ಮಡಿಕೇರಿ, ಜು. 14: ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಹೋಂಸ್ಟೇಗಳ ಪೈಕಿ ಬಹುತೇಕ ಅನಧಿಕೃತವಾಗಿದ್ದು, ಅನುಮತಿ ಪಡೆಯದೆ ಹೋಂಸ್ಟೇ ನಡೆಸುತ್ತಿರುವವರು ಆಗಸ್ಟ್ 2 ರೊಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಪಡೆದು ಅನುಮತಿ ಪಡೆದುಕೊಳ್ಳಬೇಕು. ಇಲ್ಲವಾದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವದಾಗಿ ಪ್ರವಾಸೋದ್ಯಮ ಇಲಾಖಾ ಸಚಿವ ಸಾ.ರಾ. ಮಹೇಶ್ ಎಚ್ಚರಿಕೆ ನೀಡಿದ್ದಾರೆ.ನಗರದ ಹೊಟೇಲ್ ವ್ಯಾಲಿವ್ಯೂನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕೊಡಗು ಜಿಲ್ಲೆ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಇಲ್ಲಿ ಮೂರು ಸಾವಿರಕ್ಕೂ ಅಧಿಕ ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಕೇವಲ 200 ಹೋಂಸ್ಟೇಗಳು ಮಾತ್ರ ನೋಂದಣಿ ಆಗಿವೆ. ಇದು ಸರಿಯಲ್ಲ. ಹೋಂಸ್ಟೇ ನಡೆಸಲು ಯಾರ ಅಭ್ಯಂತರವೂ ಇಲ್ಲ. ಆದರೆ ಕಾನೂನಿನನ್ವಯ ಅಧಿಕೃತವಾಗಿ ನೋಂದಣಿ ಆಗಲೇಬೇಕು. ಆದ್ದರಿಂದ ಆಗಸ್ಟ್ 2ರೊಳಗೆ ಹೋಂಸ್ಟೇಗಳ ನೋಂದಣಿ ಕಡ್ಡಾಯವಾಗಿ ಆಗಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವದು ಎಂದು ಸಚಿವ ಮಹೇಶ್ ಹೇಳಿದರು.
ಮಾತ್ರವಲ್ಲದೆ ಹೋಂಸ್ಟೇಗಳನ್ನು ನಡೆಸುವವರು, ಸೆಪ್ಟಿಕ್ ಟ್ಯಾಂಕ್ ಅನ್ನು ನಿರ್ಮಿಸಿಕೊಳ್ಳುವದು ಕೂಡ ಕಡ್ಡಾಯ. ಇದನ್ನು ಹೋಂಸ್ಟೇ ಮಾಲೀಕರುಗಳೇ ಪಾಲನೆ ಮಾಡಬೇಕು ಹೊರತು ಶೌಚಾಲಯದ ನೀರನ್ನು ಪರಿಸರಕ್ಕೆ ಹರಿಯಬಿಟ್ಟು ಅಶುಚಿತ್ವಕ್ಕೆ ಕಾರಣವಾದರೆ ಅದರ ವಿರುದ್ಧ ಕ್ರಮಕೈಗೊಳ್ಳಲಾಗುವದೆಂದರು.
ಮುಖ್ಯಮಂತ್ರಿ ಭೇಟಿ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾ. 19 ಮತ್ತು 20 ರಂದು ಕೊಡಗು ಜಿಲ್ಲಾ
(ಮೊದಲ ಪುಟದಿಂದ) ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಜೂನ್ ಮೊದಲ ಮತ್ತು ಎರಡನೇ ವಾರ ಹಾಗೂ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹೆಚ್ಚಿನ ಹಾನಿಯಾಗಿದ್ದು, ಈ ಸಂಬಂಧ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಅಂದು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿಗಳು ಚರ್ಚಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಯಲ್ಲಿ ಕೆಎಸ್‍ಟಿಡಿಸಿ ಬರಲಿದೆ. ವಿವಿಧ ಜಿಲ್ಲೆಗಳಲ್ಲಿ ಕೆಎಸ್‍ಟಿಡಿಸಿ ಉತ್ತಮವಾಗಿ ನಡೆಯುತ್ತಿದೆ. ಅದೇ ಮಾದರಿಯಲ್ಲಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‍ನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವದು.
ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಯಾವ ಯಾವ ಯೋಜನೆಗಳು ಆಗಬೇಕು ಎಂಬ ಬಗ್ಗೆ ಮತ್ತಷ್ಟು ಮಾಹಿತಿ ಪಡೆದು ಮುಖ್ಯಮಂತ್ರಿ ಯವರು ಕೊಡಗು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಗಮನಕ್ಕೆ ತರಲಾಗು ವದು. ತುರ್ತಾಗಿ ಆಗಬೇಕಿರುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದು ನುಡಿದರು.
