ಮಡಿಕೇರಿ, ಜು. 13: ಕೊಡಗು ಜಿಲ್ಲೆಯಾದ್ಯಂತ ಮಳೆ ತೀವ್ರಗೊಂಡು ನದಿ- ತೊರೆಗಳು ತುಂಬಿ ಹರಿಯುವದರೊಂದಿಗೆ ಎಲ್ಲೆಡೆ ಗದ್ದೆಗಳು ಜಲಾವೃತಗೊಂಡಿವೆ. ಜಿಲ್ಲಾ ಕೇಂದ್ರ ಮಡಿಕೇರಿಯ ಮಂಗಳೂರು ರಸ್ತೆಯಲ್ಲಿ ಕುಸಿತದೊಂದಿಗೆ ಅಪಾಯ ಗೋಚರಿಸಿದೆ. ಶಾಂತಳ್ಳಿ ಹಾಗೂ ಮಡಿಕೇರಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದಲ್ಲಿ ಸರಾಸರಿ 103 ಇಂಚು ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಗೆ ಮಡಿಕೇರಿಗೆ 44.78 ಇಂಚು ಮಳೆಯಾದರೆ, ಶಾಂತಳ್ಳಿ ವ್ಯಾಪ್ತಿಯಲ್ಲಿ 40.17 ಇಂಚು ಇಂದಿಗೆ ದಾಖಲಾಗಿತ್ತು.

ಮಡಿಕೇರಿ - ಮಂಗಳೂರು ರಸ್ತೆಯ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಹೆದ್ದಾರಿ ಒಂದು ಬದಿ ಬಿರುಕುಬಿಟ್ಟಿದ್ದು, ಕುಸಿಯುವ ಹಂತದಲ್ಲಿದೆ. ಕುಸಿತವಾದಲ್ಲಿ ಸುಳ್ಯ, ಮಂಗಳೂರ ಕಡೆಗೆ ಸಂಪರ್ಕವೇ ಕಡಿತಗೊಳ್ಳುವ ಸಾಧ್ಯತೆಯಿದೆ. ಬಿರುಕು ಬಿಟ್ಟಿರುವ ಸ್ಥಳದಲ್ಲಿ ಸಂಚಾರಿ ಪೊಲೀಸರು ಎರಡೂ ಬದಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಇಕ್ಕಡೆಗಳಲ್ಲೂ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿ ವಾಕಿಟಾಕಿ ಸಂಪರ್ಕದ ಮೂಲಕ ಒಂದೇ ಬದಿಯಲ್ಲಿ ಒಂದಾದ ನಂತರ ಮತ್ತೊಂದರಂತೆ ವಾಹನಗಳಿಗೆ ಸಂಚರಿಸಲು ಅನುಕೂಲ ಮಾಡಿಕೊಡುತ್ತಿದ್ದಾರೆ. ಅಲ್ಲದೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಬಿರುಕುಗಳಿಗೆ ಸಿಮೆಂಟ್ ತೇಪೆ ಹಾಕಿಸಿದ್ದಾರೆ. ಮಳೆ ಮುಂದುವರಿದಲ್ಲಿ ಅಥವಾ ನಂತರದಲ್ಲಿ ಕೂಡ ಯಾವದೇ ಭಾರೀ ವಾಹನಗಳು ಬಿರುಕಿನ ಮೇಲೆ ಸಂಚರಿಸಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಶಿರಾಡಿಘಾಟ್, ಚಾರ್ಮುಡಿ ಘಾಟ್‍ಗಳಲ್ಲಿ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ಭಾರೀ ವಾಹನಗಳು ಸಂಚರಿಸುತ್ತಿರುವದರಿಂದ ಹೆದ್ದಾರಿ ಸಂಪೂರ್ಣ ಹಾಳಾಗುತ್ತಿದೆ. 4 ವರ್ಷಗಳ ಹಿಂದೆ ಕೊಯನಾಡು ಹೆದ್ದಾರಿ ಕುಸಿದು ಅಡಚಣೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಭಾಗಮಂಡಲ: ತಲಕಾವೇರಿ ವ್ಯಾಪ್ತಿಯಲ್ಲಿ ಅಧಿಕ ಮಳೆಯೊಂದಿಗೆ ಸಂಗಮ ಕ್ಷೇತ್ರ ಮುಳುಗಡೆಯಾಗಿದ್ದು, ನಾಪೋಕ್ಲು ಹಾಗೂ ಮಡಿಕೇರಿ ಮಾರ್ಗಗಳು ಜಲಾವೃತಗೊಂಡು ಇಂದು ಕೂಡ ವಾಹನ ಸಂಚಾರ ಸ್ಥಗಿತಗೊಂಡು ಜನತೆ ದೋಣಿ ಆಶ್ರಯಿಸಬೇಕಾಯಿತು.

