ಕುಶಾಲನಗರ, ಜು. 14: ಬ್ಯಾಂಕ್ ಗ್ರಾಹಕರೊಬ್ಬರಿಂದ ಎಟಿಎಂ ಕಾರ್ಡ್ ನಂಬರ್ ಪಡೆದ ಅಪರಿಚಿತನೊಬ್ಬ 6900 ರೂಗಳನ್ನು ನಗದೀಕರಿಸಿರುವ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೂಡ್ಲೂರು ನವಗ್ರಾಮದ ನಿವಾಸಿ ಆಟೋ ಚಾಲಕ ಎಸ್.ಎನ್. ಪುಟ್ಟಸ್ವಾಮಿ ಎಂಬವರೇ ಹಣ ಕಳೆದುಕೊಂಡವರು. ಕುಶಾಲನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‍ನಲ್ಲಿ ಖಾತೆ ಹೊಂದಿದ್ದ ಇವರಿಗೆ ತಾ.13ರ ಸಂಜೆ 7808995895 ಮೊಬೈಲ್ ಸಂಖ್ಯೆಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ ನಿಮ್ಮ ಎಟಿಎಂ ನಾಳೆ ಬ್ಲಾಕ್ ಆಗುತ್ತಿದೆ. ಅದನ್ನು ಆಕ್ಟೀವ್ ಮಾಡಬೇಕು ಎಂದು ತಿಳಿಸಿ ಎಟಿಎಂ ಕಾರ್ಡ್ ನಂಬರ್ ಪಡೆಯುವಲ್ಲಿ ಯಶಸ್ವಿಯಾಗಿದ್ದ.

ಸ್ವಲ್ಪ ಸಮಯದಲ್ಲಿ 4500, 300, 2000 ಮತ್ತು 100 ರೂ.ಗಳನ್ನು ಡ್ರಾ ಮಾಡಿಕೊಂಡ ಬಗ್ಗೆ ಮೊಬೈಲ್‍ನಲ್ಲಿ ಮಾಹಿತಿ ದೊರೆತಿದ್ದು, ಪುಟ್ಟಸ್ವಾಮಿ ತಕ್ಷಣ ಎಟಿಎಂಗೆ ಧಾವಿಸಿ ಅಕೌಂಟ್‍ನಲ್ಲಿದ್ದ ಹಣ ಪರಿಶೀಲಿಸಿದಾಗ ಹಣ ಡ್ರಾ ಆಗಿದ್ದು ಕಂಡು ಬಂದಿದೆ. ವಂಚನೆಯಾದ ಹಿನ್ನೆಲೆಯಲ್ಲಿ ಕುಶಾಲನಗರದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸ್ ಮತ್ತು ಬ್ಯಾಂಕ್ ಅಧಿಕಾರಿಗಳು ಇಂತಹ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ನ್ಯಾಯ ದೊರಕಿಸಬೇಕೆಂದು ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ.