ಸಿದ್ದಾಪುರ, ಜು. 13: ಸಿದ್ದಾಪುರ ಪಟ್ಟಣಕ್ಕೆ ಕಸ ಹಾಕಲು ಶಾಶ್ವತ ಜಾಗ ಒದಗಿಸಿ ಕೊಡಬೇಕೆಂದು ಜಿಲ್ಲಾಧಿಕಾರಿಗೆ ತ್ಯಾಜ್ಯ ನಿವಾರಣಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಕಸದ ಸಮಸ್ಯೆಯಿಂದ ಬಳಲುತ್ತಿರುವ ಸಿದ್ದಾಪುರಕ್ಕೆ ಕಸ ಹಾಕಲು ಬಾಡಗ ಬಾಣಾಂಗಾಲ ಗ್ರಾಮದ ಘಟ್ಟದಳ್ಳದ ಸರ್ವೆ ನಂ 28/1ರಲ್ಲಿ ಜಿಲ್ಲಾಡಳಿತ ಮಂಜೂರು ಮಾಡಿದ 50 ಸೆಂಟ್ ಜಾಗದ ಪಕ್ಕದಲ್ಲಿ ಕಾವೇರಿ ನದಿಯ ಜಲಮೂಲವಾದ ತೋಡು ಹರಿಯುತ್ತಿರುವದಲ್ಲದೆ ಸಾರ್ವಜನಿಕ ತೆರೆದ ಬಾವಿ ಹಾಗೂ ಕೆರೆಯು ಇದ್ದು ಅಲ್ಲಿ ಕಸ ವಿಲೇವಾರಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವಿರೋಧವಿದೆ. ವೈಜ್ಞಾನಿಕ ಕಸ ವಿಲೇವಾರಿಗೆ ಆ ಸ್ಥಳದಲ್ಲಿ ಕಾನೂನಿನ ತೊಡಕು ಇದೆ; ಬೇರೆ ಜಾಗ ಗುರುತಿಸುವಂತೆ ಸಮಿತಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಸಿದ್ದಾಪುರ ಭಾಗದಲ್ಲಿರುವ ಪೈಸಾರಿ ಜಾಗಗಳನ್ನು ಗುರುತಿಸಲು ಈಗಾಗಲೇ ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದು, ಜಾಗ ದೊರಕಿಸಿದ ತಕ್ಷಣ ಮಂಜೂರು ಮಾಡಲಾಗುವದಲ್ಲದೆ ಗ್ರಾ.ಪಂ. ಸಹ ಪೈಸಾರಿ ಜಾಗದ ಬಗ್ಗೆ ತಮಗೆ ಮಾಹಿತಿ ನೀಡುವಂತೆ ತಿಳಿಸಿದರು.

ಸಮಿತಿ ಸದಸ್ಯ ಸುಬ್ರಮಣಿ ಮಾತನಾಡಿ, ಸಿದ್ದಾಪುರ ಭಾಗದ ಜನತೆ ಕಸದ ಸಮಸ್ಯೆಯಿಂದ ನಲುಗುತ್ತಿದೆ, ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸಿದ್ದಾಪುರ ಭಾಗದಲ್ಲಿರುವ ಟಾಟಾ ಹಾಗೂ ಬಿ.ಬಿ.ಟಿ.ಸಿ. ಸೇರಿದ ಕಾಫಿ ತೋಟಗಳಲ್ಲಿ ಹಲವಾರು ಏಕ್ರೆ ಪೈಸಾರಿ ಜಾಗಗಳಿದ್ದು, ಅವುಗಳನ್ನು ಜಿಲ್ಲಾಡಳಿತದ ವತಿಯಿಂದ ಗುರುತಿಸಿ ಅಲ್ಲಿ ವೈಜ್ಞಾನಿಕ ಕಸ ವಿಲೇವಾರಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ಈ ಸಂದÀರ್ಭ ಗ್ರಾ.ಪಂ. ಅಧ್ಯಕ್ಷ ಮಣಿ, ತಾ.ಪಂ. ಸದಸ್ಯ ಜೇನಿಶ್ ಸೇರಿದಂತೆ ಸಮಿತಿ ಸದಸ್ಯರು ಇದ್ದರು.