ಸುಂಟಿಕೊಪ್ಪ, ಜು. 14: ಕೃಷಿ ಪ್ರಧಾನ ಭಾರತ ರಾಷ್ಟ್ರದಲ್ಲಿ ಭತ್ತದ ಕೃಷಿಗೆ ಹಿನ್ನಡೆಯಾದರೆ ದೇಶದ ಅರ್ಥಿಕತೆಗೆ ಹಿನ್ನಡೆಯಾಗಲಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು.

ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಹೋಬಳಿ ಮಟ್ಟದ ಕೃಷಿ ಅಭಿಯಾನದಲ್ಲಿ ವಸ್ತು ಪ್ರದರ್ಶನ ಕೃಷಿ ಉಪಕರಣದ ಪ್ರಾತ್ಯಕ್ಷಿಕತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಈ ದೇಶದ ಬೆನ್ನೆಲುಬು ಕೃಷಿ ಪ್ರಧಾನವಾದ ರಾಷ್ಟ್ರವಾದ ನಮ್ಮಲ್ಲಿ ರೈತರು ಇತ್ತಿಚಿಗೆ ಆಧುನಿಕ ಕೃಷಿ ಪದ್ದತಿಯಿಂದ ಕೃಷಿಯಲ್ಲಿ ಪ್ರಗತಿ ಸಾಧಿಸಿರುವದು ಶ್ಲಾಘನೀಯ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ಕೃಷಿ ಅಭಿಯಾನದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕೃಷಿಕರು ಆಧುನಿಕ ಕೃಷಿಯ ಹಲವು ಮಜಲುಗಳನ್ನು ರೂಢಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಯಿಂದ ಯಂತ್ರೋಪಕರಣ ಗಳನ್ನು ಬಳಸಿಕೊಂಡು ಸರ್ಕಾರ ದಿಂದ ಸಿಗುವ ಸಬ್ಸಿಡಿಯನ್ನು ಸದುಪ ಯೋಗ ಪಡಿಸಿಕೊಳ್ಳಬೇಕೇಂದು ಹೇಳಿದರು.

ಜಿ.ಪಂ. ಸದಸ್ಯೆ ಕುಮುಧಾ ಧರ್ಮಪ್ಪ ಮಾತನಾಡಿ, ಕೃಷಿ, ತೋಟಗಾರಿಕೆಯಿಂದ ಸಿಗುವ ಸೌಲಭ್ಯವನ್ನು ರೈತರು ಬಳಸಿಕೊಳ್ಳ ಬೇಕು. ಕೃಷಿ ಅಧಿಕಾರಿಗಳು ಬೆಳೆಗಾರರಿಗೆ ಸರಕಾರದಿಂದ ಸಿಗುವ ಸ್ಪಿಂಕ್ಲರ್ ಪೈಪು, ಇತರೆ ಉಪಕರಣಗಳನ್ನು ಸಬ್ಸಿಡಿ ದರದಲ್ಲಿ ನೀಡುವಲ್ಲಿ ಹಿಂದೇಟು ಹಾಕುತ್ತಿರುವದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಮನಪರಿವರ್ತಿಸಿ ರೈತರಿಗೆ ಸೌಲಭ್ಯ ಒದಗಿಸಿಕೊಡಬೇಕೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಮಾತನಾಡಿ, ಸರಕಾರದಿಂದ ರೈತರ ಕೃಷಿ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕು ಎಂದು ಹೇಳಿದರು.

ಕೃಷಿ, ತೋಟಗಾರಿಕೆ, ಪಶು ವೈದ್ಯಕೀಯ ಇಲಾಖೆಯ ವತಿಯಿಂದ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ವಹಿಸಿದ್ದರು.

ಅತಿಥಿಗಳಾಗಿ ತಾ.ಪಂ. ಸದಸ್ಯರಾದ ಓಡಿಯಪ್ಪನ ವಿಮಲಾವತಿ, ಹೆಚ್.ಡಿ. ಮಣಿ, ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಕೆದಕಲ್ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ರೈ, ಕಂಬಿಬಾಣೆ ಗ್ರಾ.ಪಂ. ಅಧ್ಯಕ್ಷ ಕೃಷ್ಣ, ಏಳನೇ ಹೊಸಕೋಟೆ ಗ್ರಾ.ಪಂ. ಅಧ್ಯಕ್ಷೆ ಸುಮಲತಾ, ಹರದೂರು ಗ್ರಾ.ಪಂ. ಅಧ್ಯಕ್ಷೆ ಸುಮ, ಕೃಷಿ ಅಧಿಕಾರಿ ಬೋಪಯ್ಯ ಉಪಸ್ಥಿತರಿದ್ದರು.

ಕೃಷಿ ತಾಂತ್ರಿಕ ಅಧಿಕಾರಿ ಡಾ. ಎಸ್. ಮುಕುಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರೈತ ರೊಂದಿಗೆ ಸಂವಾದ ಕಾರ್ಯಕ್ರಮ ದಲ್ಲಿ ವಿಜ್ಞಾನಿಗಳಾದ ಗೋಣಿಕೊಪ್ಪ ಕೆ.ವಿ.ಕೆ ವಿಜ್ಞಾನಿಗಳಾದ ಡಾ. ವೀರೇಂದ್ರ ಕುಮಾರ್, ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ವೆಂಕಟರಮಣಪ್ಪ, ವಿಜ್ಞಾನಿ ಡಾ. ವೈಶಾಕಿ, ಭಾಗವಹಿಸಿ ಮಾಹಿತಿ ನೀಡಿದರು.