ಕರಿಕೆ, ಜು. 13: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಕಾಟೂರ್ ನಾರಾಯಣ ನಂಬಿ ಯಾರ್ ಸ್ಮಾರಕ ಶಾಲೆ ಯಲ್ಲಿ ವಿದ್ಯಾರ್ಥಿಗಳು ಗಿಡ ನೆಡುವದರ ಮೂಲಕ ವನ ಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಟೂರು ಬಾಲಚಂದ್ರ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಕರಿಕೆ ಉಪ ವಲಯ ಅರಣ್ಯ ಅಧಿಕಾರಿ ಪಿ.ಟಿ. ಶಶಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕೊಡಗು ಜಿಲ್ಲೆಯ ಅರಣ್ಯ ಇಡೀ ದೇಶಕ್ಕೆ ಮಾಣಿಕ್ಯ ಇದ್ದಂತೆ. ಜೀವನಾಡಿ ಇದ್ದಂತೆ. ಏಕೆಂದರೆ ನಮ್ಮ ಜಿಲ್ಲೆಯ ಎಲ್ಲ ಭಾಗದ ಕಾಡು ಹಚ್ಚಹಸಿರಿನಿಂದ ಕೂಡಿದೆ. ಆದುದರಿಂದ ಈ ಕಾಡು ಹಲವು ನದಿಗಳ ಉಗಮ ಸ್ಥಾನವಾಗಿದೆ. ಪ್ರತಿಯೊಬ್ಬ ವ್ಯಕ್ತಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಜಾಗತಿಕ ತಾಪಮಾನ ಕಡಿಮೆ ಮಾಡಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಸಸಿಗಳನ್ನು ನೆಡಲಾಯಿತು. ಶಾಲಾ ಮಕ್ಕಳು, ಶಿಕ್ಷಕರು, ಪೋಷಕರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ರಾಜೀವ್ ಸ್ವಾಗತಿಸಿ, ಅರಣ್ಯ ರಕ್ಷಕ ಸಚಿನ್ ವಂದಿಸಿದರು.