ಮಡಿಕೇರಿ, ಜು. 14: ತೆರೆಮರೆಯಲ್ಲಿ ನಗರಸಭೆಯ ಕಾಮಗಾರಿ ಸ್ಥಾಯಿ ಸಮಿತಿಗಾಗಿ ತೀವ್ರ ಕಸರತ್ತು ನಡೆಸಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮುಖಭಂಗ ಅನುಭವಿಸುವದರೊಂದಿಗೆ ಬಿಜೆಪಿ ಸದಸ್ಯ ಪಿ.ಟಿ. ಉಣ್ಣಿಕೃಷ್ಣನ್ ಮೂರನೇ ಬಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಕಳೆದ ಜೂನ್ 28ರಂದು ನಡೆದ ಸ್ಥಾಯಿ ಸಮಿತಿ ಸದಸ್ಯರುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಇನ್ನೋರ್ವ ಸದಸ್ಯರಾಗಿದ್ದ ಕೆ.ಜೆ. ಪೀಟರ್ ಈ ಸ್ಥಾನಕ್ಕೆ ಸ್ಪರ್ಧಿಸಿ ಪರಾಜಯಗೊಂಡರು. ಒಟ್ಟು ಹತ್ತು ಮಂದಿಯ ಪೈಕಿ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ವೀಣಾಕ್ಷಿ, ಶ್ರೀಮತಿ ಬಂಗೇರ, ಸಂಗೀತಾ ಪ್ರಸನ್ನ ಉನ್ನಿಕೃಷ್ಣ ಅವರನ್ನು ಬೆಂಬಲಿಸುವದರೊಂದಿಗೆ; ಅವರು ಆರು ಮತಗಳನ್ನು ಗಳಿಸಿ ಜಯ ಸಾಧಿಸಿದರು.

ಕಾಂಗ್ರೆಸ್ ಬಳಗದ ಬೆಂಬಲದಿಂದ ಸ್ಪರ್ಧೆಯಲ್ಲಿದ್ದ ಎಸ್.ಡಿ.ಪಿ.ಐ. ಸದಸ್ಯ ಕೆ.ಜೆ. ಪೀಟರ್ ಕೇವಲ ನಾಲ್ಕು ಮತ ಪಡೆದು ಸೋಲೊಪ್ಪಿಕೊಂಡರು. ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು, ಉಣ್ಣಿಕೃಷ್ಣನ್ ಅವರ ಹೆಸರನ್ನು ಬಿಜೆಪಿಯ ಪಿ.ಡಿ. ಪೊನ್ನಪ್ಪ ಸೂಚಿಸಿದರೆ, ಜೆ.ಡಿ.ಎಸ್.ನ ಸಂಗೀತಾ ಪ್ರಸನ್ನ ಅನುಮೋದಿಸಿದರು. ಇತ್ತ ಪೀಟರ್ ಹೆಸರನ್ನು ಅಮೀನ್ ಮೊಯ್ಸಿನ್ ಸೂಚಿಸಿ, ಮನ್ಸೂರ್ ಅನುಮೋದಿಸಿದರು.

‘ಕೈ’ ಎತ್ತಿದರು: ಅವಿರೋಧ ಆಯ್ಕೆಗೆ ಇಲ್ಲಿ ಅವಕಾಶವಿಲ್ಲದ್ದರಿಂದ ಮೊದಲಿಗೆ ಪೀಟರ್ ಪರ ಕೈ ಎತ್ತಿಸಲಾಯಿತು. ಎಸ್‍ಡಿಪಿಐನ ಮೂವರೊಂದಿಗೆ ಕಾಂಗ್ರೆಸ್ ಸದಸ್ಯೆ ತಜುಸ್ಸುಂ ಮಾತ್ರ ಪೀಟರ್ ಅವರನ್ನು ಬೆಂಬಲಿಸಿದರು.

ಇತ್ತ ಉಣ್ಣಿಕೃಷ್ಣನ್ ಪರ ಬಿಜೆಪಿಯ ಮೂವರೊಂದಿಗೆ ಓರ್ವ ಜೆಡಿಎಸ್ ಹಾಗೂ ಕಾಂಗ್ರೆಸ್ ಉಚ್ಛಾಟಿತರಿಬ್ಬರು ಕೈ ಎತ್ತುವದರೊಂದಿಗೆ, ಆಡಳಿತಾರೂಢ ಕಾಂಗ್ರೆಸ್ ತೀವ್ರ ಮುಜುಗರ ಅನುಭವಿಸುವಂತಾಯಿತು.

ಬೆಂಬಲ ಕೋರಿದ ಅಧ್ಯಕ್ಷರು: ಕಾಮಗಾರಿ ಸ್ಥಾಯಿ ಸಮಿತಿಗೆ ಈ ಮೊದಲು ಎರಡು ಬಾರಿ ಅಧ್ಯಕ್ಷನಾಗಿ ಅನುಭವವಿರುವ ತಾನು, ಮೂರನೇ ಬಾರಿಗೆ ಇಂದು ಆರಿಸಲ್ಪಟ್ಟಿದ್ದು, ನಗರದ ಹದಗೆಟ್ಟಿರುವ ರಸ್ತೆಗಳ ಸಹಿತ ಜನಪರ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು. ಹೀಗೆ ತನ್ನ ಅನುಭವ ಹಂಚಿಕೊಂಡ ಉಣ್ಣಿಕೃಷ್ಣ; ತನಗೆ ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಆಯುಕ್ತರು ಸೇರಿದಂತೆ ಎಲ್ಲಾ ಸದಸ್ಯರು ಒಳ್ಳೆಯ ಕೆಲಸ ಮಾಡಲು ಬೆಂಬಲಿಸುವಂತೆ ಮಾರ್ನುಡಿದರು.

