ಸೋಮವಾರಪೇಟೆ, ಜು. 13: 1857ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಶುರುವಾಯಿತು ಎಂದು ಇತಿಹಾಸದ ಪುಟಗಳು ಹೇಳುತ್ತಿದ್ದರೂ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಆಳವನ್ನು ಅಧ್ಯಯನ ಮಾಡಿದಾಗ 1833ರಲ್ಲೇ ಕೊಡಗಿನಲ್ಲಿ ಬ್ರಿಟೀಷರ ವಿರುದ್ಧ ಹೋರಾಡುವ ಕಿಡಿ ಮೂಡಿತ್ತು. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರಲ್ಲಿ ಕೊಡಗಿನವರೇ ಮೊದಲಿಗರು ಎಂದು ಚಿಂತಕ ಶ್ರೀಕೃಷ್ಣ ಉಪಾಧ್ಯಾಯ ತಿಳಿಸಿದರು.

ಭಾನುವಾರ ಯೋಧಾಭಿಮಾನಿ ಬಳಗದ ಸಮಾನ ಮನಸ್ಕರ ತಂಡದಿಂದ ಮಡಿಕೇರಿಯ ಕೊಡವ ಸಮಾಜದಲ್ಲಿ ಆಯೋಜನೆಯಾಗಿದ್ದ ಯೋಧ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1833ರಲ್ಲಿ ಕೊಡಗಿನ ರಾಜನನ್ನು ಬ್ರಿಟಿಷರು ಸೆರೆಯಾಗಿಸಿದ ಸಂದರ್ಭ, ಕೊಡಗಿನ ಕಲಿಗಳಾದ ಕಲ್ಯಾಣಪ್ಪ ಮತ್ತು ಅಪ್ಪಾರಪ್ಪ ಅವರುಗಳು ಬ್ರಿಟೀಷರ ವಿರುದ್ಧ ಹೋರಾಡುವ ಕೆಚ್ಚು ತೋರಿಸಿದರು. ಕೊಡ್ಲಿಪೇಟೆ, ಸಕಲೇಶಪುರ, ಬಿಸಿಲೆ, ಸುಬ್ರಮಣ್ಯ ಮೂಲಕ ಮಂಗಳೂರಿಗೆ ತೆರಳಿ ಅಲ್ಲಿನ ಗುಡ್ಡವೊಂದರಲ್ಲಿ ಕೊಡಗಿನ ಬಾವುಟ ಹಾರಿಸುವ ಮೂಲಕ ಬಂಡಾಯದ ಕಹಳೆ ಮೊಳಗಿಸಿದರು. ಇಂದಿಗೂ ಆ ಬೆಟ್ಟವನ್ನು ಬಾವುಟಗುಡ್ಡೆ ಎನ್ನುತ್ತಾರೆ. ನಂತರ ಬ್ರಿಟೀಷರು ಈರ್ವರನ್ನು ಅಲೋಶಿಯಸ್ ಕಾಲೇಜು ಮೈದಾನದಲ್ಲಿ ನೇಣಿಗೇರಿಸಿದರು. ಆ ಮೂಲಕ ಸ್ವಾತಂತ್ರ್ಯದ ಕಿಡಿಗೆ ಕೊಡಗು ಸಾಕ್ಷಿಯಾಯಿತು ಎಂದು ಸ್ಮರಿಸಿದರು.

ಸ್ವಾತಂತ್ರ್ಯೋತ್ತರ ಭಾರತದಲ್ಲೂ ಸಹ ಪಾಕಿಸ್ತಾನದೊಂದಿಗೆ ನಡೆದ ಪ್ರಥಮ ಯುದ್ಧದಲ್ಲೂ ಕೊಡಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಭಾರತೀಯ ಸೇನೆಯನ್ನು ಮುನ್ನಡೆಸಿ ಜಯ ತಂದುಕೊಟ್ಟರು. ದೇಶದ ಹೋರಾಟ, ಸೈನಿಕ ಇತಿಹಾಸದಲ್ಲೇ ಕೊಡಗಿನ ಹೆಸರು ಚಿರಸ್ಥಾಯಿ. ಕೊಡಗಿನವರ ದೇಶಾಭಿಮಾನ ಇಡೀ ದೇಶಕ್ಕೆ ಮಾದರಿ ಎಂದು ಶ್ಲಾಘಿಸಿದರು.

ಆಗಸ್ಟ್ 15, ಜನವರಿ 26ರಂದು ಧ್ವಜಹಾರಿಸಿದರಷ್ಟೇ ದೇಶಭಕ್ತರಾಗಲು ಸಾಧ್ಯವಿಲ್ಲ. ದೇಶಕ್ಕಾಗಿ ಬದುಕುವ ಸಂಕಲ್ಪ ಎಲ್ಲರದ್ದಾಗಬೇಕು. ದೇಶಸೇವೆಗೈದ ಸೈನಿಕರು ಮತ್ತು ಕುಟುಂಬಕ್ಕೆ ಸಮಾಜ ಗೌರವ ನೀಡಬೇಕು. ಈ ನಿಟ್ಟಿನಲ್ಲಿ ಯೋಧಾಭಿಮಾನಿ ಬಳಗ ಉದ್ದೇಶ ಶುದ್ಧಿ, ಶೀಲ ಶುದ್ಧಿ ಮತ್ತು ಸಮರ್ಪಣಾ ಮನೋಭಾವದಿಂದ ಯೋಧ ನಮನ ಕಾರ್ಯಕ್ರಮ ಆಯೋಜಿಸಿರುವದು ರಾಜ್ಯಕ್ಕೇ ಮಾದರಿ ಎಂದರು.

ಸಾಮಾಜಿಕ ಚಿಂತಕ, ಬರಹಗಾರ ಅರ್ಜುನ್ ದೇವಾಲದಕೆರೆ ಮಾತನಾಡಿ, ಭಾರತದ ಭವ್ಯ ಇತಿಹಾಸ ವನ್ನು ಪುಸ್ತಕಗಳಲ್ಲಿ ತಿರುಚಲಾಗಿದೆ. ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಸಿಕ್ಕಿತು ಎಂದು ಸುಳ್ಳು ಮಾಹಿತಿ ದೇಶದ ಸೈನಿಕರಾಗಿ ಸೇವೆಗೈದ ವೀರಯೋಧರು ಹಾಗೂ ನಿವೃತ್ತ ಯೋಧರ ಸಂಘದ ಅಧ್ಯಕ್ಷರುಗಳನ್ನು ಯೋಧಾಭಿಮಾನಿಗಳ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ, ವೀರಚಕ್ರ ಪುರಸ್ಕøತ ಮೇಜರ್ ಜನರಲ್ ಕುಪ್ಪಂಡ ಪಿ. ನಂಜಪ್ಪ, ಸಾಮಾಜಿಕ ಚಿಂತಕರಾದ ಶ್ರೀಕೃಷ್ಣ ಉಪಾಧ್ಯಾಯ, ಅರ್ಜುನ್ ದೇವಾಲದಕೆರೆ ಸೇರಿದಂತೆ ಬಳಗದ ಪದಾಧಿಕಾರಿಗಳು ಸನ್ಮಾನಿಸಿದರು.

ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ (ನೇವಿ)ದ ಅಧ್ಯಕ್ಷರಾದ ಸಿ.ಎ. ಸುರೇಶ್, ಮಾಜೀ ಸೈನಿಕರ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ, ನಾಪೋಕ್ಲು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಾಡಿಯಂಡ ಶಂಭು, ಕೊಡಗು ಜಿಲ್ಲಾ ಮಾಜಿ ಪ್ಯಾರಾ ಮಿಲಿಟರಿ ಫೋರ್ಸ್‍ನ ಅಧ್ಯಕ್ಷ ಎಂ.ಜಿ. ಯತೀಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸಿ.ಜೆ. ಸಿದ್ದಾರ್ಥ್, ಮಡಿಕೇರಿ ತಾಲೂಕು ಅಧ್ಯಕ್ಷ ಕೆ.ಎ. ಆನಂದ್ ಅವರುಗಳನ್ನು ಅಭಿನಂದಿಸಲಾಯಿತು.

ಇದರೊಂದಿಗೆ ದೇಶದ ಕಮಾಂಡೋ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಪ್ಯಾರಾ ಕಮಾಂಡೋ, ಮೂಲತಃ ಪೊನ್ನಂಪೇಟೆ ಕಿರುಗೂರಿನ ನಿವಾಸಿ, ಮಡಿಕೇರಿಯಲ್ಲಿ ನೆಲೆಸಿರುವ ಮೋಹನ್‍ಕುಮಾರ್, 28 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ, ಪ್ಯಾರಾಮಿಲಿಟರಿ ಫೋರ್ಸ್‍ನ ಬೊಟ್ಟಂಗಡ ಜಪ್ಪು ಅವರುಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.