ಸೋಮವಾರಪೇಟೆ, ಜು. 14: ಜಿಲ್ಲೆ ಸೇರಿದಂತೆ ಸೋಮವಾರಪೇಟೆಗೆ ಮಳೆಗಾಲ ಹೊಸದೇನಲ್ಲ, ಆದರೆ ಪ್ರಸಕ್ತ ಭಾರೀ ಗಾಳಿ ಸಹಿತ ಸುರಿಯುತ್ತಿರುವ ಮಳೆ 2 ದಶಕಗಳ ಹಿಂದಿನ ನೆನಪನ್ನು ಕಣ್ಮುಂದೆ ತರುತ್ತಿದೆ. ಕಳೆದ ಒಂದು ತಿಂಗಳಿನಿಂದ ‘ಮಲೆ’ನಾಡು-‘ಮಳೆ’ನಾಡಿನಂತಾಗಿದೆ. ಹಗಲೂ ರಾತ್ರಿ ಸುರಿಯುತ್ತಿರುವ ವರ್ಷಾಧಾರೆಗೆ ಜನತೆ ತತ್ತರಿಸಿದ್ದು, ಜನ ಜೀವನವಂತೂ ಅಸ್ತವ್ಯಸ್ಥ ಗೊಂಡಿದೆ.ಪುಷ್ಪಗಿರಿ ತಪ್ಪಲಿನ ಮಲೆನಾಡು ಸೋಮವಾರಪೇಟೆ ಅಕ್ಷರಶಃ ನಲುಗಿದೆ. ಈ ಬಾರಿಯ ಮುಂಗಾರು ಪ್ರಾರಂಭದಿಂದ ಇಲ್ಲಿಯವರೆಗೂ ಬಿಡುವು ನೀಡದೇ ಇರುವದರಿಂದ ಹಲವೆಡೆ ಸಸಿಮಡಿ ತಯಾರಿ, ಗದ್ದೆ ಉಳುಮೆ ಕಾರ್ಯವೂ ಪ್ರಾರಂಭವಾಗಿಲ್ಲ.ಗದ್ದೆಗೆ ನುಗ್ಗಿದ ಹೊಳೆ ನೀರು: ಶಾಂತಳ್ಳಿ ಹೋಬಳಿಯ ಹರಗ, ತೋಳೂರುಶೆಟ್ಟಳ್ಳಿ, ಶಾಂತಳ್ಳಿ ಗ್ರಾಮಗಳಲ್ಲಿ ಗದ್ದೆಯಲ್ಲೇ ಹೊಳೆ ನೀರು ಶೇಖರಣೆಗೊಂಡಿದೆ.ಪುಷ್ಪಗಿರಿ ಬೆಟ್ಟತಪ್ಪಲಿಗೆ ಒತ್ತಿ ಕೊಂಡಿರುವ ಶಾಂತಳ್ಳಿ ಹೋಬಳಿಗೆ ಅತೀ ಹೆಚ್ಚು ಮಳೆಯಾಗುತ್ತಿದೆ.
ಶಾಂತಳ್ಳಿಯಲ್ಲಿ ಕಳೆದ 10 ದಿನದಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಅಲ್ಲಲ್ಲಿ ಬರೆಕುಸಿತ ಸಂಭವಿಸಿದೆ. ಮನೆಯ ಮುಂಭಾಗವೂ ಜಲದ ಒರತೆ ಕಂಡುಬರುತ್ತಿದೆ. ಕಾಫಿ ಫಸಲು ಉದುರಲು ಪ್ರಾರಂಭವಾಗಿದೆ. ಕರಿಮೆಣಸಿಗೂ ಮಳೆಯ ಕಾಟ ತಟ್ಟಿದೆ. ಮುಂದಿನ ಐದಾರು ದಿನಗಳು ಹೀಗೇ ಮಳೆ ಮುಂದುವರೆದರೆ ಶೇ.50ರಷ್ಟು ಕಾಫಿ ಫಸಲು ನಷ್ಟವಾಗಲಿದೆ ಎಂದು ಶಾಂತಳ್ಳಿ ಗ್ರಾಮದ ಸುಂದರ್ ತಿಳಿಸಿದ್ದಾರೆ.
