಚಿವನಾಗಿದ್ದ ನನಗೆ ಅದರ ಕಷ್ಟ ಗೊತ್ತಿದೆ. ಆರ್ಥಿಕ ನಿರ್ವಹಣೆ ಅಷ್ಟೊಂದು ಸುಲಭವಲ್ಲ; ಅದಕ್ಕೆ ಜಾಣ್ಮೆಯ ಅಗತ್ಯವೂ ಇದೆ. ಸುಲಭವಂತೂ ಅಲ್ಲ.
ಪ್ರ:- ಕೊಡಗಿಗೆ ಬಂದಿದ್ದೀರಿ. ನಮ್ಮ ಅವಸ್ಥೆ ನೋಡಿದ್ದೀರಿ. ಕಾಫಿಯ ಇಳುವರಿಯೊಂದಿಗೆ ದರ 5 ವರ್ಷದ ಹಿಂದಕ್ಕೆ ಕುಸಿದಿದೆ: ಕರಿಮೆಣಸು ದರ ಏರಿಕೆಯೇ ಇಲ್ಲ. ವ್ಯಾಪಾರ ಕುಸಿದಿದೆ, ಜನ ಹತಾಶರಾಗಿದ್ದಾರೆ. ಮಳೆಯ ಅನಾಹುತ ಬೇರೆ...
ಉ:- ಇಂದು ಬೆಳೆಗಾರರೊಂದಿಗೆ ಸಂವಾದ ಮಾಡಿದ್ದೇವೆ. ಸಮಸ್ಯೆಗಳ ಅರಿವಾಗಿದೆ. ಗಂಭೀರವಾಗಿ ಈ ವಿಷಯವನ್ನು ಪರಿಗಣಿಸಿದ್ದು, ಕೇಂದ್ರದೊಂದಿಗೆ ಚರ್ಚಿಸುತ್ತೇವೆ. ಮಳೆ ಅಗತ್ಯ ಬರಲಿ ಬಿಡಿ.
ಪ್ರ:- ಮಳೆ ನಮಗೆ ಅಗತ್ಯಕ್ಕಿಂತ ಜಾಸ್ತಿ ಇದೆ; ನಾವು ಕಷ್ಟ ಅನುಭವಿಸುತ್ತಿದ್ದೇವೆ. ಕೊಡಗಿಗೆ ವಿಶೇಷ ಪ್ಯಾಕೇಜ್ ಬಗ್ಗೆ ದಯವಿಟ್ಟು ಪ್ರಯತ್ನಿಸುತ್ತೀರಾ?
ಉ:- ಈ ಬಗ್ಗೆ ಅಧಿಕಾರಿಗಳೊಂದಿಗೂ ಚರ್ಚಿಸುತ್ತೇನೆ; ಜನರೊಂದಿಗೂ ಚರ್ಚಿಸಿದ್ದೇನೆ. ವಿಷಯ ಸಂಗ್ರಹಿಸಿ ಸರಕಾರದೊಂದಿಗೆ ವ್ಯವಹರಿಸುತ್ತೇನೆ.
ಚಿತ್ರ: ಫೋಟೋ ಎಕ್ಸ್‍ಪ್ರೆಸ್