ಜನತೆಯ ಆತಂಕ: ದಕ್ಷಿಣ ಕೊಡಗಿನ ಗ್ರಾಮೀಣ ಪ್ರದೇಶಗಳು ಸೇರಿದಂತೆ, ಉತ್ತರ ಕೊಡಗಿನ ಪುಷ್ಪಗಿರಿ ತಪ್ಪಲಿನ ಶಾಂತಳ್ಳಿ ವ್ಯಾಪ್ತಿಯಲ್ಲಿ ಮಳೆಯ ತೀವ್ರತೆಯಿಂದ ಅಲ್ಲಲ್ಲಿ ಭೂಕುಸಿತ, ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ಮರಗಳು, ರೆಂಬೆಕೊಂಬೆಗಳು ಬಿದ್ದು ಕೃಷಿ ಫಸಲು ಹಾನಿಗೊಂಡು ಗ್ರಾಮಸ್ಥರು ಆತಂಕದಲ್ಲಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ವಿವರಿಸಿದ್ದಾರೆ. ಕಳೆದ ವರ್ಷಕ್ಕಿಂತ ಈಗಾಗಲೇ 62 ಇಂಚು ಅಧಿಕ ಮಳೆಯಾಗಿದ್ದು, ಕಳೆದ ಸಾಲಿನಲ್ಲಿ ಕೇವಲ ಇಂದಿಗೆ 40 ಇಂಚು ಮಾತ್ರ ಮಳೆಯಾಗಿದ್ದುದಾಗಿ ನೆನಪಿಸಿದ್ದಾರೆ.

ಮಡಿಕೇರಿಯ ಚಾಮುಂಡೇಶ್ವರಿ ನಗರದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ಮನೆಯೊಂದರ ತಡೆಗೋಡೆ ಕುಸಿತಗೊಂಡು ಮನೆಯು ಅಪಾಯದಂಚಿನಲ್ಲಿರುವ ಘಟನೆ ನಡೆದಿದೆ. ಒಳಚರಂಡಿ ವ್ಯವಸ್ಥೆ ಸರಿಪಡಿಸದಿರುವದು ಹಾಗೂ ತಡೆಗೋಡೆ ಕುಸಿತದಿಂದ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಓಡಾಟಕ್ಕೆ ಅನಾನುಕೂಲವಾಗಿದೆ. ಈ ಬಗ್ಗೆ ಮಾಲೀಕರಾದ ಖದಿಜಾಬಿ ಅವರು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದವರಿಗೆ ದೂರು ನೀಡಿದ್ದಾರೆ.

ಸೋಮವಾರಪೇಟೆ ವ್ಯಾಪ್ತಿ ಹಾನಿ

ಸೋಮವಾರಪೇಟೆ: ತಾಲೂಕಿನ ಬಹುತೇಕ ಹೋಬಳಿಗಳಲ್ಲಿ ಭಾರೀ ಗಾಳಿ ಮಳೆ ಮುಂದುವರೆದಿದ್ದು, ಇದರೊಂದಿಗೆ ಹಾನಿ ಪ್ರಕರಣಗಳೂ ವರದಿಯಾಗಿವೆ.

ದಿನದ 24 ಗಂಟೆಯೂ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿಹರಿಯುತ್ತಿದ್ದರೆ ಗ್ರಾಮೀಣ ಭಾಗದ ರಸ್ತೆಗಳು ತೀರಾ ಹದಗೆಟ್ಟಿವೆ. ಕಾಫಿ ತೋಟಗಳ ಒಳಗೆ ಪ್ರವೇಶಿಸಲೂ ಅಸಾಧ್ಯವಾಗಿ ಬಹುತೇಕ ಕಡೆಗಳಲ್ಲಿ ಕೆಲಸ ಸ್ಥಗಿತಗೊಳಿಸಲಾಗಿದೆ.

