ಮಡಿಕೇರಿ, ಜು. 14: ಮಳೆಗಾಲದ ಆರ್ಭಟ, ಮೈ ಕೊರೆಯುವ ಚಳಿ... ವ್ಯಾಪಕವಾಗಿ ಸಂಭವಿಸುತ್ತಿರುವ ಹಾನಿಯ ನಡುವೆ ಜರ್ಜರಿತವಾಗಿರುವ ಕೊಡಗು ಜಿಲ್ಲೆಯಲ್ಲಿ ಪರಿಸ್ಥಿತಿ ಯಥಾಸ್ಥಿತಿಯಲ್ಲೇ ಮುಂದುವರಿದಿದೆ. ಕಳೆದ ಒಂದೆರಡು ದಿನಗಳ ಹಿಂದೆ ನಿರಂತರವಾಗಿ ಮಳೆ ಸುರಿಯುತ್ತಿರುವ ಸನ್ನಿವೇಶ ತುಸು ಕಡಿಮೆಯಾಗಿದ್ದರೂ, ಆಗಾಗ್ಗೆ ಬಿರುಮಳೆಯಾಗುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಪ್ರವಾಹ ಕಂಡುಬಂದಿರುವ ಪ್ರದೇಶಗಳು ಸೇರಿದಂತೆ ಇನ್ನಿತರ ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟ ಅದೇ ರೀತಿಯಲ್ಲಿದೆ. ಈಗಾಗಲೇ ಶಾಲಾ - ಕಾಲೇಜುಗಳಿಗೆ ಸುಮಾರು 10 ದಿನಗಳ ರಜೆಯನ್ನೂ ನೀಡಲಾಗಿರುವದು ಪ್ರಸಕ್ತ ಸಾಲಿನ ಮುಂಗಾರಿನ ಆರ್ಭಟಕ್ಕೆ ಸಾಕ್ಷಿಯಾಗಿದೆ.ಮುಂದುವರಿಯುತ್ತಿರುವ ಮಳೆಯೊಂದಿಗೆ ಏರಿಕೆಯಾಗಿರುವ ನೀರಿನ ಮಟ್ಟದಲ್ಲೂ ಇಳಿಕೆಯಾಗದಿರುವದು, ಭೂಕುಸಿತ, ಬರೆ ಜರಿಯುವದು, ರಸ್ತೆಗೆ ಹಾನಿ, ಮನೆ- ವಾಹನಗಳ ಮೇಲೆ ಮರಗಳು ಬಿದ್ದು ಹಾನಿ ಸಂಭವಿಸಿರುವ ಆತಂಕಕಾರಿ ಸನ್ನಿವೇಶದ ನಡುವೆ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯವುಂಟಾಗಿದ್ದು, ಅಸ್ತವ್ಯಸ್ತಗೊಂಡಿರುವ ಜಿಲ್ಲೆಯ ಜನಜೀವನ ಇನ್ನೂ ಸರಿಯಾಗದಿರುವ ಬೆನ್ನಲ್ಲೇ ಅಮಾವಾಸ್ಯೆಯ ದಿನವಾಗಿದ್ದ ಶುಕ್ರವಾರದಂದು ರಾತ್ರಿಯಿಂದ ಭಾರೀ ರಭಸದ ಗಾಳಿ ಬೀಸಲಾರಂಭಿಸಿರುವದು ಜನತೆಯನ್ನು ಇನ್ನಷ್ಟು ಕಂಗೆಡುವಂತೆ ಮಾಡಿದೆ. ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಜಿಲ್ಲಾದ್ಯಂತ ರಭಸದ ಗಾಳಿ ಬೀಸುತ್ತಿರುವ ಕುರಿತು ವರದಿಯಾಗಿದೆ. ಗಾಳಿಯ ತೀವ್ರತೆಯಿಂದಾಗಿ ವಿದ್ಯುತ್ ಪೂರೈಕೆಗೆ ಮತ್ತೆ ಸಮಸ್ಯೆ ಎದುರಾಗುತ್ತಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಕಂಡುಬಾರದಂತಿದ್ದ ಈ ಹಿಂದಿನ ಮಳೆಗಾಲದ ರೌದ್ರತೆಯನ್ನು ಜನತೆ ಅನುಭವಿಸುತ್ತಿದ್ದಾರೆ. ವಿಶಾಲ ಗದ್ದೆ ಪ್ರದೇಶಗಳೆಲ್ಲವೂ ಜಲಾವೃತಗೊಂಡಿದ್ದು, ಒಂದು ರೀತಿಯಲ್ಲಿ ಕೊಡಗು ಜಿಲ್ಲೆ ದ್ವೀಪದಂತಾಗಿದೆ.
