ಯುವ ಸಮೂಹಕ್ಕೆ ಸಾಂಪ್ರದಾಯಿಕ ಖಾದ್ಯಗಳನ್ನು ಪರಿಚಯಿಸುವ ಪ್ರಯತ್ನ
ಮಡಿಕೇರಿ, ಜು. 14: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ತಾ. 29 ರಂದು ನಗರದಲ್ಲಿ ``ಕೊಡವ ತೀನಿ ನಮ್ಮೆ’’ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಹಾಗೂ ಕಾರ್ಯಕ್ರಮದ ಸಂಚಾಲಕ ಐತಿಚಂಡ ರಮೇಶ್ ಉತ್ತಪ್ಪ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಮಡಿಕೇರಿ ಕೊಡವ ಸಮಾಜದಲ್ಲಿ ತಾ. 29 ರಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಕೊಡವ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಮತ್ತೊಮ್ಮೆ ನೆನಪು ಮಾಡುವ ಹಾಗೂ ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ನಡೆಯಲಿದೆ.
ಸದ್ಯಕ್ಕೆ ಲಭ್ಯವಾಗುವ ಪದಾರ್ಥಗಳನ್ನು ಗಮನದಲ್ಲಿಟು ್ಟಕೊಂಡು 10 ಬಗೆಯ ``ಪುಟ್ಟ್’’ (ಹಿಟ್ಟು), 5 ಬಗೆಯ ``ಕರಿ’’ (ಸಾರು), 5 ಬಗೆಯ ಯರ್ಚಿ ಕರಿ (ಮಾಂಸದ ಸಾರು) 5 ಬಗೆಯ ``ಪಜ್ಜಿ’’ (ಚಟ್ನಿ) ಹಾಗೂ 5 ಬಗೆಯ ``ಪಾರ’’ (ಉಪ್ಪಿನಕಾಯಿ) ವನ್ನು ಪಟ್ಟಿ ಮಾಡಲಾಗಿದೆ. ಭಾಗವಹಿಸುವವರು ಕಾಲು ಕೆ.ಜಿಗೆ ಕಡಿಮೆ ಇಲ್ಲದಷ್ಟು ಪ್ರಮಾಣದಲ್ಲಿ ತಯಾರಿಸಿ ಪೈಪೋಟಿ ದಿನ 9.30ರ ವೇಳೆಗೆ ತರಬೇಕು. ಇವುಗಳಲ್ಲಿ ಪೈಪೋಟಿ ಹಾಗೂ ಪ್ರದರ್ಶನ ಎಂಬ ಎರಡು ಪ್ರತ್ಯೇಕ ವಿಭಾಗಗಳಿರುತ್ತವೆ ಎಂದು ಪ್ರಮುಖರು ತಿಳಿಸಿದರು.
ಪೈಪೋಟಿಯಲ್ಲಿ ಪ್ರತಿ ವಿಭಾಗದಲ್ಲಿ ಮೊದಲೆರಡು ಬಹುಮಾನಗಳನ್ನು ನೀಡಲಾಗುವದು. ತಯಾರಿಸಿದ ರೀತಿ, ಅದಕ್ಕೆ ಬಳಸಿದ ವಸ್ತುಗಳು, ಅದರ ಸ್ವಾದ, ಅಲಂಕಾರ, ಆ ಗುಂಪಿನಲ್ಲಿ ಹೆಚ್ಚು ಪದಾರ್ಥಗಳ ತಯಾರಿ ಸೇರಿದಂತೆ ಎಲ್ಲಾ ಅಂಶಗಳನ್ನು ಅನುಭವಿ ತೀರ್ಪುಗಾರರು ನಿರ್ಧರಿಸಿ ಬಹುಮಾನಕ್ಕೆ ಆಯ್ಕೆ ಮಾಡಲಾಗುವದು. ಪ್ರದರ್ಶನ ವಿಭಾಗದಲ್ಲಿ ಭಾಗವಹಿಸುವವರಿಗೆ ಪ್ರತ್ಯೇಕ ವಿಭಾಗ ಇರಲಿದೆ. ಪೈಪೋಟಿ ಹಾಗೂ ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲರಿಗೂ ಅಕಾಡೆಮಿಯ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ನೀಡಲಾಗುವದು. ಇಲ್ಲಿ ಬಹುಮಾನ ಸಾಂಕೇತಿಕವಾಗಿ ನೀಡಲಾಗುತ್ತಿದ್ದು, ಪ್ರೋತ್ಸಾಹ ಮುಖ್ಯ ಉದ್ದೇಶವಾಗಿದೆ. ಈ ಸಂದರ್ಭ ನೆರೆದವರಿಗೆ ಕೊಡವ ಸಾಂಪ್ರದಾಯಿಕ ಅಡುಗೆಯ ವಿಶೇಷತೆ, ಅದನ್ನು ತಯಾರಿಸುವ ರೀತಿಯನ್ನು ವಿವರಿಸಲಾಗುವದು ಎಂದರು.
