*ಗೋಣಿಕೊಪ್ಪಲು, ಜು. 14: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಗುರುವಾರ ಜರುಗಿತು. ಮುಖ್ಯ ಅತಿಥಿಯಾಗಿದ್ದ ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ. ಸಿ.ಜಿ.ಕುಶಾಲಪ್ಪ ಮಾತನಾಡಿ, ಸೇವೆಯೇ ನಾಯಕತ್ವದ ಪ್ರಮುಖ ಲಕ್ಷಣ. ನಾಯಕರಾದವರು ನೈತಿಕತೆಯನ್ನು ಕಾಪಾಡಿಕೊಂಡು ಉತ್ತಮ ಸೇವೆ ಮಾಡುತ್ತಾ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರಕೃತಿಯ ಗಿಡಮರಗಳನ್ನು ಆಧಾರವಾಗಿಟ್ಟುಕೊಂಡು ಅವುಗಳ ಬೆಳವಣಿಗೆಯನ್ನು ಗಮನಿಸಿ ವಿದ್ಯಾರ್ಥಿಗಳು ಕೂಡ ಅವುಗಳಂತೆ ಬೆಳೆಯಲು ಪ್ರಯತ್ನಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಂ. ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿ ಸಂಘದ ನಾಯಕರು ಇತರರಿಗೆ ಮಾದರಿಯಾಗಿ ನಡೆದುಕೊಳ್ಳಬೇಕು. ಪ್ರಾಂಶುಪಾಲರ ಹಾಗೂ ಅಧ್ಯಾಪಕರ ಸಲಹೆ ಪಡೆದು ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದು ನುಡಿದರು.
2018-19ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಡಾ. ಸಿ.ಜಿ.ಕುಶಾಲಪ್ಪ ಬ್ಯಾಡ್ಜ್ ತೊಡಿಸಿದರು. ಪ್ರಾಂಶುಪಾಲ ಕುರಿಯಕೋಸ್ ಪ್ರತಿಜ್ಞಾವಿಧಿ ಭೋದಿಸಿದರು. ಬಳಿಕ ವಿದ್ಯಾರ್ಥಿಗಳ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ರಂಜಿಸಿತು.