ಸುಂಟಿಕೊಪ್ಪ, ಜು. 13: ಸುಂಟಿಕೊಪ್ಪ ರೈತರಿಗೆ ಭತ್ತದ ಬೀಜೋಪಚಾರದ ಬಗ್ಗೆ ಕಾರ್ಯಾಗಾರವನ್ನು ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಬಿಬಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ವಹಿಸಿದ್ದರು. ಚೆಟ್ಟಳ್ಳಿ ಕೇಂದ್ರಿಯ ತೋಟಗಾರಿಕಾ ಸಂಶೋಧನಾ ಇಲಾಖೆಯ ಅಧಿಕಾರಿ ಡಾ. ವೆಂಕಟರಮಣ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಭತ್ತದ ಬೀಜದ ಗುಣಮಟ್ಟ ಕಾಪಾಡಬೇಕು ಮತ್ತು ಬೀಜೋಪಚಾರ ಸರಿಯಾದ ರೀತಿಯಲ್ಲಿ ಮಾಡುವದರೊಂದಿಗೆ ಬೀಜಗಳಿಗೆ ರೋಗ ತಗಲಿರುವದನ್ನು ಗಮನಿಸಿ ಜೆಳ್ಳು ಬೀಜಗಳನ್ನು ಬೇರ್ಪಡಿಸಿದ ನಂತರ ಉತ್ತಮ ಬೀಜವನ್ನು ಬಿತ್ತುವದರ ಮೂಲಕ ಒಳ್ಳೆಯ ಇಳುವರಿಯನ್ನು ಪಡೆಯಬಹುದು ಎಂದು ಸಲಹೆ ನೀಡಿದರು.
ರೈತರು ಪ್ರಶ್ನೆಗಳನ್ನು ಕೇಳುವ ಮೂಲಕ ಸಂಶಯಗಳನ್ನು ಬಗೆಹರಿಸಿಕೊಂಡರು. ಸುಂಟಿಕೊಪ್ಪ ಕೃಷಿ ಅಧಿಕಾರಿ ಪಿ.ಎಸ್. ಬೋಪಯ್ಯ, ತಾಲೂಕು ಪಂಚಾಯಿತಿ ಸದಸ್ಯೆ ಒಡಿಯಪ್ಪನ ಸುದೀಶ್ ವಿಮಲಾವತಿ, ಸುಂಟಿಕೊಪ್ಪ ವ್ಯವಸಾಯ ಸೇವಾ ಸಹಕಾರ ಸಂಘ ಬ್ಯಾಂಕ್‍ನ ಅಧ್ಯಕ್ಷ ಎನ್.ಸಿ. ಪೊನ್ನಪ್ಪ (ಕ್ಲ್ಯೆವ) ಉಪಸ್ಥಿತರಿದ್ದರು.