ರಸಪ್ರಶ್ನೆ ಕಾರ್ಯಕ್ರಮ : ಕೊಡವ ಸಾಂಪ್ರದಾಯಿಕ ಅಡುಗೆ ಪದ್ಧತಿ, ಪದಾರ್ಥ, ಬಳಸುವ ಸಾಮಗ್ರಿ ಸೇರಿದಂತೆ ಇದೇ ಸಂದರ್ಭ ರಸಪ್ರಶ್ನೆ ಕಾರ್ಯಕ್ರಮವನ್ನು ಕೂಡ ಏರ್ಪಡಿಸಲಾಗಿದೆ. ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದಾಗಿದೆ. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪೆಮ್ಮಂಡ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ವಿಧಾನ ಪರಿಷತ್ತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಉದ್ಘಾಟಿಸಲಿದ್ದಾರೆ. ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಕೊಡವ ತೀನಿ ಪ್ರದರ್ಶನವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್.ದೇವಯ್ಯ, ಕೊಡವ ಸಮಾಜ ಒಕ್ಕೂಟದ ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ಚಿರಿಯಪಂಡ ಇಮ್ಮಿ ಉತ್ತಪ್ಪ, ಸಮಾಜ ಸೇವಕಿ ಬಾಚಮಂಡ ಗೌರಮ್ಮ ಮಾದಮ್ಮಯ ಪಾಲ್ಗೊಳ್ಳಲಿದ್ದಾರೆ ಎಂದರು.
ಕೊಡವ ಸಾಹಿತ್ಯ ಅಕಾಡೆಮಿ ಹಲವು ಸಂಘ ಸಂಸ್ಥೆ, ಸಮಾಜಗಳ ಸಹಯೋಗದಲ್ಲಿ ಪ್ರಸಕ್ತ ವರ್ಷ ಹಲವು ವಿನೂತನ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದೆ. ಈಗಾಗಲೇ ``ತಜ್ಞರ ಸಭೆ’’, ``ಪಂದ್ಯಂಡ ಬೆಳ್ಯಪ್ಪ ಸ್ಮರಣೆ’’, ``ಪುದಿಯಕ್ಕಿ ಕೂಳುಂಬೊ’’, ``ಕೊಡವ ಕಳಿ ನಮ್ಮೆ’’, ``ಸಾಹಿತ್ಯ ಶಿಬಿರ ಹಾಗೂ ಸಂವಾದ’’ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದೆ. ಇದೀಗ ``ಕೊಡವ ತೀನಿ ನಮ್ಮೆ’’ಯನ್ನು ಅರ್ಥಪೂರ್ಣವಾಗಿ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ತಿಳಿಸಿದ ರಮೇಶ್ ಉತ್ತಪ್ಪ ``ಕೊಡವ ತೀನಿ ನಮ್ಮೆ’’ಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ, ಖಜಾಂಚಿ ಗಂಗಮ್ಮ ನಂಜಪ್ಪ ಹಾಗೂ ಯಮುನಾ ಅಯ್ಯಪ್ಪ ಉಪಸ್ಥಿತರಿದ್ದರು.