ಮಡಿಕೇರಿ, ಜು. 14: ಬ್ಯಾಂಕ್‍ಗೆ ವಂಚಿಸಿದ ಪ್ರಕರಣದಲ್ಲಿ ಶಿಕ್ಷೆಗೊಳಪಟ್ಟು ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು 22 ವರ್ಷಗಳ ಬಳಿಕ ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಹಾಸನದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್‍ನಿಂದ ಮಡಿಕೇರಿ ಕೊಹಿನೂರು ರಸ್ತೆಯ ಎಸ್. ರವಿಚಂದ್ರನ್ ಎಂಬಾತ ತನ್ನ ಸ್ನೇಹಿತರಾದ ಪ್ರಮೋದ್, ಗೌತಮ್ ಮತ್ತು ಅಬ್ದುಲ್ ರಹಮಾನ್ ಅವರೊಂದಿಗೆ ಸೇರಿ ರೂ. 10ರ ಡಿ.ಡಿ. ಪಡೆದು ಅದನ್ನು 10 ಲಕ್ಷ ಎಂದು ತಿದ್ದಿ ಮಡಿಕೇರಿ ಎಸ್‍ಬಿಐ ಖಾತೆಯಲ್ಲಿ ನಗದೀಕರಿಸಲು ನೀಡಿದ್ದ. ಈ ವೇಳೆ ಆತ ಡಿಡಿಯನ್ನು ತಿದ್ದಿರುವದು ಪತ್ತೆಯಾಗಿ ಬ್ಯಾಂಕ್ ವ್ಯವಸ್ಥಾಪಕರಾಗಿದ್ದ ಬೋಪಣ್ಣ ಅವರು ಪೊಲೀಸ್ ದೂರು ನೀಡಿದ್ದರು. ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಆರೋಪಿ ರವಿಚಂದ್ರನ್‍ಗೆ 16.9.2000ದಂದು 4 ವರ್ಷ ಸಜೆ ವಿಧಿಸಲ್ಪಟ್ಟಿತ್ತು. ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ. ಇದೀಗ 22 ವರ್ಷಗಳ ಬಳಿಕ ಕೇರಳದ ಕೊಚ್ಚಿನ್‍ನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಡಿಕೇರಿ ನಗರ ವೃತ್ತ ನಿರೀಕ್ಷಕ ಐ.ಪಿ. ಮೇದಪ್ಪ ನೇತೃತ್ವದಲ್ಲಿ ಪಿ.ಎಸ್.ಐ. ಷಣ್ಮುಗಂ ಎಂ., ಎ.ಎಸ್.ಐ. ಸುಬ್ಬಯ್ಯ ಮತ್ತು ಸಿಬ್ಬಂದಿ ಸಿದ್ದಾರ್ಥ, ದಿನೇಶ್, ಮಧುಸೂದನ್, ಸಿ.ಡಿ.ಆರ್. ವಿಭಾಗದ ಗಿರೀಶ್, ರಾಜೇಶ್ ಕಾರ್ಯಾಚರಣೆ ನಡೆಸಿದರು.