ಕಾಫಿ ತೋಟದೊಳಗೆ ಮರಗಳು ಉರುಳುತ್ತಿದ್ದು, ತೋಟದೊಳಗೆ ಹಾದುಹೋಗಿರುವ ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿರುವದರಿಂದ ವಿದ್ಯುತ್ ಸಮಸ್ಯೆಯೂ ತಲೆದೋರಿದೆ. ಎಲ್ಲಾ ಭಾಗಗಳಿಗೆ ವಿದ್ಯುತ್ ಒದಗಿಸಲು ಸೆಸ್ಕ್ ಇಲಾಖಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಇನ್ನು ಹೊಳೆಪಾತ್ರದ ಗದ್ದೆಗಳಲ್ಲಿ ನೀರು ನಿಲುಗಡೆಯಾಗಿರುವದರಿಂದ ಗದ್ದೆ ಕೆಲಸಗಳಿಗೂ ತೀವ್ರ ಹಿನ್ನಡೆಯಾಗಿದೆ. ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ನಾಟಿ ಕಾರ್ಯ ಪ್ರಾರಂಭವಾಗಿದ್ದನ್ನು ಹೊರತುಪಡಿಸಿದರೆ, ಉಳಿದೆಡೆ ಸಸಿಮಡಿ ಪ್ರಗತಿಯಲ್ಲಿದೆ.

ತೋಳೂರುಶೆಟ್ಟಳ್ಳಿ ಭಾಗದಲ್ಲಿ ಕಳೆದ 24 ಗಂಟೆಗಳಲ್ಲಿ 6 ಇಂಚಿನಷ್ಟು ಮಳೆ ಸುರಿದಿದೆ. ತೋಳೂರುಶೆಟ್ಟಳ್ಳಿಯ ಭಾಗ್ಯ ರಾಮ ಎಂಬವರ ಮನೆಯ ಗೋಡೆ ಬಿದ್ದಿದ್ದು, ಹಂಚಿನ ಚಾವಣಿ ನೆಲಸಮಗೊಂಡಿದೆ. ಇದರೊಂದಿಗೆ ಕ್ಲಬ್ ಕಟ್ಟಡದ ಹಿಂಭಾಗ ಬರೆ ಕುಸಿತಗೊಂಡಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸೋಮವಾರಪೇಟೆ-ಶಾಂತಳ್ಳಿ ಹೆದ್ದಾರಿಯ ಬಸವನಕಟ್ಟೆ ಸಮೀಪ ಬರೆಕುಸಿತಗೊಂಡು, ರಸ್ತೆಯ ಮೇಲೆ ಶೇಖರಣೆಗೊಂಡಿತ್ತು. ಗ್ರಾಮಸ್ಥರು ಮಣ್ಣನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬರೆಕುಸಿತದಿಂದ ನಾಗೇಶ್ ಎಂಬವರ ಮನೆಗೆ ಹಾನಿಯಾಗುವ ಆತಂಕ ಎದುರಾಗಿದೆ.

ಬಿಳಿಕಿಕೊಪ್ಪ ಗ್ರಾಮದ ರಾಮ ಎಂಬವರÀ ಮನೆಯ ಹಿಂಭಾಗ ಬರೆಕುಸಿತಗೊಂಡಿದ್ದು, ಮನೆಯ ಒಂದು ಪಾಶ್ರ್ವಕ್ಕೆ ಹಾನಿಯಾಗಿದೆ. ಪಟ್ಟಣದ ವಲ್ಲಭಭಾಯಿ ಬಡಾವಣೆಯ ಬಿ.ಎನ್. ರಘು ಮನೆಯ ಗೋಡೆ ಬಿದ್ದುಹೋಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯ ಛಾವಣಿಗೆ ಹಾನಿಯಾಗಿರುವದರಿಂದ ಅಂದಾಜು 35 ಸಾವಿರ ನಷ್ಟ ಸಂಭವಿಸಿರುವದಾಗಿ ತಾಲೂಕು ಕಚೇರಿಗೆ ದೂರು ನೀಡಲಾಗಿದೆ. ಐಗೂರು ಗ್ರಾ.ಪಂ. ವ್ಯಾಪ್ತಿಯ ಕಾಜೂರು ಗ್ರಾಮದ ಲೀಲಾವತಿ ಎಂಬವರಿಗೆ ಸೇರಿದ ವಾಸದ ಮನೆ ಕುಸಿದುಬಿದ್ದಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

