ಮಡಿಕೇರಿ, ಜು. 14 : ‘ವಿಶ್ವಶಾಂತಿಗೆ ಧಾರ್ಮಿಕ ವಿದ್ಯೆ’ ಎಂಬ ಧ್ಯೇಯ ವಾಕ್ಯದೊಂದಿಗೆ ‘ಸಮಸ್ತ’ ಕೇಳ ಜಂಯಿಯ್ಯತ್ತುಲ್ ಮುಅಲ್ಲಿಮೀನ್ (ಸಮಸ್ತ ಕೇರಳ ಮದ್ರಸಗಳ ಅಧ್ಯಾಪಕರ ಒಕ್ಕೂಟ) ಆಶ್ರಯದಲ್ಲಿ ಮುಂಬರುವ ಫೆ. 8 ರಿಂದ 10 ರವರೆಗೆ ಕೇರಳದ ಎರ್ನಾಕುಲಂನಲ್ಲಿ ಮಹಾಸಮ್ಮೇಳನ ನಡೆಯಲಿದ್ದು, ಇದರ ಅಂಗವಾಗಿ ಕೊಡಗು ಜಂಯಯ್ಯತ್ತುಲ್ ಮುಅಲ್ಲಿಮೀನ್ ವತಿಯಿಂದ ತಾ. 16ರಂದು ಸಿದ್ದಾಪುರದಲ್ಲಿ ಪ್ರಚಾರ ಸಭೆÀ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಒಕ್ಕೂಟದ ಸಿದ್ದಾಪುರ ರೇಂಜ್ನ ಪ್ರಧಾನ ಕಾರ್ಯದರ್ಶಿ ತಮ್ಲೀಕ್ ಧಾರಿಮಿ ಅವರು, ಅಂದು ಸಂಜೆ 6 ಗಂಟೆಗೆ ಸಿದ್ದಾಪುರದ ಮುನವ್ವಿರುಲ್ ಇಸ್ಲಾಂ ಮದ್ರಸದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉಲಮಾ ಶಿರೋಮಣಿಗಳು, ಗಣ್ಯವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸಮಸ್ತ ಕೇರಳ ಮದ್ರಸಗಳ ಅಧ್ಯಾಪಕರ ಒಕ್ಕೂಟದ ಅಧೀನದಲ್ಲಿ ಈಗಾಗಲೇ ಕರ್ನಾಟಕ, ತಮಿಳುನಾಡು, ಕೇರಳ, ಅಂಡಮಾನ್, ವಿದೇಶದ ಕತಾರ್, ಬಹರೈನ್, ದುಬೈ ಮತ್ತು ಲಂಡನ್ ಸೇರಿದಂತೆ ದೇಶವಿದೇಶಗಳಲ್ಲಿ 9877 ಮದ್ರಸಗಳು ಕಾರ್ಯ ನಿರ್ವಹಿಸುತ್ತಿದ್ದು, ಒಂದು ಲಕ್ಷಕ್ಕೂ ಅಧಿಕ ಮದ್ರಸ ಅಧ್ಯಾಪಕರು, 12 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಧಾರ್ಮಿಕ ತರಗತಿಗಳನ್ನು ನಡೆಸುತ್ತಿದ್ದಾರೆ ಎಂದರು.