ಮಡಿಕೇರಿ ತಾಲೂಕು ಭಾಗಮಂಡಲ, ತಲಕಾವೇರಿಯಲ್ಲಿ ದಾಖಲೆ ಮಟ್ಟದಲ್ಲಿ ಮಳೆ ಸುರಿಯುತ್ತಿದ್ದು, ಅಕ್ಕಪಕ್ಕದ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ಮಡಿಕೇರಿ, ಅಯ್ಯಂಗೇರಿ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ.
ನಾಪೋಕ್ಲು, ಬೊಳಿಬಾಣೆಯಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ, ಬಲಮುರಿ ಬಳಿ ಅಪಾಯದ ಮಟ್ಟದಲ್ಲಿ ನೀರು ಸುರಿಯುತ್ತಿದ್ದರೆ, ಕರಡಿಗೋಡು ಸಂಪೂರ್ಣ ಮುಳುಗಡೆಯಾಗಿದೆ. ಕಾವೇರಿ ನದಿ ಉಕ್ಕಿ ಕುಶಾಲನಗರ, ಕೊಪ್ಪ ಸೇತುವೆ ಬಳಿ ಏರಿಕೆ ಕಾಣುತ್ತಿರುವ ಬೆನ್ನಲ್ಲೇ ಮಾದಾಪುರ, ಹಟ್ಟಿ ಹೊಳೆಯಲ್ಲಿ ನೀರಿನ ಏರಿಕೆಯಿಂದಾಗಿ ಹಾರಂಗಿ ಜಲಾಶಯ ಭರ್ತಿಯಾಗಿದೆ. 10 ಸಾವಿರಕ್ಕಿಂತಲೂ ಹೆಚ್ಚು ಕ್ಯೂಸೆಕ್ಸ್ ನೀರು ಕಾವೇರಿ ನದಿಗೆ ಬಿಡುತ್ತಿರುವದರಿಂದ ಕಣಿವೆ ಭಾಗ ಅಪಾಯದ ಅಂಚಿನಲ್ಲಿದೆ.
ಇತ್ತ ವೀರಾಜಪೇಟೆ ತಾಲೂಕು ಭಾಗದಲ್ಲಿ ಲಕ್ಷಣ ತೀರ್ಥ ನದಿಯಲ್ಲೂ ನೀರಿನ ಏರಿಕೆ ಉಂಟಾಗಿ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಬಾಳೆಲೆ, ನಿಟ್ಟೂರು ಪ್ರದೇಶದಲ್ಲಿರುವ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಸಮುದ್ರದ ರೀತಿ ಕಾಣುತ್ತಿದೆ. ಇದಲ್ಲದೆ, ಕೂಟುಹೊಳೆ, ಬರಪೊಳೆ, ಸೇರಿದಂತೆ ಸಣ್ಣ ಪುಟ್ಟ ತೊರೆಗಳು ನದಿಯ ರೀತಿ ಕಂಡು ಬರುತ್ತಿದ್ದು, ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದೆ.
ರಸ್ತೆ ಕುಸಿತ, ಗುಡ್ಡ ಕುಸಿತ, ವಿದ್ಯುತ್ ಕಡಿತ, ದಟ್ಟ ಮಂಜು, ಬೀಸುವ ಭಾರೀ ಗಾಳಿಯಿಂದ ಮನೆಯಿಂದ ಹೊರಗೆ ಬರಲು ಜನ ಹೆದರುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮನೆಗಳು ಎಲ್ಲಿ ಬಿದ್ದು ಹೋಗುತ್ತದೋ ಎನ್ನುವ ಆತಂಕ ಶುರುವಾಗಿದೆ, ಮರಗಳು ಧರೆಗೆ ಉರುಳಿ ರಸ್ತೆ ಸಂಪರ್ಕ ಕಡಿತ ಆಗುತ್ತಿದೆ.
(ಮೊದಲ ಪುಟದಿಂದ) ಅಲ್ಲದೆ ಅಪಾರ ಆಸ್ತಿ ಪಾಸ್ತಿ ನಷ್ಟವಾಗಿದೆ. ಸೋಮವಾರಪೇಟೆ ತಾಲೂಕಿನಲ್ಲೂ ಬಹುತೇಕ ಇದೇ ರೀತಿಯ ಚಿತ್ರಣ ಇನ್ನೂ ಮುಂದುವರೆದಿದ್ದು, ಜನತೆ ಮಳೆಯ ತೀವ್ರತೆ ಕಡಿಮೆಯಾಗುವದನ್ನು ಕಾಯುವಂತಾಗಿದೆ. ಮಳೆಗಾಲದ ಈ ಚಿತ್ರಣದಿಂದಾಗಿ ಜಿಲ್ಲೆಯಲ್ಲಿ ಜನರ ಓಡಾಟವೂ ಹೆಚ್ಚಾಗಿ ಕಂಡುಬರುತ್ತಿಲ್ಲ. ಇಂತಹ ಪರಿಸ್ಥಿತಿಯ ನಡುವೆಯೂ ಕೆಲವಾರು ಪ್ರವಾಸಿಗರು ಕೊಡಗಿನ ಮಳೆಗಾಲದ ‘ಮಜಾ’ ಅನುಭವಿಸುತ್ತಿ ರುವದು ಒಂದೆಡೆಯಾಗಿದೆ.