ಭಾರೀ ಗಾಳಿ ಮಳೆಗೆ ಮರಬಿದ್ದು ವಾಸದ ಮನೆಗೆ ಹಾನಿಯಾಗಿರುವ ಘಟನೆ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಕ್ಕರಳ್ಳಿಯಲ್ಲಿ ಸಂಭವಿಸಿದೆ.

ಕಿಕ್ಕರಳ್ಳಿ ಗ್ರಾಮದ ಎ.ಯು. ಕಾರ್ಯಪ್ಪ ಅವರ ಮನೆಯ ಮೇಲೆ ಬೈನೆ ಮರ ಬಿದ್ದಿದ್ದು, ಸಾವಿರಾರು ರೂ. ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಯಾವದೇ ಪ್ರಾಣಾಪಾಯ ಸಂಭವಿಸಿಲ್ಲ.

ಸೋಮವಾರಪೇಟೆ-ಕುಶಾಲನಗರ ಮುಖ್ಯರಸ್ತೆಯಲ್ಲಿ ಮರವೊಂದು ರಸ್ತೆಗಡ್ಡಲಾಗಿ ಬಿದ್ದ ಪರಿಣಾಮ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೆಕೊಪ್ಪದ ಬಳಿ ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಶನಿವಾರಸಂತೆ ವರದಿ : ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಮಳೆ ಮುಂದುವರಿದಿದ್ದು, ವಿಪರೀತ ಚಳಿಯು ಗೋಚರಿಸಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 42 ಇಂಚು ಮಳೆ ಶನಿವಾರಸಂತೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಕೂಡಿಗೆ : ಹುದುಗೂರು ಅಂಗನವಾಡಿ ಕೇಂದ್ರದ ಮೇಲೆ ಮರ ಬಿದ್ದು ಮೇಲ್ಚಾವಣಿ ಸೀಟುಗಳು ಹಾನಿಗೀಡಾಗಿವೆ.

ನಾಪೆÇೀಕ್ಲು ಮುಂದುವರಿದ ಮಳೆ

ನಾಪೆÇೀಕ್ಲು: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ನಾಪೆÇೀಕ್ಲು – ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿ ಕಾವೇರಿ ನದಿ ಪ್ರವಾಹ ಮುಂದುವರೆದಿದ್ದು, ರಸ್ತೆ ಮುಳುಗಡೆಗೊಂಡಿದೆ.

ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ರಸ್ತೆ, ನಾಲಡಿ ಗ್ರಾಮದ ಅಂಬಲ ಪೆÇಳೆ ಸೇತುವೆ, ಅಯ್ಯಂಗೇರಿ ಹೊಳೆ ಪ್ರವಾಹ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣ ರಸ್ತೆ ಜಲಾವೃತ್ತಗೊಂಡಿದೆ.

ನಾಪೆÇೀಕ್ಲು - ಪಾರಾಣೆ ರಸ್ತೆಯ ಕೈಕಾಡು ಹಾಗೂ ನಾಪೆÇೀಕ್ಲು – ಮಡಿಕೇರಿ ರಸ್ತೆಯ ಕೊಟ್ಟಮುಡಿ ಬಳಿ ಕಾವೇರಿ ನದಿ ಪ್ರವಾಹದಲ್ಲಿ ಏರಿಕೆಯಾಗುತ್ತಿದೆ. ಬಿರುಸಿನ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಗೋಚರಿಸಿದೆ.

ವೀರಾಜಪೇಟೆ : ಇಳಿಯದ ಪ್ರವಾಹ

ವೀರಾಜಪೇಟೆ: ವೀರಾಜಪೇಟೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಾಧಾರಣಾ ಮಳೆಯಾಗುತ್ತಿದ್ದು ಪ್ರವಾಹದಲ್ಲಿ ಯಾವದೇ ವ್ಯತ್ಯಾಸ ಕಂಡು ಬಂದಿಲ್ಲ. ಗುರುವಾರ ಬೆಳಿಗ್ಗೆ ಮಳೆ ಸ್ವಲ್ಪ ಕಡಿಮೆಯಾಗಿದ್ದರೂ ಅಪರಾಹ್ನದ ನಂತರ ಒಂದೆರಡು ಬಾರಿ ದೊಡ್ಡ ಮಳೆ ಬಿಟ್ಟರೆ ಉಳಿದಂತೆ ಸಾಧಾರಣಾ ಮಳೆ ಸುರಿದಿದೆ. ಕಳೆದ ರಾತ್ರಿಯಿಂದಲೂ ನಿರಂತರವಾಗಿ ಸಾಧಾರಣಾ ಮಳೆಯಾಗಿದ್ದು, ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯನ್ನು ಕಂಡಿದೆ.

ಅರಮೇರಿ, ಮ್ಯೆತಾಡಿ, ಬೇತ್ರಿ, ಹೆಮ್ಮಾಡು, ಬೆಳ್ಳುಮಾಡು, ನಾಲ್ಕೇರಿ, ಕದನೂರು ಗ್ರಾಮದ ಕೆಲವು ಭಾಗದ ಗದ್ದೆಗಳು ತೋಟಗಳ ಮುಳುಗಡೆ ಮುಂದುವರೆದಿದೆ. ಚ್ಯೆಯ್ಯಂಡಾಣೆ ಚೇಲಾವರ ಭಾಗಗಳಲ್ಲಿಯೂ ಅಧಿಕ ಮಳೆಯಾಗುತ್ತಿರುವದರಿಂದ ಬೇತ್ರಿ ಹೆಮ್ಮಾಡು ಸೇತುವೆಯ ಮೇಲೆ ಮೂರು ಅಡಿ ನೀರು ಹರಿಯುತ್ತಿದ್ದು ಸುತ್ತಮುತ್ತಲ ಗ್ರಾಮಗಳ ರಸ್ತೆ ಸಂಪರ್ಕ ಕಡಿತ ಗೊಂಡಿದೆ. ನಿನ್ನೆ ದಿನ ಸಂಜೆ ಇಲ್ಲಿನ ಗಾಂಧಿನಗರದಲ್ಲಿ ವಿದ್ಯುತ್ ಕಂಬದ ತಂತಿ ಮೇಲೆ ಮರ ಬಿದ್ದು ಕೆಲವು ಗಂಟೆಗಳವರಗೆ ಸಂಪರ್ಕ ಕಡಿತಗೊಂಡಿತ್ತು.

ಸಿದ್ದಾಪುರ: ಇಲ್ಲಿನ ಗುಹ್ಯ ಗ್ರಾಮದ ಗೂಡುಗದ್ದೆ ನಿವಾಸಿ ಭಾಷಾ ಎಂಬವರ ಮನೆ ಕುಸಿದು ನಷ್ಟ ಸಂಭವಿಸಿದೆ. ಈ ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಗ್ರಾ.ಪಂ. ಸದಸ್ಯ ರೆಜಿತ್ ಕುಮಾರ್ ಹಾಗೂ ಪಂಚಾಯಿತಿ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿದರು.

ಗ್ರಾಮಸ್ಥರ ಸಂಚಾರಕ್ಕೆ ತೊಂದರೆ

ಕಡಂಗ, ಎಡಪಾಲ, ಕೋಕೇರಿ, ಪಾರಾಣೆ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯು ಕೆಸರು ಗದ್ದೆಯಾಗಿದ್ದು ವಾಹನ ಸಂಚಾರಕ್ಕೆ ದುಸ್ಥಿತಿ ಎದುರಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೆಸರಿನಲ್ಲಿಯೇ ನಡೆದಾಡಿಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರಾದ ಬಲ್ಯಮೀದೆರಿರ ಸುಬ್ರಮಣಿ ಆರೋಪಿಸಿದ್ದಾರೆ.