115 ಇಂಚು ಮಳೆ : ಕಳೆದ 5 ದಿನಗಳಿಂದ ಸರಾಸರಿ ದಿನವೊಂದಕ್ಕೆ 7 ಇಂಚಿನಷ್ಟು ಮಳೆ ಸುರಿಯುತ್ತಿದೆ. ಇದುವರೆಗೆ ಶಾಂತಳ್ಳಿಗೆ 115 ಇಂಚು ಮಳೆಯಾಗಿದೆ. ಗದ್ದೆಗಳಲ್ಲಿ ಹೊಳೆ ನೀರು ನುಗ್ಗಿದ್ದು, ಅಗೆ ಕೊಳೆಯುವ ಭೀತಿ ಎದುರಾಗಿದೆ.
ಹರಗಕ್ಕೆ 90 ಇಂಚು ಮಳೆ : ಇದೇ ಹೋಬಳಿಯ ಹರಗ ವ್ಯಾಪ್ತಿಯಲ್ಲಿ ಇದುವರೆಗೆ 90 ಇಂಚು ಮಳೆಯಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ತ್ರಿಶೂಲ್ ಮಾಹಿತಿ ನೀಡಿದ್ದಾರೆ.
ಹೆಗ್ಗಡಮನೆಗೆ 135 ಇಂಚು : ತಾಲೂಕಿನ ಪುಷ್ಪಗಿರಿ ಬೆಟ್ಟತಟದಲ್ಲಿರುವ ಹೆಗ್ಗಡಮನೆ ಭಾಗಕ್ಕೆ 135ಕ್ಕೂ ಅಧಿಕ ಇಂಚು ಮಳೆಯಾಗಿದೆ. ಮಲ್ಲಿಕಾರ್ಜುನ ದೇವಾಲಯಕ್ಕೆ ತೆರಳುವ ರಸ್ತೆ ದುಸ್ಥಿತಿಗೆ ತಲಪಿದೆ. ಇದೇ ವ್ಯಾಪ್ತಿಯಲ್ಲಿ ಬರುವ, ಕೊತ್ನಳ್ಳಿ, ಕುಡಿಗಾಣ, ತಡ್ಡಿಕೊಪ್ಪ, ಕುಮಾರಳ್ಳಿ, ಮಲ್ಲಳ್ಳಿ ಗ್ರಾಮಗಳು ಅಕ್ಷರಶಃ ಮಳೆಯಲ್ಲಿ ಮುಚ್ಚಿಹೋಗಿವೆ. ಬೆಟ್ಟದಳ್ಳಿಗೆ 116 ಇಂಚು ಮಳೆಯಾಗಿದೆ.
ತೋಳೂರುಶೆಟ್ಟಳ್ಳಿಗೆ 77 ಇಂಚು : ತೋಳೂರು ಶೆಟ್ಟಳ್ಳಿಗೆ ಇದುವರೆಗೆ 77 ಇಂಚು ಮಳೆಯಾಗಿದೆ. ತೋಟ, ಗದ್ದೆ ಕೆಲಸ
(ಮೊದಲ ಪುಟದಿಂದ) ಸಂಪೂರ್ಣ ಸ್ಥಗಿತಗೊಂಡಿದೆ. ಗದ್ದೆಯತ್ತ ಮುಖ ಮಾಡಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. 3 ದಿನಗಳಿಂದ ವಿದ್ಯುತ್ ಇಲ್ಲದಾಗಿದೆ ಎಂದು ಗ್ರಾಮದ ಕೃಷಿಕ ಕೆ.ಕೆ. ಸುಧಾಕರ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಕೂತಿ ವ್ಯಾಪ್ತಿಗೆ 78 ಇಂಚು ಮಳೆಯಾಗಿದ್ದು, ತೋಳೂರುಶೆಟ್ಟಳ್ಳಿ ಭಾಗದಲ್ಲಿ ಮನೆ ಹಾಗೂ ರಸ್ತೆಗಳಿಗೆ ಹಾನಿಯಾಗಿದೆ ಎಂದು ಗ್ರಾ.ಪಂ. ಸದಸ್ಯ ರಜಿತ್ ತಿಳಿಸಿದ್ದಾರೆ.