ಜಿಲ್ಲೆಯಲ್ಲಿ ಸರಾಸರಿ 2.81 ಇಂಚು ಮಳೆ
ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 2.81 ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 3.16 ಇಂಚು, ವೀರಾಜಪೇಟೆಯಲ್ಲಿ 2.16 ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 2.61 ಇಂಚಿನಷ್ಟು ಸರಾಸರಿ ಮಳೆಯಾಗಿದೆ. ಜಿಲ್ಲೆ ಹಾಗೂ ತಾಲೂಕು ಸರಾಸರಿಯ ಅಂಕಿ - ಅಂಶ ಇದಾದರೆ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಿದೆ. ಮಳೆ- ಗಾಳಿಯಿಂದಾಗಿ ಬಹುತೇಕ ಕಡೆಗಳಲ್ಲಿ ವಿದ್ಯುತ್ ಮಾರ್ಗದಲ್ಲಿ ಸಮಸ್ಯೆಯಾಗಿದ್ದು, ದಿನವಿಡೀ ವಿದ್ಯುತ್ ಸಂಪರ್ಕ ಇಲ್ಲದಂತಾಗಿತ್ತು.
ಹೋಬಳಿವಾರು ವಿವರ
ತಾ. 13ರಂದು ಬೆಳಿಗ್ಗೆಯಿಂದ ತಾ. 14ರ ಬೆಳಿಗ್ಗೆವರೆಗೆ ಕಳೆದ 24 ಗಂಟೆಗಳಲ್ಲಿ ಮಡಿಕೇರಿ ತಾಲೂಕಿನ ನಾಪೋಕ್ಲು ಹೋಬಳಿಯಲ್ಲಿ 6.09 ಇಂಚು ಮಳೆ ದಾಖಲಾಗಿದೆ. ಮಡಿಕೇರಿ ಹೋಬಳಿಯಲ್ಲಿ 2.96 ಇಂಚು, ಸಂಪಾಜೆ 2.32 ಹಾಗೂ ಭಾಗಮಂಡಲ ಹೋಬಳಿಯಲ್ಲಿ 3.30 ಇಂಚು ಮಳೆಯಾಗಿದೆ.
ವೀರಾಜಪೇಟೆ ತಾಲೂಕಿನಲ್ಲಿ ಶ್ರೀಮಂಗಲ ಹೋಬಳಿಯಲ್ಲಿ 3.09 ಇಂಚು ಮಳೆಯಾಗಿದೆ. ಉಳಿದಂತೆ ವೀರಾಜಪೇಟೆ 2.59, ಹುದಿಕೇರಿ 2.76, ಪೊನ್ನಂಪೇಟೆ 1.66, ಅಮ್ಮತ್ತಿ 1.88 ಹಾಗೂ ಬಾಳೆಲೆ ಹೋಬಳಿ ಯಲ್ಲಿ 1 ಇಂಚು ಮಳೆಯಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಶಾಂತಳ್ಳಿಗೆ 5.68 ಇಂಚು ಮಳೆಯಾಗಿದ್ದರೆ ಸೋಮವಾರಪೇಟೆ 3.59 ಇಂಚು, ಶನಿವಾರಸಂತೆ 2.53, ಕೊಡ್ಲಿಪೇಟೆ 1.86, ಕುಶಾಲನಗರ 0.28 ಹಾಗೂ ಸುಂಟಿಕೊಪ್ಪ ಹೋಬಳಿಗೆ 1.72 ಇಂಚು ಮಳೆಯಾಗಿದೆ.
ಹಾರಂಗಿ
ಹಾರಂಗಿ ಜಲಾಶಯಕ್ಕೆ 1324 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಅಣೆಕಟ್ಟೆಯಿಂದ ನದಿಗೆ 14,335 ಕ್ಯೂಸೆಕ್ಸ್ ಹಾಗೂ ಕಾಲುವೆಗೆ 750 ಕ್ಯೂಸೆಕ್ಸ್ ನೀರನ್ನು ಹರಿಯಬಿಡಲಾಗುತ್ತಿದೆ.