ಮಡಿಕೇರಿ, ಜು. 13: ಸುಮಾರು ಎರಡೂವರೆ ವರ್ಷದ ಹಿಂದೆ ಮನೆಯೊಂದರಲ್ಲಿ ದರೋಡೆಯ ಸಂಚು ರೂಪಿಸಿ ತಂದೆ ಹಾಗೂ ಮೊಮ್ಮಗನನ್ನು ಕೊಲೆಗೈದಿದ್ದ ಮೂವರು ಆರೋಪಿಗಳಿಗೆ ಇಲ್ಲಿನ ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ. ಈ ಕೃತ್ಯದ ಇಬ್ಬರು ಆರೋಪಿಗಳ ಹೆಸರೂ ಶಿವಕುಮಾರ್ ಎಂದಾಗಿದ್ದು, ಮೂರನೇ ಆರೋಪಿ ಕುಮಾರ್ ಅಲಿಯಾಸ್ ಕರಿಯ ಕೂಡ ಶಿಕ್ಷೆಗೆ ಒಳಗಾಗಿದ್ದಾನೆ.

ತಾ. 11.02.2016ರಂದು ರಾತ್ರಿ 8 ಗಂಟೆ ಸುಮಾರಿಗೆ ಕುಶಾಲನಗರದ ಮಲ್ಲೇನಹಳ್ಳಿ ಗ್ರಾಮದಲ್ಲಿ ಆರೋಪಿಗಳಾದ ಅದೇ ಗ್ರಾಮದ ಸ್ವಾಮಿಗೌಡ ಮಗ 1ನೇ ಆರೋಪಿ ಹೆಚ್.ಎಸ್. ಶಿವಕುಮಾರ್ ಯಾನೆ ಶಿವು, ದಿ. ಈಶ್ವರ್ ಅವರ ಮಗ 2ನೇ ಆರೋಪಿ ಟಿ.ಇ. ಶಿವಕುಮಾರ್ ಅಲಿಯಾಸ್ ಜುಟ್ಟು ಶಿವು, 3ನೇ ಆರೋಪಿ ಮಂಜು ಎಂಬವರ ಪುತ್ರ ಕುಮಾರ ಅಲಿಯಾಸ್ ಕರಿಯ ಸೇರಿಕೊಂಡು ಈ ಗ್ರಾಮದ ಕೊಚ್ಚುಣ್ಣಿ ಹಾಗೂ ಪುತ್ರ ಅಮೃತಾನಂದ್ ಎಂಬವರ ಹತ್ಯೆಗೈದಿದ್ದರು. ಕೊಲೆ ಮಾಡಿ ಮೃತರ ಮನೆಯಿಂದ ಹಣ ದೋಚುವ ಒಳಸಂಚು ನಡೆಸಿದ್ದರು. ಅಲ್ಲದೆ ಮೋಟಾರ್ ಸೈಕಲ್ (ಕೆಎ-50-ಎಸ್-4089)ನಲ್ಲಿ ಕೊಚ್ಚುಣ್ಣಿ ಮನೆಗೆ ಹೋಗಿದ್ದು, ಅಲ್ಲಿಗೆ ಬಂದ ಅವರ ಮೊಮ್ಮಗ ಅಮೃತಾನಂದ್‍ನನ್ನು 3ನೇ ಆರೋಪಿ ಕುಮಾರ ಸಿಗರೇಟು ಸೇದುವ ನೆಪದಲ್ಲಿ ಮನೆಯ ಪಕ್ಕದಲ್ಲಿರುವ ತೋಟದ ಶೆಡ್‍ಗೆ ಕರೆದುಕೊಂಡು ಹೋಗಿದ್ದ. (ಮೊದಲ ಪುಟದಿಂದ) ಉಳಿದ ಇಬ್ಬರು ಆರೋಪಿಗಳು ಕೊಚ್ಚುಣ್ಣಿ ಅವರ ಮನೆಯಲ್ಲಿ ಉಳಿದುಕೊಂಡು, ಸಮಯ ರಾತ್ರಿ 11.15ರ ವೇಳೆಗೆ ಮನೆಯಲ್ಲಿದ್ದ ಟವೆಲನ್ನು ತೆಗೆದುಕೊಂಡು, ಅಡುಗೆ ಮನೆಯ ಬಳಿ ಕೊಚ್ಚುಣ್ಣಿಯವರ ಕುತ್ತಿಗೆಗೆ ಹಿಂದಿನಿಂದ ಬಿಗಿದಿದ್ದು, ಕೆಳಗೆ ಬಿದ್ದ ಅವರನ್ನು 2ನೇ ಆರೋಪಿಯು ನೆಲಕ್ಕೆ ಒತ್ತಿಹಿಡಿದುಕೊಂಡು ಇಬ್ಬರು ಸೇರಿ ಕೊಲೆ ಮಾಡಿದ್ದರು. ಬಳಿಕ ಮಲಗುವ ಕೋಣೆಯಲ್ಲಿದ್ದ ಕಬ್ಬಿಣದ ಅಲ್ಮೆರಾವನ್ನು ತೆರೆದು ಹಣಕ್ಕಾಗಿ ಹುಡುಕಾಡಿದ್ದರು. ಹಣ ಸಿಗದೇ ಇದ್ದಾಗ 2ನೇ ಆರೋಪಿಯು ಮನೆಯ ಬಾಗಿಲನ್ನು ಲಾಕ್ ಮಾಡಿಕೊಂಡು ತೋಟದ ಶೆಡ್‍ನಲ್ಲಿದ್ದ ಮೃತರ ಮೊಮ್ಮಗ ಅಮೃತಾನಂದ್‍ನ ಬಳಿ ತೆರಳಿ ಆರೋಪಿಗಳು ಆತನನ್ನು