ಮಡಿಕೇರಿ, ಜು. 14: ಅಲ್ಪಸಂಖ್ಯಾತರನ್ನು ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಸಂದರ್ಭ ಅಲ್ಪಸಂಖ್ಯಾತರನ್ನು ಅಧ್ಯಕ್ಷ ಸ್ಥಾನದಿಂದ ವಂಚಿತರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ನಗರಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ಕೆ.ಎಂ.ಗಣೇಶ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಕಾಂಗ್ರೆಸ್ ತಾನು ತೋಡಿರುವ ಬಾವಿಗೆ ತಾನೇ ಬಿದ್ದಿದ್ದು, ಮುಂದಿನ ನಗರಸಭಾ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ಸ್ಥಾಯಿ ಸಮಿತಿ ಸಭೆಗೆ ಮುಂಚಿತ ವಾಗಿ ವಿಶೇಷ ಸಭೆಯೊಂದನ್ನು ನಡೆಸಿ ಅಲ್ಪಸಂಖ್ಯಾತರಿಗೆ ಸಮಿತಿಯ ಅಧ್ಯಕ್ಷ ಸ್ಥಾನ ನೀಡುವಂತೆ ನಿರ್ಧಾರ ಕೈಗೊಳ್ಳಲು ನಗರಸಭಾ ಅಧ್ಯಕ್ಷರು ತನ್ನನ್ನು ಆಹ್ವಾನಿಸಿದ್ದರು. ತಾನು ಹಾಗೂ ಲೀಲಾಶೇಷಮ್ಮ ಅವರು ಉಪಸ್ಥಿತರಿದ್ದ ಆ ಸಭೆಯಲ್ಲಿ ಅಧ್ಯಕ್ಷರಾದಿಯಾಗಿ ಕಾಂಗ್ರೆಸ್ ಸದಸ್ಯರು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸ್ಥಾಯಿ ಸಮಿತಿ ಗೆಲ್ಲುವ ಮೂಲಕ ಅಲ್ಪಸಂಖ್ಯಾತರೊಬ್ಬರಿಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ನಿರ್ಧರಿಸಲಾಯಿತು. ಇದಕ್ಕೆ ನಮ್ಮ ಸಮ್ಮತಿಯೂ ಇತ್ತು. ಆದರೆ ಆಶ್ಚರ್ಯಕರ ಬೆಳವಣಿಗೆಯಲ್ಲಿ ತಾ. 9 ರಂದು ಕಾಂಗ್ರೆಸ್ ಮುಖಂಡರು ಲೀಲಾಶೇಷಮ್ಮ ಹಾಗೂ ನನ್ನ ನಗರಸಭಾ ಸದಸ್ಯತ್ವವನ್ನು ರದ್ದುಪಡಿಸುವಲ್ಲಿ ಯಶಸ್ವಿಯಾದರು. ಇದು ಕಾಂಗ್ರೆಸಿಗರ ಅಂದಿನ ಗೆಲುವಾಗಿತ್ತು, ಆದರೆ ನಾವು ಇಂದು ಸೋತು ಗೆದ್ದಿದ್ದೇವೆ ಎಂದು ಕೆ.ಎಂ.ಗಣೇಶ್ ಅಭಿಪ್ರಾಯಪಟ್ಟರು.

ನಮ್ಮ ವಿರುದ್ಧದ ಕಾಂಗ್ರೆಸ್ ಪಿತೂರಿ ಅಲ್ಪಸಂಖ್ಯಾತರಿಗೆ ಯಾವದೇ ಅಧಿಕಾರ ಸಿಗಬಾರದೆನ್ನುವದೇ ಆಗಿದೆ. ಕೆಲವು ಕಾಂಗ್ರೆಸ್ ಸದಸ್ಯರು ಮೇಲ್ನೋಟಕ್ಕೆ ಕಾಂಗ್ರೆಸ್ ಪಕ್ಷದಲ್ಲಿದ್ದಂತೆ ಇದ್ದುಕೊಂಡು ಬಿಜೆಪಿಗೆ ಸಹಕಾರ ನೀಡುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು. ನಗರದ ಜನತೆ ಮತ್ತು ಅಲ್ಪಸಂಖ್ಯಾತರ ಹಾದಿ ತಪ್ಪಿಸುತ್ತಿರುವ ಕಾಂಗ್ರೆಸ್‍ನ್ನು ಬೇರು ಸಹಿತ ಕಿತ್ತೊಗೆಯುವ ಅನಿವಾರ್ಯತೆ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಅನರ್ಹ ಗೊಂಡಿರುವ ಮತ್ತೊಬ್ಬ ಸದಸ್ಯರಾದ ಲೀಲಾ ಶೇಷಮ್ಮ ಮಾತನಾಡಿ, ನಗರಸಭಾ ಅಧ್ಯಕ್ಷರ ಬೇಜವಾಬ್ದಾರಿತನದಿಂದಲೇ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಅಧಿಕಾರ ಕೈ ತಪ್ಪಿ ಹೋಗಿದೆ ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಪಕ್ಷದೊಳಗಿನ ಎಲ್ಲಾ ಗೊಂದಲಗಳಿಗೆ ಸದಸ್ಯ ಹೆಚ್.ಎಂ. ನಂದಕುಮಾರ್ ನೇರಹೊಣೆ ಎಂದು ಆರೋಪಿಸಿದರು.