ಸರ್ವೆಗೆ ತಡೆ
ಕೊಡಗು ಜಿಲ್ಲೆಯ ದಕ್ಷಿಣ ಭಾಗದಲ್ಲಿ ರೈಲ್ವೆ ಯೋಜನೆಯ ಸರ್ವೆ ಕಾರ್ಯ ಸಂಬಂಧಿಸಿದಂತೆ ಅಧಿಕೃತ ವಾಗಿ ಮಾಹಿತಿ ಇಲ್ಲ. ಅಂತಹದ್ದು ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವದು. ಈ ಸಂಬಂಧ ಮೂಲ ಸೌಲಭ್ಯ ಸಚಿವರಾದ ಆರ್.ವಿ. ದೇಶಪಾಂಡೆ ಅವರು ಸ್ಪಷ್ಟಪಡಿಸಿದ್ದು, ರೈಲ್ವೆ ಯೋಜನೆಗೆ ಅವಕಾಶ ನೀಡುವದಿಲ್ಲ. ರೈಲ್ವೇ ಸಂಬಂಧ ಕೇರಳ ರಾಜ್ಯದಿಂದ ಅಕ್ರಮ ಸರ್ವೆ ನಡೆಸಿದರೆ ಟ್ರೆಸ್‍ಪಾಸ್ ಕಾಯ್ದೆಯಡಿ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸಚಿವರು ಸೂಚಿಸಿದರು.
ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಬಜೆಟ್‍ನಲ್ಲಿ ಯೋಜನೆ ಘೋಷಣೆ ಮಾಡದಿದ್ದರೂ, ಪ್ರವಾಸೋದ್ಯಮ ಇಲಾಖೆಯಲ್ಲಿ 700 ಕೋಟಿ ರೂ. ಇದ್ದು, ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಆಗಬೇಕಿರುವ ಕಾರ್ಯಗಳಿಗೆ ಅನುದಾನ ನೀಡಲಾಗುವದು.
ಮಿನಿ ಬಸ್
ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ಈ ಹಿಂದೆ ಪ್ರವಾಸಿ ಮಿನಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ದಸರಾ ವೇಳೆಗೆ ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಪ್ರವಾಸಿ ಮಿನಿ ಬಸ್ ಕಲ್ಪಿಸಲಾಗುವದು ಎಂದು ತಿಳಿಸಿದರು.
ಹಾರಂಗಿ ಜಲಾಶಯದ ಆವರಣದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಸಂಗೀತ ಕಾರಂಜಿ ಹಾಗೂ ಉದ್ಯಾನವನವನ್ನು ನಿರ್ಮಿಸಲಾಗಿದೆ. ಆದರೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಸಂಗೀತ ಕಾರಂಜಿ ದುರಸ್ತಿಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ, ಅಗತ್ಯ ಕ್ರಮ ತೆಗೆದುಕೊಳ್ಳಲಾಗುವದು ಎಂದರು.
ಮಡಿಕೇರಿ ದಸರಾಗೆ ಹೆಚ್ಚಿನ ಅನುದಾನ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವದು ಎಂದರು.
ಪ್ರವಾಸೋದ್ಯಮ ಇಲಾಖೆಯನ್ನು ಮಾಹಿತಿ ಕೇಂದ್ರವನ್ನಾಗಿ ಮಾಡಿ, ಪ್ರವಾಸಿಗರಿಗೆ ಮಾಹಿತಿ ನೀಡುವಂತೆ ಕ್ರಮಕೈಗೊಳ್ಳಲಾಗುವದು. ದುಬಾರೆಯಲ್ಲಿ ರಿವರ್ ರ್ಯಾಫ್ಟಿಂಗ್ ನಿಷೇಧÀವಾಗಿರುವ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು, ರಿವರ್ ರ್ಯಾಫ್ಟಿಂಗ್ ನಿಷೇಧ ಸಂಬಂಧ ಕಡತ ನ್ಯಾಯಾಲಯದಲ್ಲಿದ್ದು, ಅಲ್ಲಿ ತೀರ್ಮಾನವಾಗಬೇಕಿದೆ ಎಂದರು.
ಶಾಸಕ ಎಂಪಿ. ಅಪ್ಪಚ್ಚುರಂಜನ್ ಮಾತನಾಡಿ, ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಕೊಡಗು ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು, ಪ್ರವಾಸೋದ್ಯ ಮಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ರಂಜನ್ ಸಲಹೆ ಮಾಡಿದರು.
ಶಾಸಕರಾದ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷರಾದ ಬಿ.ಎ. ಹರೀಶ್, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ, ಪ್ರಬಾರ ಎಸ್ಪಿ ಧರ್ಮೇಂದ್ರ ಮೀನಾ, ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ಅಧಿಕಾರಿ ಉದಯ ಕುಮಾರ್, ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಕಿರಣ್ ಕುಮಾರ್ ಇತರರು ಇದ್ದರು.