ಮಡಿಕೇರಿ, ಜು. 14: ‘ದೇಶಪಾಂಡೆ ಅವರ ಆಪ್ತ ಸಹಾಯಕ; 13 ಜನರಿಗೆ ರಾತ್ರಿ ತಂಗಲು ವ್ಯವಸ್ಥೆ ಬೇಕು. ಊಟ, ಮದ್ಯದ ವ್ಯವಸ್ಥೆಯೂ ಆಗಬೇಕು’ಜಿಲ್ಲಾಧಿಕಾರಿಗಳಿಗೆ ಬಂದ ದೂರವಾಣಿ ಕರೆಯಲ್ಲೇನೋ ಸಂಶಯ ತುಂಬಿತ್ತು ಡಾ. ಶ್ರೀವಿದ್ಯಾ ಅವರಿಗೆ.ತಕ್ಷಣವೇ ಆಪ್ತ ಸಹಾಯಕನ ಮೂಲಕ ನಗರ ಪೊಲೀಸರಿಗೆ ಸತ್ಯಾಸತ್ಯತೆ ಪರಿಶೀಲಿಸುವಂತೆ ಸೂಚಿಸಲಾಯಿತು.‘ಅತಿಥಿಗಳನ್ನ’ ಪೊಲೀಸ್ ಠಾಣೆಗೆ ಬರಮಾಡಿ ಕೊಳ್ಳಲಾಯಿತು. ಬೆಳಗಾಂನ ಪ್ರಮೋದ್ ಕುಲಕರ್ಣಿ ಎಂಬಾತ ಬೊಗಳೆ ಬಿಟ್ಟು ಬಿಟ್ಟಿ ಅನುಕೂಲ ಪಡೆಯಲು ಯತ್ನಿಸಿದ್ದು ಗೊತ್ತಾಯಿತು. ಮೊಬೈಲ್ ಪರೀಕ್ಷಿಸಿದಾಗ ಜಿಲ್ಲೆಯ ದೊಡ್ಡ ದೊಡ್ಡ ರೆಸಾರ್ಟ್‍ಗಳಿಗೂ ಈತ ಕರೆ ಮಾಡಿರುವದು ಗೊತ್ತಾಯಿತು.ಸುಳ್ಳಾಡಿದವನಿಗೆ ಎಫ್‍ಐಆರ್ ಸುತ್ತಿಕೊಂಡಿತು. ಕುಟುಂಬ ಸದಸ್ಯರೊಂದಿಗೆ ಬಂದಿದ್ದ ಈತ ಬಂದಿಯಾದ. ಪುಟ್ಟ ಮಕ್ಕಳು, ಮಹಿಳೆಯರು, ಹಿರಿಯರು, ಪತ್ನಿ ಮಕ್ಕಳೂ ಇದ್ದದ್ದರಿಂದ ಮಾನವೀಯ ನೆಲೆಯಲ್ಲಿ ಐಬಿಯಲ್ಲಿ 2 ಕೊಠಡಿ ನೀಡಿ ತಂಗಲು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ವ್ಯವಸ್ಥೆ ಮಾಡಿದರು.ಪೆಚ್ಚು ಮೋರೆಯ ಪ್ರಮೋದ ಪೊಲೀಸ್ ಅತಿಥಿಯಾದ. -ಟಿ.ಜಿ. ಸತೀಶ್