ಮಡಿಕೇರಿ, ಜು. 13: ಕೊಡಗು ಜಿಲ್ಲೆ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತನಕವೂ ಮಳೆಗಾಲವನ್ನು ಕಾಣುವದು ಸಹಜ. ಮಲೆನಾಡು ಜಿಲ್ಲೆಯಾದ ಬೆಟ್ಟಗುಡ್ಡಗಳಿಂದ ಆವೃತ್ತವಾದ ಕೊಡಗು ಜಿಲ್ಲೆಯ ಜನತೆಯೂ ಈ ಹಿಂದಿನಿಂದಲೂ ಮಳೆಗಾಲದ ಅವಧಿಯನ್ನು ಸಮರ್ಥವಾಗಿಯೇ ಎದುರಿಸಿಕೊಂಡು ಬಂದಿದ್ದಾರೆ.
ಪ್ರಸ್ತುತದ ಸಮಾಜ ಈ ಹಿಂದಿನಂತಿಲ್ಲ. ನಮ್ಮ ಹಿರಿಯರು ಅಬ್ಬರದ ಮಳೆ... ಮೈಥರಗುಟ್ಟಿಸುವ ಚಳಿ... ಕಾರ್ಗತ್ತಲ ದಿನಗಳನ್ನು ಅದು ಹೇಗೋ ನಿಭಾಯಿಸಿಕೊಂಡು ಬಂದಿದ್ದಾರೆ. ಆದರೆ ಇದು 21ನೇ ಶತಮಾನದ ಆಧುನಿಕ ಯುಗ... ವಿವಿಧ ರೀತಿಯ ತಂತ್ರಜ್ಞಾನಗಳು ದಿನೇ ದಿನೇ ಮುಂದುವರಿಯುತ್ತಿವೆ. ಇಂತಹ ಆಧುನಿಕತೆಗೆ ಈಗಿನ ಯುವ ಪೀಳಿಗೆ ಮಾತ್ರವಲ್ಲ ಹಿರಿಯರು ಕೂಡ ಹೊಂದಿಕೊಂಡು ಬಿಟ್ಟಿದ್ದಾರೆ. ದೂರವಾಣಿ, ಮೊಬೈಲ್, ವಿದ್ಯುತ್, ಹೀಟರ್‍ನಂತಹ ಅಗತ್ಯತೆಗಳು ಮನೆ ಬಾಗಿಲಿಗೆ ವಾಹನಗಳು... ಅತ್ಯಗತ್ಯವಾಗಿವೆ. ಶಾಲಾ-ಕಾಲೇಜುಗಳಿಗೆ ತೆರಳುವ ಮಕ್ಕಳು, ಉದ್ಯೋಗ ಮತ್ತಿತರ ಕೆಲಸ ಕಾರ್ಯಗಳಿಗೆ ಹೋಗುವವರಿಗೂ ಆಧುನೀಕತೆ ಒಗ್ಗಿ ಹೋಗಿದೆ.
ಈ ಹಿಂದಿನಂತೆ ಯಾರಿಗೂ ಭಾರೀ ಮಳೆ... ಚಳಿಯನ್ನು ಎದುರಿಸಲಾಗದು. ಒಂದು ದಿನವಲ್ಲ... ಕೆಲವು ತಾಸುಗಳಷ್ಟೇ ವಿದ್ಯುತ್ ಸಂಪರ್ಕ ಇಲ್ಲದಿದ್ದರೂ ಸಹಿಸ ಲಾಗದು. ಬಹುಶಃ ಇದು ಈಗಿನ ವ್ಯವಸ್ಥೆಗೆ ಅನುಗುಣವಾಗಿ ಆಗಿರುವ ಬದಲಾವಣೆ ಎಂಬದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು.
ಕೊಡಗು ಜಿಲ್ಲೆ ಸಾಧಾರಣ ಮಳೆ... ಗಾಳಿಗೆ ನಲುಗುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಭೌಗೋಳಿಕತೆ-ಪ್ರಾಕೃತಿಕತೆಯ ಮೇಲಿನ ಹಲವು ಬಗೆಯ ಪರಿಣಾಮಗಳಿಂದ ಕೊಡಗಿನ ಜನರೂ ಬೆಚ್ಚಿ ಬೀಳು ವಂತಾಗಿದೆ. ಇದು ಒತ್ತಟ್ಟಿಗಿರಲಿ... ರಾಜ್ಯ-ಅಂತರ್ರಾಜ್ಯಗಳಿಗೆ ನೀರುಣಿಸುವ ಕೊಡಗು ಜಿಲ್ಲೆಯೂ ರಾಜ್ಯದ ಇತರ ಜಿಲ್ಲೆಗಳಂತೆಯೇ ಅಲ್ಲವೇ... ಇಲ್ಲಿನ ಜನತೆಯೂ ಎಲ್ಲರಂತೆ ಮನುಷ್ಯರೇ ತಾನೇ.
ವಿಪರ್ಯಾಸವೆಂದರೆ 21ನೇ ಶತಮಾನದಲ್ಲಿಯೂ ರಾಜ್ಯಕ್ಕೆ ವಾರ್ಷಿಕವಾಗಿ ಹೆಚ್ಚು ವರಮಾನ ನೀಡುವ ಪುಟ್ಟ ಜಿಲ್ಲೆಯಾದ ಕೊಡಗಿನ ಹಲವಾರು ಕಡೆಗಳಲ್ಲಿ ಈಗಲೂ ಇತರೆಡೆಯ ಮಂದಿ ಮೂಗಿನ ಮೇಲೆ ಬೆರಳಿಡುವಂತಹ ನೂರಾರು ಸಮಸ್ಯೆಗಳು ಬೆಟ್ಟದಷ್ಟಿರುವದು.
ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ರಸ್ತೆ-ಸೇತುವೆಗಳು ಇಲ್ಲ. ನದಿ-ತೊರೆಗಳನ್ನು ದಾಟಲು ಜೀವದ ಹಂಗು ತೊರೆದು ತಾವುಗಳೇ ಬಿದಿರು-ಮರಗಳನ್ನು ಆಶ್ರಯವಾಗಿಟ್ಟುಕೊಂಡು ಬದುಕು ಸವೆಸುತ್ತಿರುವದು ವ್ಯವಸ್ಥೆಯನ್ನು ಅಣಕಿಸುವಂತಿದೆ. ದಿನಂಪ್ರತಿ ಆಡಳಿತ ವ್ಯವಸ್ಥೆಯಲ್ಲಿ ಕೊಡಗಿಗೆ ಎಷ್ಟು ಮಳೆ ಸುರಿದಿದೆ. ಅಣೆಕಟ್ಟೆಗಳಿಗೆ ಎಷ್ಟು ನೀರು ಬಂದಿದೆ ಎಂಬದನ್ನು ವಿಚಾರಿಸ ಲಾಗುತ್ತದೆ. ಆದರೆ ಆಧುನಿಕ ಪ್ರಪಂಚ ದಲ್ಲಿಯೂ ತೊಟ್ಟಿಪಾಲದಂತಹ ಅಪಾಯಕಾರಿ ಪರಿಸ್ಥಿತಿ ಕೊಡಗಿನಲ್ಲಿದೆ... ನದಿ-ತೊರೆಗಳಲ್ಲಿ ನೀರು ತುಂಬಿ ಹರಿದರೆ ಅದನ್ನು ದಾಟಲಾಗದೆ ಜನತೆ ಇರುವ ಪ್ರದೇಶದಲ್ಲೇ ಹಲವಾರು ದಿನ ಕಾರ್ಗತ್ತಲ ಬದುಕು ಸಾಗಿಸಬೇಕು ಎಂಬದನ್ನು ಹಲವರು ನಂಬಲಿಕ್ಕಿಲ್ಲ. ಮಳೆ-ಚಳಿಯ ವಾತಾವರಣಕ್ಕಾಗಿಯೇ ಪ್ರವಾಸಿಗರು ಆಗಮಿಸಿ ಈ ಸನ್ನಿವೇಶವನ್ನು ‘ಎಂಜಾಯ್’ ಮಾಡಿ ಹಿಂತಿರುಗುತ್ತಾರೆ. ಆದರೆ ಇಲ್ಲಿಯೇ ನೆಲೆ ನಿಂತವರ ಸ್ಥಿತಿಗತಿಯತ್ತಲೂ ಸರಕಾರಗಳು ಗಮನ ಹರಿಸಬೇಕಲ್ಲವೇ...?
ಮಳೆ-ಗಾಳಿ ಹೆಚ್ಚಾದಲ್ಲಿ ಒಮ್ಮೊಮ್ಮೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲ್ಪಡುತ್ತದೆ. ಆದರೆ ಈ ಮಾಹಿತಿಗಳು ಕೂಡ ಕೆಲವು ಸಂದರ್ಭಗಳಲ್ಲಿ ಕೆಲವಾರು ಪ್ರದೇಶಗಳಿಗೆ ತಲಪದಂತಹ ಪರಿಸ್ಥಿತಿಗೆ ಏನೆನ್ನಬೇಕು? ಕೆಲವು ಯೋಜನೆ-ಸೌಲಭ್ಯಗಳನ್ನು ರಾಜ್ಯವಾಪಿಯಾಗಿ ನಿಗದಿ ಪಡಿಸಲಾಗುತ್ತದೆ. ಇದರಂತೆ ಈ ಕಾನೂನುಗಳು ಜಿಲ್ಲೆಗೂ ಅನ್ವಯವಾಗುತ್ತದೆ.
ಆದರೆ, ಬೆಳಕಿಗಾಗಿ ನೀಡುವ ಸೋಲಾರ್ ದೀಪದಲ್ಲಿ ಬೆಳಕು ಕಾಣಲು ಇಲ್ಲಿ ತಿಂಗಳುಗಟ್ಟಲೆ ಸೂರ್ಯ ಕಿರಣಗಳು ಗೋಚರಿ ಸುವದಿಲ್ಲ. ಜಿಲ್ಲೆಗೆ ಮಳೆಗಾಲದ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಸೀಮೆಎಣ್ಣೆ ನೀಡಬೇಕು ಎಂಬ ಬಡಜನತೆಯ ಹಲವಾರು ವರ್ಷಗಳ ಬೇಡಿಕೆಗಳು... ಕೊಡಗಿನ ನದಿ-ತೊರೆ, ಕಾಡುಗಳನ್ನು ದಾಟುವದೇ ಇಲ್ಲ. ಕೇವಲ ನಗರ, ಪಟ್ಟಣ ಪ್ರದೇಶಗಳತ್ತ ಮಾತ್ರ ಸರಕಾರಗಳು ಗಮನ ಹರಿಸುತ್ತವೆ. ಇದರ ಬಗ್ಗೆ ಯಾರ ಆಕ್ಷೇಪವೂ ಇಲ್ಲವಾದರೂ ಕನಿಷ್ಟ ಸೌಲಭ್ಯಗಳ ನ್ನಾದರೂ ನೀಡಬೇಕು ಎಂಬದು ಜನತೆಯ ಬೇಡಿಕೆ ಯಾಗಿದೆ. ಇರಲಿ ಆದರೂ ಕೊಡಗಿನ ಜನರು ಬದುಕುತ್ತಿದ್ದಾರೆ.
-ಶಶಿ ಸೋಮಯ್ಯ