ಗುಡ್ಡೆಹೊಸೂರು, ಜು. 14: ವಿದ್ಯಾರ್ಥಿಗಳು ತಮ್ಮನ್ನು ಪರಿಸರ ಸ್ನೇಹಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು ಎಂದು ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್‍ನ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ಹೇಳಿದರು.

ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಎನ್.ಎನ್.ಎಸ್. ಘಟಕದ ವತಿಯಿಂದ ಗುಡ್ಡೆಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಸಮಾಜಹಿತ ಪೌರರನ್ನಾಗಿಸಲು ಶಿಕ್ಷಣ’ ಎಂಬ ಶೀರ್ಷಿಕೆಯಡಿ ಏರ್ಪಡಿಸಿರುವ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಉಪನ್ಯಾಸ ನೀಡಿದ ಅವರು ಶಿಬಿರಾರ್ಥಿಗಳೊಂದಿಗೆ ಪರಿಸರ ಚಟುವಟಿಕೆಗಳ ಕುರಿತು ಸಂವಾದ ನಡೆಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಬಿ.ಪಿ. ಗುರುಪ್ರಸಾದ್ ಮಾತನಾಡಿ, ಎನ್.ಎಸ್.ಎಸ್. ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣ ಹಾಗೂ ವ್ಯಕ್ತಿತ್ವ ಬೆಳೆಸಲು ಸಹಕಾರಿಯಾಗಿವೆ ಎಂದರು.

ಎನ್.ಎಸ್.ಎಸ್. ಅಧಿಕಾರಿ ಪ್ರಸಾದ್ ಸಾಲ್ಯಾನ್, ಶಿಬಿರದ ಚಟುವಟಿಕೆಗಳ ಕುರಿತು ವಿವರಿಸಿದರು. ಶಿಬಿರಾರ್ಥಿ ಎಸ್. ಮನು ನಿರ್ವಹಿಸಿದರು. ಹೆಚ್.ಪಿ. ಕಾವ್ಯ ಸ್ವಾಗತಿಸಿ, ಸುನಿಲ್‍ಕುಮಾರ್ ವಂದಿಸಿದರು. ಚಂದನ್ ಶಿಬಿರದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಪರಿಸರದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.