ಶನಿವಾರಸಂತೆ, ಜು. 13: ಕನ್ನಡ ಭಾಷೆಗೆ, ಸಾಹಿತ್ಯಕ್ಕೆ ಗೌರವ ಕೊಡುವ ಹಾಗೂ ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ಅಕ್ಷರ, ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಲೂರು-ಸಿದ್ದಾಪುರ ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಅಭಿಪ್ರಾಯಪಟ್ಟರು.

ಸಮೀಪದ ಆಲೂರು-ಸಿದ್ದಾಪುರ ಗ್ರಾಮದ ಸಮುದಾಯ ಭವನದಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ 2ನೇ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಸಮಿತಿಗಳ ರಚನೆ ಬಳಿಕ ಅವರು ಮಾತನಾಡಿದರು.

ತಾ. 31 ರೊಳಗೆ ನಡೆಯುವ ಸಮ್ಮೇಳನದ ಸಿದ್ಧತೆಗಾಗಿ ವಿವಿಧ ಸಮಿತಿಗಳ ರಚನೆಯಾಗಿದ್ದು, ಪದಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಪಾರದರ್ಶಕವಾಗಿ ನಡೆಯುವ ಸಮ್ಮೇಳನಕ್ಕೆ ಪ್ರತಿಯೊಬ್ಬರ ಸಹಕಾರವೂ ಮುಖ್ಯ ಎಂದು ಹೇಳಿದ ಲೋಕೇಶ್ ಸಾಗರ್ ಸಮಿತಿಗಳ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಹಣಕಾಸು, ಆಹಾರ, ಸಾಂಸ್ಕøತಿಕ, ಸ್ಮರಣ ಸಂಚಿಕೆ, ಪ್ರಚಾರ, ವೇದಿಕೆ, ಅಲಂಕಾರ, ಮೆರವಣಿಗೆ ಇತ್ಯಾದಿ ವಿವಿಧ ಸಮಿತಿಗಳ ಪದಾಧಿಕಾರಿಗಳು ನಿರ್ವಹಿಸುವ ಕಾರ್ಯಗಳ ಬಗ್ಗೆ ಸಂಪನ್ಮೂಲ ಕ್ರೋಢೀಕರಿಸುವ ಬಗ್ಗೆ ಚರ್ಚಿಸಲಾಯಿತು. ಸಮ್ಮೇಳನದಲ್ಲಿ ಸನ್ಮಾನಿಸುವ ವಿವಿಧ ಕ್ಷೇತ್ರಗಳ ಸಾಧಕರ ಹೆಸರನ್ನು ಆಯ್ಕೆ ಮಾಡಲಾಯಿತು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿ.ಕೆ. ಚಂದ್ರಶೇಖರ್ ಮಾತನಾಡಿ, ಸಮ್ಮೇಳನದ ಯಶಸ್ಸಿಗೆ ಸಂಪನ್ಮೂಲ ಕ್ರೋಢೀಕರಣ ಅಗತ್ಯ. ತಾಲೂಕು ಘಟಕದ ಸಹಭಾಗಿತ್ವದಲ್ಲಿ ದಾನಿಗಳನ್ನು ಸಂಪರ್ಕಿಸ ಬೇಕು. ಸಮಯವಕಾಶ ಕಡಿಮೆ ಇರುವ ಕಾರಣ ಯೋಜನೆ ರೂಪಿಸಬೇಕು ಎಂದರು.

ಗ್ರಾಮ ಪ್ರಮುಖ ಪ್ರೇಮಕುಮಾರ್ ಮಾತನಾಡಿ, ಸಮ್ಮೇಳನಕ್ಕೆ ಕ್ರೋಢೀಕರಿಸುವ ಸಂಪನ್ಮೂಲ ವೆಚ್ಚವಾಗಿ ಬಾಕಿ ಉಳಿಯುವ ಹಣ ಆಲೂರು-ಸಿದ್ದಾಪುರ ಗ್ರಾಮದ ಅಭಿವೃದ್ಧಿಗೆ ಸದುಪಯೋಗವಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಹಾಗೂ ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ ಮಾತನಾಡಿ, ಕನ್ನಡಮ್ಮನ ಜಾತ್ರೆಗೆ ಗ್ರಾಮಸ್ಥರು, ಶಿಕ್ಷಕರು, ವಿವಿಧ ಇಲಾಖೆ ನೌಕರರು ಸಂಪೂರ್ಣ ಸಹಕಾರ ನೀಡಬೇಕು. ಅದ್ಧೂರಿ ಸಮ್ಮೇಳನವಾಗಲು ಎಲ್ಲರೂ ಕೈಜೋಡಿಸಬೇಕು ಎಂದರು.

ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ್ ಹಾಗೂ ಜಿಲ್ಲಾ ಘಟಕದ ಕೋಶಾಧಿಕಾರಿ ಎಸ್.ಎ. ಮುರಳೀಧರ್ ಮಾತನಾಡಿದರು. ಕ.ಸಾ.ಪ. ಮಾಧ್ಯಮ ಪ್ರತಿನಿಧಿ ಅಶ್ವಥ್ ಕುಮಾರ್, ಹೋಬಳಿ ಘಟಕಗಳ ಅಧ್ಯಕ್ಷ ಪುಟ್ಟಸ್ವಾಮಿ, ಅಬ್ದುಲ್ ರಬ್, ಗ್ರಾಮ ಮುಖಂಡ ಬೋಜಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಲೀಲಾವತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ, ಪಿ.ಡಿ.ಓ. ಚಂದ್ರೇಗೌಡ, ಮೊರಾರ್ಜಿ ವಸತಿ ಶಾಲೆ ಮುಖ್ಯಸ್ಥೆ ಭಾರತಿ, ಕ.ಸಾ.ಪ. ಪದಾಧಿಕಾರಿಗಳಾದ ಸುಂದರ್, ಹೆಚ್.ಬಿ. ಜಯಮ್ಮ, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಜರಿದ್ದರು.