ಸೋಮವಾರಪೇಟೆ, ಜು. 13: ತಾಲೂಕಿನ ಕೂತಿ ಗ್ರಾಮದ ಅಪ್ಪಚ್ಚು ಮತ್ತು ಇಂದಿರಾ ದಂಪತಿಗಳ ಪುತ್ರ ರತನ್, ಕಸ್ಟಮ್ಸ್ ತಂಡದ ಗೌರವ ಆಟಗಾರನಾಗಿ ಹತ್ತು ಹಲವು ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಪಾಲ್ಗೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ಇದೀಗ ಪ್ರತಿಷ್ಠಿತ ವಿಜಯಾ ಬ್ಯಾಂಕ್ ಕಬಡ್ಡಿ ತಂಡಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮೆರೆದಿದ್ದಾರೆ.
ಇದರೊಂದಿಗೆ ಕಬಡ್ಡಿ ಕ್ರೀಡೆಯಲ್ಲಿ ಸಾಧನೆ ತೋರಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಕೊಡಗಿನ ಪ್ರಥಮ ಆಟಗಾರ ಎಂಬ ಹೆಗ್ಗಳಿಕೆಗೂ ರತನ್ ಪಾತ್ರರಾಗಿದ್ದಾರೆ.
ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಜಿಲ್ಲೆಯ ಉದಯೋನ್ಮುಖ ಕಬಡ್ಡಿ ಆಟಗಾರ ಕೆ.ಎ.ರತನ್, ಇದೀಗ ರಾಜ್ಯದ ಪ್ರತಿಷ್ಠಿತ ಕಬಡ್ಡಿ ತಂಡಗಳಲ್ಲೊಂದಾದ ವಿಜಯಾ ಬ್ಯಾಂಕ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಬಡ್ಡಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ರಾಜ್ಯದ ಹೆಮ್ಮೆಯ ಕ್ರೀಡಾಪಟು ಸುಖೇಶ್ ಹೆಗ್ಡೆ ಹಾಗೂ ಪ್ರೊ.ಕಬಡ್ಡಿಯಲ್ಲಿ ಆಡುತ್ತಿರುವ ರಾಜ್ಯದ ಆಟಗಾರರಾದ ಪ್ರಶಾಂತ್ ರೈ, ಸಚಿನ್ ಸುವರ್ಣ ಅವರನ್ನೊಳಗೊಂಡ ಪ್ರತಿಷ್ಠಿತ ವಿಜಯಾ ಬ್ಯಾಂಕ್ ತಂಡಕ್ಕೆ ಸೇರ್ಪಡೆಯಾಗುವ ಮೂಲಕ ಜಿಲ್ಲೆಯ ಇತಿಹಾಸದಲ್ಲಿ ಕಬಡ್ಡಿ ಆಟದಿಂದ ಉತ್ತಮ ಭವಿಷ್ಯ ರೂಪಿಸಿಕೊಂಡ ಪ್ರಥಮ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೋಮವಾರಪೇಟೆಯ ಜ್ಞಾನವಿಕಾಸ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುವ ಸಂದರ್ಭ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟದ ಮೇಲೆ ಆಸಕ್ತಿ ಹುಟ್ಟಿತು. ನಂತರ ಬಿಟಿಸಿಜಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಪದವಿ ಶಿಕ್ಷಣವನ್ನು ಉಜಿರೆಯಲ್ಲಿ ಪಡೆಯುವ ಸಂದರ್ಭ ಕಾಲೇಜಿನ ಕಬಡ್ಡಿ ಕೋಚ್ ಕೃಷ್ಣಾನಂದ್ ಅವರ ಮಾರ್ಗದರ್ಶನ ಹಾಗೂ ಹಿರಿಯ ಕಬಡ್ಡಿ ಆಟಗಾರರಾದ ಕರ್ಕಳ್ಳಿ ಸತೀಶ್, ಮಂಜೂರು ತಮ್ಮಣ್ಣಿ ಹಾಗೂ ಕೊಡಗು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನ ಅಧ್ಯಕ್ಷ ಉತ್ತಪ್ಪ ಅವರುಗಳ ನಿರಂತರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಈ ಹಂತಕ್ಕೆ ತಲುಪಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಶ್ರಮದಿಂದ ಸಾಧನೆ ಮಾಡಿ ದೇಶದ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುವದಾಗಿ ರತನ್ ಭರವಸೆ ವ್ಯಕ್ತಪಡಿಸಿದ್ದಾರೆ.
ಬಾಲ್ಯದಿಂದಲೇ ಉತ್ತಮ ಕ್ರೀಡಾಪಟುವಾಗುವ ಲಕ್ಷಣವನ್ನು ತೋರುತ್ತಿದ್ದ ರತನ್, ಕಠಿಣ ಪರಿಶ್ರಮದಿಂದ ಉತ್ತಮ ಭವಿಷ್ಯ ಕಂಡುಕೊಂಡಿದ್ದಾನೆ. ಮುಂದಿನ ದಿನಗಳಲ್ಲಿ ದೇಶವನ್ನು ಪ್ರತಿನಿಧಿಸಿ ಕೊಡಗಿನ ಕೀರ್ತಿ ಬೆಳಗುವಂತೆ ಮಾಡಲಿ ಎಂದು ಶಾಲಾ ದಿನಗಳಲ್ಲಿ ರತನ್ ಅವರಿಗೆ ತರಬೇತಿ ನೀಡಿದ ಹಿರಿಯ ಕಬಡ್ಡಿ ಆಟಗಾರ ಹಾಗೂ ದೈಹಿಕ ಶಿಕ್ಷಕ ಕರ್ಕಳ್ಳಿ ಸತೀಶ್ ಆಶಿಸಿದ್ದಾರೆ.
2018ರ ಫೆಬ್ರವರಿಯಲ್ಲಿ ಆಂಧ್ರಪ್ರದೇಶದಲ್ಲಿ ಜರುಗಿದ ರಾಷ್ಟ್ರೀಯ ಬೀಚ್ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದ ಇವರು, ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಹಲವಾರು ಪಂದ್ಯಾವಳಿಯಲ್ಲಿ ಕಸ್ಟಮ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರೊಂದಿಗೆ ಕೊಡಗು ಜಿಲ್ಲಾ ತಂಡದ ಪ್ರತಿನಿಧಿಯಾಗಿ ಹಲವಾರು ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.