ಪೇಚು ತಂದ ಮಾತು: ಪರಾಜಿತ ಬಳಗದಿಂದ ಸದಸ್ಯ ಅಮೀನ್ ಮೊಯ್ಸಿನ್, ‘ಮಹಿಳೆಯರು ನಿಯತ್ತು ಬಿಟ್ಟು ಮೋಸ ಮಾಡಿದ್ದಾರೆ’ ಎಂದು ಆರಂಭಿಸಿದ ಮಾತು ತೀವ್ರ ಪೇಚಿಗೆ ಈಡುಮಾಡಿ ಮಹಿಳಾ ಸದಸ್ಯರ ಸಹಿತ ಇತರರು ಕೆರಳುವಂತೆ ಮಾಡಿತು.

ಬಿಜೆಪಿ ಬೆಂಬಲಿಸಿದ್ದ ಸಂಗೀತಾ, ವೀಣಾಕ್ಷಿ, ಶ್ರೀಮತಿ ಬಂಗೇರ ಹಾಗೂ ಸವಿತಾ ರಾಜೇಶ್ ಅಮೀನ್ ವಿರುದ್ಧ ಮುಗಿಬಿದ್ದರೆ, ಪ್ರತಿಯಾಗಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸಹಿತ ಇತರರು ಅಮೀನ್ ಬೆಂಬಲಕ್ಕೆ ನಿಲ್ಲುವದರೊಂದಿಗೆ ಇಡೀ ಸಭೆ ಗೊಂದಲದ ಗೂಡಾಯಿತು.

ಪರಸ್ಪರ ವೈಯಕ್ತಿಕ ಟೀಕೆ, ಹಣದ ಆಮಿಷ, ಮನೆಯವರನ್ನು ಹದ್ದುಬಸ್ತಿನಲ್ಲಿ ಇರಿಸಿಕೊಳ್ಳಬೇಕು ಎಂಬಿತ್ಯಾದಿ ಒಗಟಿನ ಮಾತುಗಳು ತೇಲಿಬಂದವು. ಬಿಜೆಪಿ ಬೆಂಬಲಿತರ ಮೇಲೆ ಆಮಿಷದ ಆರೋಪ ಕೇಳಿ ಬಂದಾಗ; ಕೆರಳಿದ ವೀಣಾಕ್ಷಿ ‘ನಿಮ್ಮ ಬ್ಲಾಕ್ ಮೇಲ್’ ತಂತ್ರ ನಡೆಯುವದಿಲ್ಲ; ಎಚ್ಚರದಿಂದ ಮಾತನಾಡಿ ಎಂದು ಏರುಧ್ವನಿಯಲ್ಲಿ ತಿರುಗೇಟು ನೀಡಿದರು.

ಮಧ್ಯ ಪ್ರವೇಶಿಸಿದ ಪಿ.ಡಿ. ಪೊನ್ನಪ್ಪ ರಾಜಕಾರಣದಲ್ಲಿ ತಂತ್ರ- ಪ್ರತಿ ತಂತ್ರಗಳು ಸಹಜವಾಗಿದ್ದು, ಕೆಲಸ ಮಾಡುವ ಸಾಮಥ್ರ್ಯವಿರುವ ಉಣ್ಣಿಕೃಷ್ಣ ಅವರನ್ನು ಮಹಿಳಾ ಸದಸ್ಯರು ಬೆಂಬಲಿಸಿದ್ದಾರೆ ಎಂದು ಸಮರ್ಥಿಸಿಕೊಂಡರು. ಎಸ್.ಡಿ.ಪಿ.ಐ ನಿಲುವು ಸಮರ್ಥಿಸಲು ಮುಂದಾದ ಕಾವೇರಮ್ಮ ವಿರುದ್ಧ ಬಿಜೆಪಿ ಬಳಗ ಹರಿಹಾಯತೊಡಗಿತು. ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಸಹಿತ ಎಲ್ಲರು ಏರುಧ್ವನಿಯಲ್ಲಿ ಟೀಕಾ ಪ್ರಹಾರ ನಡೆಸಿದರು.

ಈ ಹಂತದಲ್ಲಿ ಏನು ನಡೆಯುತ್ತಿದೆ ಎಂದು ಇಂದಿನ ಕೇವಲ 12 ಮಂದಿಯ ಸಭೆಯಲ್ಲಿ ಅರ್ಥವಾಗದ ಸ್ಥಿತಿ ಎದುರಾಯಿತು. ಈ ವೇಳೆ ಶಾಂತಿಗೆ ವಿನಂತಿಸಿದ ಆಯುಕ್ತೆ ಶುಭಾ ನೂತನ ಅಧ್ಯಕ್ಷರಿಗೆ ಅಭಿನಂದಿಸಿ, ಎಲ್ಲರಿಗೂ ವಂದಿಸಿ ಸಭೆ ಬರಕಾಸ್ತುಗೊಳಿಸಿ ತಮ್ಮ ಕೊಠಡಿಗೆ ನಿರ್ಗಮಿಸಿದರು. ಬಿಜೆಪಿ ಬಳಗ ಸೇರಿದಂತೆ ಮಲೆಯಾಳಂ ಸಮಾಜ ಪ್ರಮುಖರ ಸಹಿತ ಹಾರ ತುರಾಯಿಗಳೊಂದಿಗೆ ಅನೇಕರು ಆಗಮಿಸಿ ಉಣ್ಣಿಕೃಷ್ಣನ್ ಅವರಿಗೆ ಶುಭ ಕೋರಿದರೆ, ಇತರರು ತಮ್ಮ ತಮ್ಮ ಹಾದಿ ಹಿಡಿದ ದೃಶ್ಯ ಎದುರಾಯಿತು.