ಪೊನ್ನಂಪೇಟೆ, ಜು. 14: ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಉಂಟಾಗುವ ಅತಿವೃಷ್ಟಿಯ ಅನಾಹುತಗಳನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಮಳೆಹಾನಿ ಪರಿಹಾರವನ್ನು ತ್ವರಿತವಾಗಿ ವಿತರಿಸಲು ಸರಕಾರ ‘ಕೊಡಗು ಮಳೆಹಾನಿ ಪರಿಹಾರ ಪ್ರಾಧಿಕಾರ’ವನ್ನು ರಚಿಸಿ ಅದಕ್ಕೆ ಶಾಸನಬದ್ದವಾದ ಅಧಿಕಾರ ನೀಡಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಒತ್ತಾಯಿಸಿದೆ.

ಈ ಕುರಿತು ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಅವರ ನೇತೃತ್ವದ ಕೆ.ಎಂ.ಎ. ನಿಯೋಗ ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಗುರುವಾರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ಪ್ರಸಕ್ತ ವರ್ಷದಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಕೊಡಗಿನ ಮಳೆಹಾನಿ ಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ‘ಕೊಡಗು ಮಳೆಹಾನಿ ಪರಿಹಾರ ಪ್ರಾಧಿಕಾರ’ವನ್ನು ರಾಜ್ಯ ಸರಕಾರದ ಅಧೀನದಲ್ಲಿ ರಚಿಸಿ ಮಳೆಹಾನಿಗೆ ಪರಿಹಾರ ವಿತರಣೆ ಮತ್ತು ಮಳೆಹಾನಿ ಪೀಡಿತ ಪ್ರದೇಶದ ಅಭಿವೃದ್ದಿ ಕಾಮಗಾರಿಯಲ್ಲಿ ಬದಲಾವಣೆ ತರಬೇಕು ಎಂದು ಮನವಿ ಪತ್ರದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದಿರುವ ಕೆ.ಎಂ.ಎ., ಕಳೆದ ತಿಂಗಳು ಸುರಿದ ಮಹಾಮಳೆಗೆ ತೀವ್ರವಾಗಿ ತತ್ತರಿಸಿದ, ವೀರಾಜಪೇಟೆಯಿಂದ ಉತ್ತರ ಕೇರಳ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದ ಪೆರುಂಬಾಡಿ- ಮಾಕುಟ್ಟ ರಸ್ತೆಯ ನಿರ್ವಹಣೆಗಾಗಿ ಸರಕಾರ ವಿಶೇಷ ಪ್ಯಾಕೇಜ್ ರೂಪಿಸಬೇಕು.

ಕೊಡಗಿನ ಜಮ್ಮಾಬಾಣೆ, ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಮತ್ತು ವನ್ಯಪ್ರಾಣಿಗಳ ಉಪಟಳ, ಹಲವಾರು ಗ್ರಾಮೀಣ ರಸ್ತೆಗಳ ದುಸ್ಥಿತಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಕಂದಾಯ, ಅರಣ್ಯ ಸೇರಿದಂತೆ ಹಲವು ಇಲಾಖೆಗಳಲ್ಲಿ ಜನಸಾಮಾನ್ಯರ ಕಡತ ವಿಲೇವಾರಿ ಸಮರ್ಪಕವಾಗಿ ಆಗದಿರುವದು ಮೊದಲಾದ ಸಮಸ್ಯೆಗಳು ಕೊಡಗಿನ ಜನರನ್ನು ನಿರಂತರವಾಗಿ ಕಾಡುತ್ತಿದೆ. ಅದ್ದರಿಂದ ಈ ಸಮಸ್ಯೆಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಇದರಿಂದ ಜನರಿಗೆ ಮುಕ್ತಿ ಕಲ್ಪಿಸಬೇಕೆಂದು ಮುಖ್ಯಮಂತ್ರಿಗಳನ್ನು ಕೆ.ಎಂ.ಎ. ಆಗ್ರಹಿಸಿದೆ.

4 ದಶಕಗಳನ್ನು ಪೊರೈಸಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ ಸಂಸ್ಥೆ ವತಿಯಿಂದ ಹಲವಾರು ಜನಪರ ಯೋಜನೆಗಳ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದೆ. ಇದಕ್ಕಾಗಿ ಸರಕಾರದ ಅನುದಾನ ನೀಡುವಂತೆ ಮನವಿ ಮಾಡಲಾಯಿತು.

ಕೆ.ಎಂ.ಎ. ನಿಯೋಗದ ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಗಳು, ಕೆ.ಎಂ.ಎ. ವತಿಯಿಂದ ನೀಡಲಾದ ಪ್ರತಿ ಮನವಿಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಆದ್ಯತೆ ಮೇರೆಗೆ ಕ್ರಮ ತೆಗೆದುಕೊಳ್ಳಲಾಗುವದು ಎಂದರು. ಕೆ.ಎಂ.ಎ. ನಿಯೋಗದಲ್ಲಿ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಸಹ ಕಾರ್ಯದರ್ಶಿ ಮಂಡೇಂಡ ಎ. ಮೊಯ್ದು, ಸದಸ್ಯ ದುದ್ದಿಯಂಡ ಮಾಶೂಕ್ ಸೂಫಿ ಅವರಿದ್ದರು