ಕಡಂಗದಿಂದ ಎಡಪಾಲ ಮಾರ್ಗವಾಗಿ ಪಾರಾಣೆ ಗ್ರಾಮವನ್ನು ಸಂಪರ್ಕಿಸುವ 7 ಕಿ. ಮೀ. ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಹಾಲಿ ಇದ್ದ ಡಾಂಬರು ರಸ್ತೆಯನ್ನು ಜೆಸಿಬಿ ಮೂಲಕ ಕಿತ್ತು ಹಾಕಿ ರಸ್ತೆಯ ಎರಡು ಕಡೆಗಳಲ್ಲಿ ಮಣ್ಣು ತೆಗೆದು ಅಗಲೀಕರಣಕ್ಕೆ ಮುಂದಾಗಿದ್ದಾರೆ. ಸರ್ಕಾರದ ವಿಶೇಷ ಅನುದಾನದಲ್ಲಿ ಮೂರು ಕೋಟಿ ವೆಚ್ಚದಲ್ಲಿ ಈ ಹಿಂದೆ ಭೂಮಿ ಪೂಜೆ ನೆರವೇರಿಸಿ ಕಾವiಗಾರಿಗೆ ಚಾಲನೆ ನೀಡಲಾಗಿದೆ. ನಂತರ ರಸ್ತೆಯಲ್ಲಿ ಒಂದು ಹಂತದ ಮಣ್ಣಿನ ಕಾಮಗಾರಿಯನ್ನು ಪ್ರಾರಂಭಿಸಿ ಏರುಪೇರು ಇದ್ದ ಕಡೆಗಳಲ್ಲಿ ಗುಂಡಿಗಳನ್ನು ಮುಚ್ಚಿ ಹಾಗೆಯೇ ಬಿಡಲಾಗಿದೆ.

ಕಾರಣ ರಸ್ತೆಯ ಗುಂಡಿಗಳು ಕೆಸರುಮಯವಾಗಿ ಯಾವದೇ ವಾಹನಗಳು ಸಂಚರಿಸದ ಪರಿಸ್ಥಿತಿ ಎದುರಾಗಿದೆ. ಈ ರಸ್ತೆಯಲ್ಲಿ ಓಡಾಡುವ ವಾಹನಗಳೆಲ್ಲ ಕೆಸರಿನಲ್ಲಿ ಹೂತುಕೊಂಡು ಮೇಲೆಳಲು ಹರಸಾಹಸ ಪಡುತ್ತಿವೆ. ಈ ರಸ್ತೆಗಾಗಿ ರಾಜ್ಯ ರಸ್ತೆ ಸಾರಿಗೆ ಬಸ್ಸು ಸೇರಿದಂತೆ ಎರಡು ಖಾಸಗಿ ಬಸ್ಸುಗಳು ಸಂಚರಿಸುತ್ತಿದ್ದವು. ರಸ್ತೆಯ ದುರವಸ್ಥೆ ಕಂಡು ಯಾವದೆ ಬಸ್ಸು ಸಂಚರಿಸುತ್ತಿಲ್ಲ. ಖಾಸಗಿ ವಾಹನಗಳು ಹೊರತು ಪಡಿಸಿ ಯಾವದೇ ಇತರೆ ವಾಹನಗಳು ಗ್ರಾಮದೊಳಗೆ ಸಂಚರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿಕೊಂಡಿದ್ದಾರೆ.

ಕಾನೂರು: ಮನೆ ಜಖಂ

ಕಾನೂರು ನಿಡುಗಂಬದ ಮರಿಯಮ್ಮನ ಕಟ್ಟೆ ಕಾಲೋನಿಯ ನಿವಾಸಿ ಪೊನ್ನಮ್ಮ ಎಂಬವರಿಗೆ ಸೇರಿದ ಮನೆ ಮಳೆಯಿಂದಾಗಿ ಪೂರ್ಣವಾಗಿ ಕುಸಿದಿದೆ. ಈ ಕುರಿತು ಅವರು ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದು, ಪರಿಹಾರಕ್ಕೆ ಕೋರಿದ್ದಾರೆ.