ಮಡಿಕೇರಿ, ಜು. 14: ತಾ. 16.2.2013ರಂದು ನಗರದ ಮೈಸೂರು ರಸ್ತೆಯ ಅರಣ್ಯ ಭವನ ಹತ್ತಿರ ಇರುವ ಪ್ರಯಾಣಿಕರ ಬಸ್ ತಂಗುದಾಣದಲ್ಲಿ ಆರೋಪಿಗಳಾದ ಮೈಸೂರಿನ ಚಿಲ್ಕುಂದ ನಿವಾಸಿ ಸಾಬುಲಾಲ್ ಮಗ ಮಹಮ್ಮದ್ ಆಲಿ ಮತ್ತು ಪಿರಿಯಾಪಟ್ಟಣ ತಾಲೂಕು, ಆಯಿರಬೀಡು ನಿವಾಸಿ ಸಯ್ಯದ್‍ಮೀರ್ ಮಗ ಸಯ್ಯದ್ ಅನ್ವರ್ ಎನ್ನುವವರು ಸುಮಾರು 2 ಕೆ.ಜಿ. ಯಷ್ಟು ಗಾಂಜಾವನ್ನು ಅಕ್ರಮವಾಗಿ ಮಾರಾಟಕ್ಕೆ ಯತ್ನಿಸಿದ್ದರು. ಸರ್ಕಾರದ ಯಾವದೇ ಪರವಾನಿಗೆ ಇಲ್ಲದೆ ಮಾರಾಟ ಮಾಡಲು ಪ್ರಯತ್ನಿಸಿದ್ದನ್ನು ಪತ್ತೆ ಹಚ್ಚಿದ ಪೊಲೀಸ್ ಉಪ ಅಧೀಕ್ಷಕರು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಲಾಗಿತ್ತು.
ಈ ಪ್ರಕರಣದ ವಿಚಾರಣೆಯು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಸಲಾಗಿದ್ದು, ಆರೋಪಿಗಳಾದ ಮಹಮ್ಮದ್ ಆಲಿ ಮತ್ತು ಸಯ್ಯದ್ ಅನ್ವರ್ ಅಕ್ರಮ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸಿರುವದು ಸಾಕ್ಷಿಗಳ ವಿಚಾರಣೆಯಿಂದ ಸಾಬೀತಾಗಿದೆ ಎಂದು ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾಚಾರ್ಯ ತೀರ್ಪು ನೀಡಿ, ಆರೋಪಿಗಳಿಗೆ 5 ವರ್ಷಗಳ ಶಿಕ್ಷೆ ಹಾಗೂ ತಲಾ ರೂ. 50 ಸಾವಿರ ದಂಡವನ್ನು ಹಾಗೂ ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಸಜೆಯನ್ನು ಅನುಭವಿಸುವಂತೆ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಕೃಷ್ಣವೇಣಿ ವಾದ ಮಂಡಿಸಿದ್ದರು.
ಮತ್ತೊಂದು ಪ್ರಕರಣದಲ್ಲಿ ಶಿಕ್ಷೆ
ತಾ. 3.4.2013 ರಂದು ಮಧ್ಯಾಹ್ನ 12.15 ಗಂಟೆಯಲ್ಲಿ ಕುಶಾಲನಗರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಮಾದಾಪಟ್ಟಣ ಗ್ರಾಮದಲ್ಲಿರುವ ಕಾವೇರಿ ನಿಸರ್ಗಧಾಮದ ಫುಡ್‍ಕೋರ್ಟ್ ಹತ್ತಿರ ರಸ್ತೆಯಲ್ಲಿ ಆರೋಪಿ ಅಲ್ತಾಫ್‍ಪಾಷಾ ಯಾನೆ ಆಲ್ತಾಫ್, 3ನೇ ಬ್ಲಾಕ್, ಹಳೆ ಐಬಿ ಹತ್ತಿರ, ನೇತಾಜಿ ಬಡಾವಣೆ, ಕುಶಾಲನಗರ ನಿವಾಸಿ ಸರಕಾರದ ಯಾವದೇ ಪರವಾನಿಗೆ ಪಡೆಯದೆ ಸುಮಾರು ರೂ. 1 ಲಕ್ಷ ಬೆಲೆ ಬಾಳುವ 5 ಕೆ.ಜಿ. ಗಾಂಜಾವನ್ನು ಮಾರಾಟಕ್ಕೆ ಯತ್ನಿಸಿದ್ದಾನೆ. ಅಲ್ಲದೆ ಹಿಂದಿ ಭಾಷೆಯಲ್ಲಿ ‘‘ದಾನೆದಾನೆ ಮೆ ಧಂ ಕೇಸರ್ ಯುಕ್ತ್ ವಿಮಲ್’’ ಎಂಬದಾಗಿ ಬರೆದಿರುವ ಬಟ್ಟೆಯ ಬ್ಯಾಗಿನಲ್ಲಿ ಎರಡು ಖಾಕಿ ಪೇಪರ್ ಪ್ಯಾಕಿನಲ್ಲಿ ಮತ್ತು ಒಂದು ಕಪ್ಪು ಪ್ಲಾಸ್ಟಿಕ್ ಕವರಿನಲ್ಲಿ ಮೂರು ಗಂಟುಗಳನ್ನಾಗಿ ಮಾಡಿಕೊಂಡು ಅಕ್ರಮವಾಗಿ ಇಟ್ಟುಕೊಂಡಿರುವದನ್ನು ಪೊಲೀಸ್ ನಿರೀಕ್ಷಕರು ಪತ್ತೆಹಚ್ಚಿದ್ದರು.
ಆ ಮೇರೆಗೆ ಆರೋಪಿತನ ವಿರುದ್ಧ ಕುಶಾಲನಗರ ಠಾಣಾ ಪೊಲೀಸರು ಕಲಂ 20(ಬಿ), 8(ಸಿ), ಎನ್.ಡಿ.ಪಿ.ಎಸ್. ಕಾಯಿದೆ ಅಡಿ ಮೊಕದ್ದಮೆ ನೊಂದಾಯಿಸಿಕೊಂಡು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಲಾಗಿ, ಸದರಿ ಆರೋಪಿತನು ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಇಟ್ಟುಕೊಂಡಿರುವದು ಸಾಬೀತಾಗಿದೆ. ಈ ಮೇರೆಗೆ ಜಿಲ್ಲಾ ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾಚಾರ್ಯ ಅವರು ತೀರ್ಪು ನೀಡಿ ಆರೋಪಿತನಿಗೆ 5 ವರ್ಷಗಳ ಶಿಕ್ಷೆ ಹಾಗೂ ರೂ. 50ಸಾವಿರ ದಂಡವನ್ನು ವಿಧಿಸಿದ್ದು, ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಸಾದಾಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಕೃಷ್ಣವೇಣಿ ವಾದ ಮಂಡಿಸಿದರು.