ಪರಿಶುದ್ಧ ಇಸ್ಲಾಂನ ರೀತಿನೀತಿಗಳು, ತತ್ವಾದರ್ಶಗಳು, ಪಾರಂಪರಿಕ ಆದರ್ಶದೊಂದಿಗೆ ಸಮಸ್ತ ಎಂಬ ಮಹೋನ್ನತ ಸಂಸ್ಥೆ ಮುನ್ನಡೆಯುತ್ತಿದ್ದು, ಮದರಸ ಅಧ್ಯಾಪಕರ ಸಂಘಟನೆಯು ಮದರಸ ಅಧ್ಯಾಪಕರ ಏಳಿಗೆಗಾಗಿ ಹಲವು ಯೋಜನೆಗಳನ್ನು ರೂಪಿಸಿ ಅಧ್ಯಾಪಕರ ಸುಭದ್ರತೆಗೆ ಸಾಕ್ಷಿಯಾಗಿದೆ. ಪ್ರತ್ಯೇಕ ತರಬೇತಿಗಳು, ಅಧ್ಯಾಪಕರಿಗೆ ಆರ್ಥಿಕ ಸಹಾಯ, ಸ್ಪರ್ಧಾತ್ಮಕ ಪರೀಕ್ಷೆ, ಧನ ಸಹಾಯ, ಗೌರವಧನ, ಎರಡು ತಿಂಗಳಿಗೊಮ್ಮೆ ಮಾದರಿ ತರಗತಿ ಮತ್ತು ಚರ್ಚಾ ವಿಷಯಗಳು ಹೀಗೆ ಅಧ್ಯಾಪಕರ ಉನ್ನತಿಗಾಗಿ ಸಮಿತಿಯು ಉದಾತ್ತ ಮಾರ್ಗಗಳನ್ನು ಕ್ರಿಯಾತ್ಮಕವಾಗಿ ಅಧ್ಯಾಪಕರಿಗೆ ಸಮರ್ಪಿಸಿದೆ. ಇದೀಗ ಸಂಘಟನೆಯ 60ನೇ ವಾರ್ಷಿಕ ಸಮ್ಮೇಳನದ ಭಾಗವಾಗಿ ನೂತನವಾದ 60 ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.
ಮುಂಬರುವ ಮಹಾಸಮ್ಮೇಳನದ ಭಾಗವಾಗಿ ತಾ. 16ರಂದು ಸಿದ್ದಾಪುರದಲ್ಲಿ ನಡೆಯಲಿರುವ ಜಿಲ್ಲಾ ಪ್ರಚಾರ ಸಮ್ಮೇಳನದಲ್ಲಿ ಕೊಡಗು ಜಿಲ್ಲಾ ಖಾಝಿ ಎಂ.ಎಂ. ಅಬ್ದುಲ್ಲಾ ಫೈಝಿ, ಎಸ್ಕೆಜೆಎಂಸಿಸಿ ಕೇಂದ್ರ ಕಾರ್ಯದರ್ಶಿ ಎಂ.ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಖ್ಯಾತ ವಾತ್ಮ ಜಾಫರ್ವಾಫಿ, ಕೆ. ಉಸ್ಮಾನ್ ಹಾಜಿ, ಸಿಪಿಎಂ ಬಶೀರ್ ಹಾಜಿ, ಇಸ್ಮಾಯಿಲ್ ಮುಸ್ಲಿಯಾರ್.ಕೆ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಮುಂತಾದ ಗಣ್ಯರು ಭಾಗವಹಿಸಲಿದ್ದು, ಅಂದು ಸಂಜೆ ಜಿಲ್ಲೆಯ ಸಮಸ್ತ ಅಧೀನದಲ್ಲಿರುವ ಎಲ್ಲಾ ಮದರಸಗಳಿಗೆ ರಜೆ ಘೋಷಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಿದ್ದಾಪುರ ರೇಂಜ್ ಮದರಸಗಳ ಒಕ್ಕೂಟದ ಅಧ್ಯಕ್ಷ ಆರಿಫ್ ಫೈಝಿ, ಮಡಿಕೇರಿ ರೇಂಜ್ ಅಧ್ಯಕ್ಷ ವೈ.ಎಂ. ಉಮರ್ ಫೈಝಿ, ವೀರಾಜಪೇಟೆ ರೇಂಜ್ ಕಾರ್ಯದರ್ಶಿ ಫೈಝಲ್ ಫೈಝಿ ಹಾಗೂ ಮಡಿಕೇರಿ ರೇಂಜ್ ಉಪಾಧ್ಯಕ್ಷ ಬಾಬುಜಾನ್ ಉಸ್ತಾದ್ ಉಪಸ್ಥಿತರಿದ್ದರು.