ಅಜ್ಜ ಹಣ ಎಲ್ಲಿ ಇಟ್ಟಿದ್ದಾರೆಂದು ಕೇಳಿದಾಗ ಆತ ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಈ ಸಂದರ್ಭ ಆರೋಪಿಗಳು ಆತನನ್ನು ನೆಲಕ್ಕೆ ಕೆಡವಿ 2 ಮತ್ತು 3ನೇ ಆರೋಪಿಗಳು ಆತನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, 1ನೇ ಆರೋಪಿಯು ಕತ್ತಿಯಿಂದ ಅಮೃತಾನಂದ್‍ನ ಕುತ್ತಿಗೆಯನ್ನು ಕೊಯ್ದು ಅಜ್ಜನ ಕೊಲೆ ಮಾಡಲು ಬಳಸಿದ ಟವೆಲ್‍ನಿಂದ ಈತನ ಕುತ್ತಿಗೆಯನ್ನು ಬಲವಾಗಿ ಬಿಗಿದು ಈತನನ್ನೂ ಕೊಲೆ ಮಾಡಿದ್ದರು. ಅಲ್ಲದೆ ಆತನ ಮೃತದೇಹವನ್ನು ಚರಂಡಿಯೊಳಗೆ ಅಡಿಕೆ ಸೋಗೆಯಿಂದ ಮುಚ್ಚಿ ಹಾಕಿದ್ದರು. ಈ ಬಗ್ಗೆ ದೂರು ದಾಖಲಾದ ಮೇರೆಗೆ ಪೊಲೀಸರು ವಿಚಾರಣೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮೂವರು ಆರೋಪಿಗಳು ಮಾರಕಾಯುಧಗಳನ್ನು ಹೊಂದಿ ದರೋಡೆ ಮಾಡುವ ಸಲುವಾಗಿ ಎರಡು ಕೊಲೆ ಮಾಡಿದ್ದಲ್ಲದೆ, ಸಾಕ್ಷ್ಯನಾಶ ಮಾಡಲು ಯತ್ನಿಸಿರುವದು ಸಾಕ್ಷಿಗಳ ವಿಚಾರಣೆಯಿಂದ ಸಾಬೀತಾಗಿರುವ ಮೇರೆಗೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ನ್ಯಾಯಾಧೀಶರು ಸದರಿ ಮೂವರೂ ಆರೋಪಿಗಳಿಗೆ ಕೊಲೆ ಮಾಡಿದ ಅಪರಾಧಕ್ಕಾಗಿ ಗಲ್ಲುಶಿಕ್ಷೆಯನ್ನು ಉಚ್ಛ ನ್ಯಾಯಾಲಯದ ಸ್ಥಿರೀಕರಿಸುವಿಕೆಗೆ ಒಳಪಟ್ಟು, ಆರೋಪಿಗಳನ್ನು ಸಾಯುವವರೆಗೆ ನೇಣುಗಂಬಕ್ಕೇರಿಸುವ ಶಿಕ್ಷೆಯನ್ನು ಹಾಗೂ ದರೋಡೆ ಮಾಡಲು ಪ್ರಯತ್ನಿಸಿದ ಅಪರಾಧಕ್ಕಾಗಿ ಕಠಿಣ ಜೀವಾವಧಿ ಶಿಕ್ಷೆ ಮತ್ತು ತಲಾ ರೂ.5 ಸಾವಿರ ದಂಡವನ್ನು, ಮಾರಕಾಯುಧಗಳನ್ನು ಹೊಂದಿ ದರೋಡೆ ಮಾಡಲು ಪ್ರಯತ್ನಿಸಿದ ಅಪರಾಧಕ್ಕಾಗಿ 10 ವರ್ಷಗಳ ಕಠಿಣ ಕಾರಾಗೃಹ ವಾಸವನ್ನು ವಿಧಿಸಿದ್ದಾರೆ. ಅಲ್ಲದೆ ಕೊಲೆ ಮಾಡಿ ಸಾಕ್ಷ್ಯನಾಶ ಮಾಡಲು ಪ್ರಯತ್ನಿಸಿದ ಅಪರಾಧಕ್ಕಾಗಿ 7 ವರ್ಷಗಳ ಕಾರಾಗೃಹ ವಾಸ ಮತ್ತು ತಲಾ ರೂ. 5 ಸಾವಿರ ದಂಡವನ್ನು ಪಾವತಿಸುವಂತೆ ಹಾಗೂ ದಂಡ ಪಾವತಿಸಲು ತಪ್ಪಿದಲ್ಲಿ ಪುನಃ 3 ತಿಂಗಳ ಕಾರಾಗೃಹ ವಾಸ ಅನುಭವಿಸುವಂತೆ ತೀರ್ಪು ನೀಡಿರುತ್ತಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ವಾದವನ್ನು ಮಂಡಿಸಿದ್ದರು.