ಮಡಿಕೇರಿ, ಜು.13 :ನಗರಸಭೆ ವ್ಯಾಪ್ತಿಗೆ ಒಳಪಡುವ ನಗರದ ಮೂರು ಸರಕಾರಿ ಶಾಲೆಗಳನ್ನು ನಗರಸಭೆ ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ಗೌರವ ಶಿಕ್ಷಕರುಗಳಿಗೆ ವೇತನ ಮತ್ತು ಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸದಿದ್ದಲ್ಲಿ ಸಂಘಟನೆ ವತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಶಿಕ್ಷಣವೇ ದೇಶದ ಶಕ್ತಿ ಎಂದು ರಾಜಕಾರಣಿಗಳು ಭಾಷಣವನ್ನು ಬಿಗಿಯುತ್ತಾರಷ್ಟೆ. ಆದರೆ ನಗರಸಭಾ ಶಾಲೆಗಳ ಸ್ಥಿತಿಗತಿಯನ್ನು ಗಮನಿಸಿದರೆ ಯಾರಿಗಾದರೂ ಕರುಣೆ ಬಾರದೆ ಇರದು ಎಂದು ಅಭಿಪ್ರಾಯಪಟ್ಟಿದ್ದಾರೆ. ನಗರಸಭೆಯ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರುಗಳಿಗೆ ಬಡವರ ಮಕ್ಕಳೇ ವ್ಯಾಸಂಗ ಮಾಡುವ ಶಾಲೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಾಗಿದೆ. ಕೇವಲ ಸಾಮಾನ್ಯ ಸಭೆಗಳಿದ್ದಾಗ ಮಾತ್ರ ಮೊಸಳೆ ಕಣ್ಣೀರಿಡುವ ಸದಸ್ಯರುಗಳು ಕಳೆದ ನಾಲ್ಕು ವರ್ಷಗಳಿಂದ ಈ ಮೂರು ಶಾಲೆಗಳಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸುವ ಮತ್ತು ಇಲ್ಲಿನ ಶಿಕ್ಷಕರುಗಳಿಗೆ ಗೌರವ ಧನವನ್ನು ನೀಡುವ ಯಾವದೇ ಕಾಳಜಿಯನ್ನು ತೋರಿಲ್ಲ ಎಂದು ಆರೋಪಿಸಿದ್ದಾರೆ.

ಆದರೆ ಸದಸ್ಯ ಕೆ.ಜಿ.ಪೀಟರ್ ಅವರು ಮಾತ್ರ ಆಡಳಿತ ವ್ಯವಸ್ಥೆಯಿಂದ ಬೇಸತ್ತು ಬಡ ಮಕ್ಕಳ ಶೈಕ್ಷಣಿಕ ಬದುಕಿನ ಹಿತದೃಷ್ಟಿಯಿಂದ ತಾವು ದುಡಿದ ಆದಾಯದಲ್ಲಿ ಸುಮಾರು 12 ಸಾವಿರ ರೂ. ಗಳನ್ನು ಪ್ರತಿ ತಿಂಗಳು ಶಿಕ್ಷಕರ ವೇತನಕ್ಕಾಗಿ ನೀಡುತ್ತಿದ್ದಾರೆ. ಕೂಲಿ ಕಾರ್ಮಿಕರ ಮತ್ತು ಕಡುಬಡವರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ನಗರಸಭೆಯ ಮೂರೂ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಒಂದಷ್ಟು ವಿದ್ಯೆ ಸಿಗಬೇಕೆಂದರೆ ಬೆರಳೆಣಿಕೆಯಷ್ಟಾದರು ಶಿಕ್ಷಕರ ಅಗತ್ಯವಿದೆ, ಇರುವ ಶಿಕ್ಷಕರು ವೇತನವಿಲ್ಲದೆ ದುಡಿಯುತ್ತಿದ್ದಾರೆ.

ಚುನಾಯಿತ ಜನಪ್ರತಿನಿಧಿಗಳು ಬಡವರ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿರುವ ನಗರಸಭಾ ಶಾಲೆಗಳ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಬಹುದಾಗಿತ್ತು. ಆದರೆ ಈ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿದೆ, ಇಲ್ಲಿನ ಶಿಕ್ಷಕರುಗಳನ್ನು ವೇತನ ವಂಚಿತರನ್ನಾಗಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸಿ ಕೈತೊಳೆದುಕೊಳ್ಳುತ್ತಿರುವ ನಗರಸಭೆ ಇಲ್ಲಿನ ಮೂಲ ಕೊರತೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ದಿವಾಕರ್ ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿಗಳು ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಶಾಲೆಗಳಿಗೆ ಖುದ್ದು ಭೇಟಿ ನೀಡುವಂತೆ ಮನವಿ ಮಾಡಲಾಗುವದು. ಆಗಸ್ಟ್ 15 ರೊಳಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನದಿಂದ ನಗರಸಭೆ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸುವದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.