ಸೋಮವಾರಪೇಟೆ, ಜು. 13: ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಮುಂದಿನ ದಿನಗಳಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ರಾಜ್ಯ ಎಸ್ಎಫ್ಸಿ ವಿಶೇಷ ಅನುದಾನದಡಿ ರೂ. 1.98 ಕೋಟಿ ವೆಚ್ಚದಲ್ಲಿ ನೂತನ ಆಡಳಿತ ಸಮುಚ್ಚಯ ಭವನ ನಿರ್ಮಾಣವಾಗುತ್ತಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ತಾ. 16ರಂದು ಪ.ಪಂ. ನೂತನ ಕಚೇರಿ ಕಟ್ಟಡದ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ.
ಎಸ್ಎಫ್ಸಿ ವಿಶೇಷ ಅನುದಾನದಡಿ ರೂ.1.98 ಕೋಟಿ ವೆಚ್ಚದಲ್ಲಿ ಇಲ್ಲಿನ ಕ್ಲಬ್ರಸ್ತೆಯಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ನೂತನ ಕಟ್ಟಡದಲ್ಲಿ ಪಟ್ಟಣ ಪಂಚಾಯಿತಿಯ ಸಂಪೂರ್ಣ ಆಡಳಿತ ಯಂತ್ರ ಕಾರ್ಯನಿರ್ವಹಿಸಲಿದೆ. ನೂತನ ಸಮುಚ್ಚಯದಲ್ಲಿ ಅಧ್ಯಕ್ಷರು/ಉಪಾಧ್ಯಕ್ಷರ ಕೊಠಡಿ, ಕಂದಾಯ, ಇಂಜಿನಿಯರಿಂಗ್, ಆರೋಗ್ಯ ಇಲಾಖೆ ಸೇರಿದಂತೆ ಕಂಪ್ಯೂಟರ್ ಕೆಲಸಗಳಿಗಾಗಿಯೇ ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ.
ಇದರೊಂದಿಗೆ ಮೇಲಂತಸ್ತಿನಲ್ಲಿ ಸಭಾಂಗಣ, ದಾಖಲೆಗಳನ್ನು ಭದ್ರವಾಗಿರಿಸಲು ಕೊಠಡಿ, ಕಚೇರಿ ಸಿಬ್ಬಂದಿಗಳಿಗೆ ಶೌಚಾಲಯ, ನೆಲಮಾಳಿಗೆಯಲ್ಲಿ 40ಕ್ಕೂ ಅಧಿಕ ವಾಹನಗಳನ್ನು ನಿಲುಗಡೆಗೊಳಿಸಲು ಸ್ಥಳಾವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕ ಶೌಚಾಲಯ, ಜತೆಗೆ ನೂತನ ಕಟ್ಟಡದಲ್ಲಿ 8 ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಾಗಿದೆ.
ಈ ಹಿಂದೆ ಇದ್ದ ಕಟ್ಟಡ ಶಿಥಿಲಾವಸ್ಥೆಗೆ ತಲಪಿದ್ದರಿಂದ ಪ್ರಸ್ತುತ ಆಡಳಿತ ಮಂಡಳಿ ನೂತನ ಕಟ್ಟಡ ನಿರ್ಮಿಸಲು ತೀರ್ಮಾನಿಸಿದ ಮೇರೆ ಸುಸಜ್ಜಿತ ಆಡಳಿತ ಸಮುಚ್ಚಯ ಭವನ ನಿರ್ಮಾಣವಾಗಿದೆ. ಅಭಿಯಂತರ ವೀರೇಂದ್ರ ಅವರು ಕಟ್ಟಡದ ವಿನ್ಯಾಸ ಸಿದ್ಧಗೊಳಿಸಿದ್ದು, ಗುತ್ತಿಗೆದಾರ ಶ್ರೀನಿವಾಸ್ ಅವರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿದ್ದಾರೆ.
ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಆಡಳಿತ ಮಂಡಳಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸದಸ್ಯರಾದ ಬಿ.ಎಂ. ಸುರೇಶ್, ಲೀಲಾ ನಿರ್ವಾಣಿ, ಶೀಲಾ ಡಿಸೋಜ, ಮೀನಾಕುಮಾರಿ, ಸುಷ್ಮಾ, ಸುಶೀಲ, ಕೆ.ಎ. ಆದಂ, ವೆಂಕಟೇಶ್, ಈಶ್ವರ್ ಅವರುಗಳು ನೂತನ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿವಹಿಸಿ, ಉದ್ದೇಶಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳುವಂತೆ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ.
ತಾ. 16 ರಂದು ಪೂರ್ವಾಹ್ನ 11 ಗಂಟೆಗೆ ಕಟ್ಟಡದ ಉದ್ಘಾಟನೆಯನ್ನು ರಾಜ್ಯ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ನೆರವೇರಿಸಲಿದ್ದಾರೆ. ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಧ್ಯಕ್ಷತೆ ವಹಿಸಲಿದ್ದು, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸಂಸದ ಪ್ರತಾಪ್ಸಿಂಹ, ಶಾಸಕ ಕೆ.ಜಿ. ಬೋಪಯ್ಯ, ಎಂಎಲ್ಸಿ ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣಿ, ಬೋಜೇಗೌಡ, ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸೇರಿದಂತೆ ಪ.ಪಂ. ಸದಸ್ಯರುಗಳು ಭಾಗವಹಿಸಲಿದ್ದಾರೆ ಎಂದು ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ.