ಕೂಡಿಗೆ, ಜು. 14: ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಏಳು ವಾಣಿಜ್ಯ ಮಳಿಗೆಗಳಿಗೆ ಸಂಬಂಧಪಟ್ಟಂತೆ 1998ರಲ್ಲಿ ಪಂಚಾಯಿತಿಯ ವತಿಯಿಂದ ಹರಾಜು ಮಾಡಿ ತಿಂಗಳಿಗೆ ಇಂತಿಷ್ಟು ಬಾಡಿಗೆ ಹಣ ನೀಡುವಂತೆ ಪಂಚಾಯ್ತಿ ನಿಯಮದಂತೆ ನೀಡಲಾಗಿತ್ತು. ಆದರೆ, ಗ್ರಾಮ ಪಂಚಾಯಿತಿಯ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಆದಾಯ ಬರುವ ಮೂಲವಾಗಿರುವದರಿಂದ ಸಾಮಾನ್ಯ ಸಭೆಯಲ್ಲಿ 14 ಸದಸ್ಯರಲ್ಲಿ, ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸೇರಿದಂತೆ 10 ಸದಸ್ಯರು ಮಳಿಗೆಗಳನ್ನು ಮರು ಹರಾಜು ಮಾಡಲು ನಿರ್ಣಯ ಕೈಗೊಳ್ಳಲಾಗಿತ್ತು. ಈ ತೀರ್ಮಾನದ ಪ್ರಕಾರ ಅಂಗಡಿ ಮಳಿಗೆಗಳನ್ನು ಮರು ಹರಾಜು ಮಾಡುವ ಸಂದರ್ಭಕ್ಕೆ ಮೊದಲು ಹರಾಜು ಪಡೆದುಕೊಂಡ ಅಂಗಡಿ ಮಳಿಗೆದಾರರಿಗೆ ಠೇವಣಿ ಇಟ್ಟ ಹಣವನ್ನು ಗ್ರಾಮ ಪಂಚಾಯಿತಿ ಹಿಂತಿರುಗಿಸಲು ತೀರ್ಮಾನಿಸಿತ್ತು. ಅಧ್ಯಕ್ಷರು ಸಾಮಾನ್ಯ ಸಭೆಯ ನಡಾವಳಿ ಪುಸ್ತಕಕ್ಕೆ ತೀರ್ಮಾನವನ್ನು ಒಪ್ಪಿ ಸಹಿ ಹಾಕಿದ್ದರು. ಇದಾದ ನಂತರದ ದಿನಗಳಲ್ಲಿ ಅಧ್ಯಕ್ಷರು ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸುವ ವಿಷಯವಾಗಿ ವಿಶೇಷ ಸಭೆಯನ್ನು ಕರೆದರು. ಸಭೆಯಲ್ಲಿ ಅಧ್ಯಕ್ಷರು ಸೇರಿದಂತೆ 7 ಸದಸ್ಯರು ಹಾಜರಿದ್ದು, ಒಕ್ಕೊರಲಿನಿಂದ ತೀರ್ಮಾನವನ್ನು ರದ್ದುಗೊಳಿಸಲು ಸಭೆಯಲ್ಲಿ ತೀರ್ಮಾನಿಸಿದ್ದಾರೆ. ಈ ವಿಶೇಷ ಸಭೆಯಲ್ಲಿ ಉಪಾಧ್ಯಕ್ಷರು ಮತ್ತು 5 ಸದಸ್ಯರು ಗೈರಾಗಿದ್ದರು.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಗೈರಾಗಿದ್ದ ಉಪಾಧ್ಯಕ್ಷೆ ಪದ್ಮ, ಸದಸ್ಯರಾದ ವಿಜಯ್, ವೆಂಕಟೇಶ್, ಚೇತನ್, ಶಿವನಂಜಪ್ಪ, ಸರೋಜಮ್ಮ ಅವರು ಹರಾಜು ರದ್ದತಿಯನ್ನು ವಿರೋಧಿಸಿದ್ದಾರೆ. ಕಳೆದ ಸಾಲಿನಲ್ಲಿಯೂ ಸಹ ಹರಾಜು ಪ್ರಕ್ರಿಯೆ ನಡೆಸಲು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993, 203ರ ನಿಯಮದ ಪ್ರಕಾರ ಅನುಮತಿ ನೀಡಿದ್ದರು. ಮರು ಹರಾಜು ನಡೆಸಿದ್ದಲ್ಲಿ ಗ್ರಾಮ ಪಂಚಾಯ್ತಿಗೆ ತಿಂಗಳಿಗೆ ಈ ಏಳು ಮಳಿಗೆಗಳಿಂದ ಬಾಡಿಗೆ ಹಣವು ಲಕ್ಷಾಂತರ ರೂಗಳು ಬರುವದರಿಂದ ಗ್ರಾ.ಪಂಗೂ ಆದಾಯ ಬರುತ್ತದೆ. ಈ ಹಣದ ಮೂಲಕ ಗ್ರಾಮದ ಅಭಿವೃದ್ಧಿಯ ಕೆಲಸಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಆದರೆ, ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993, 54ರ ಪ್ರಕಾರ ಸಾಮಾನ್ಯ ಸಭೆಯಯಲ್ಲಿ ಸದಸ್ಯರ ಬಹುಮತವುಳ್ಳ ನಿರ್ಣಯವನ್ನು ಮಾರ್ಪಾಡು ಮಾಡುವದು ಅಥವಾ ರದ್ದುಗೊಳಿಸುವಂತಿಲ್ಲ. ಅಲ್ಲದೆ, ಈಗಾಗಲೇ ಅಧ್ಯಕ್ಷರು ವಿಶೇಷ ಸಭೆಯನ್ನು ಕರೆದು ಮಳಿಗೆ ನಡೆಸುವವರಿಗೆ ಲಾಭವಾಗುವ ದೃಷ್ಟಿಯಲ್ಲಿ ಯಾವದೇ ತೆರಿಗೆಯನ್ನು ಹೆಚ್ಚಿಸದೇ ಹಳೆಯ ಬಾಡಿಗೆಯನ್ನು ಮುಂದುವರೆಸಲು ಠರಾವು ಮಾಡಿರುವದು ಗ್ರಾ.ಪಂಗೆ ನಷ್ಟವಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಸಾಮಾನ್ಯ ಮತ್ತು ವಿಶೇಷ ಸಭೆಯ ನಡಾವಳಿಕೆಯ ಪ್ರತಿಗಳನ್ನು ಅರ್ಜಿಯ ಸಮೇತ ತಾಲೂಕು ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರಿಗೆ ನೀಡಲಾಗಿದೆ. ಮತ್ತು ರಾಜ್ಯ ಸರ್ಕಾರದ ಪಂಚಾಯತ್ ರಾಜ್ಯ ಮುಖ್ಯ ಕಾರ್ಯದರ್ಶಿಗೆ ನಡಾವಳಿ ಪತ್ರಗಳನ್ನು ನೀಡಿ, ಈ ವಿಷಯದ ಬಗ್ಗೆ ದೂರು ನೀಡಲು ತೀರ್ಮಾನಿಸಲಾಗಿದೆ ಎಂದು ಗೈರಾದ ಉಪಾಧ್ಯಕ್ಷೆ ಮತ್ತು ಐವರು ಸದಸ್ಯರು ತಿಳಿಸಿದ್ದಾರೆ.