ಗಣಗೂರು ಕೆರೆಗೆ ಬೆಟ್ಟದ ನೀರು : ಕಳೆದ 10 ವರ್ಷಗಳ ಹಿಂದೆ ಬತ್ತಿಹೋಗಿ ಹನಿ ನೀರೂ ಇಲ್ಲವಾಗಿದ್ದ ಗಣಗೂರು ಗ್ರಾಮದ ಕೆರೆಗೆ ಈ ವರ್ಷ ಬೆಟ್ಟದಿಂದ ನೀರು ಹರಿಸಲಾಗುತ್ತಿದೆ. ಗಣಗೂರಿಗೆ 45 ಇಂಚು ಮಳೆಯಾಗಿದ್ದು, ಬೆಟ್ಟದಿಂದ ಕೆಳಭಾಗಕ್ಕೆ ಹರಿಯುವ ನೀರನ್ನು (ಗೇಣಿ ನೀರು) ಗ್ರಾ.ಪಂ. ಮಾಜೀ ಅಧ್ಯಕ್ಷ ಚಂದ್ರಶೇಖರ್ ಅವರು ಮುತುವರ್ಜಿ ವಹಿಸಿ ಕೆರೆಗೆ ತಿರುಗಿಸಿದ್ದಾರೆ.
ಗೌಡಳ್ಳಿ : ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 65 ಇಂಚು ಮಳೆಯಾಗಿದೆ. ಈ ಭಾಗಕ್ಕೆ ಉತ್ತಮ ಮಳೆ ಇದಾಗಿರುವದರಿಂದ ಕೃಷಿ ಕಾರ್ಯ ಪ್ರಗತಿಯಲ್ಲಿದೆ.
ಬಾಣಾವರದಲ್ಲಿ ಜೋಳಕ್ಕೆ ಆತಂಕ : ಬಾಣಾವರ ವ್ಯಾಪ್ತಿಯಲ್ಲಿ ಜೋಳ ಕೃಷಿ ಪ್ರಗತಿಯಲ್ಲಿದ್ದು, ಈಗಾಗಲೇ ಸಸಿಗಳನ್ನು ನೆಡಲಾಗಿದೆ. ಇದೀಗ ಬೀಳುತ್ತಿರುವ ಮಳೆಯಿಂದಾಗಿ ಜೋಳದ ಬೆಳೆಯ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಕಳೆದ ವರ್ಷ ಈ ಸಮಯಕ್ಕೆ 26 ಇಂಚು ಮಳೆಯಾಗಿತ್ತು. ಪ್ರಸಕ್ತ ವರ್ಷ 38 ಇಂಚು ಮಳೆಯಾಗಿದೆ ಎಂದು ಗ್ರಾಮಸ್ಥ ಮಧುಶಂಕರ್ ಅವರು ‘ಶಕ್ತಿ’ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಕೊಡ್ಲಿಪೇಟೆಯಲ್ಲಿ ನಾಟಿ ಸ್ಥಗಿತ : ಕೊಡ್ಲಿಪೇಟೆ ಭಾಗದಲ್ಲಿ ಕಳೆದ ಐದು ದಿನಗಳ ಹಿಂದೆ ಪ್ರಾರಂಭವಾಗಿದ್ದ ನಾಟಿ ಕಾರ್ಯ ಇದೀಗ ಸ್ಥಗಿತಗೊಂಡಿದೆ. ಈ ಭಾಗದಲ್ಲಿ ಶೇ. 10ರಷ್ಟು ನಾಟಿ ಮುಕ್ತಾಯವಾಗಿದೆ. ಕ್ಯಾತೆ ಗ್ರಾಮದ ರಸ್ತೆ ದುಸ್ಥಿತಿಗೆ ತಲಪಿದೆ. ಕ್ಯಾತೆ ಮುಖ್ಯ ರಸ್ತೆಯ ಸೇತುವೆ ಕುಸಿಯುವ ಹಂತದಲ್ಲಿದ್ದು, ಹೇಮಾವತಿ ನೀರಾವರಿ ಯೋಜನೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕ್ಯಾತೆ ಗ್ರಾಮದ ಶಿವಕುಮಾರ್ ಆರೋಪಿಸಿದ್ದಾರೆ.
ಶನಿವಾರಸಂತೆ ಭಾಗಕ್ಕೆ 52 ಇಂಚು ಮಳೆಯಾಗಿದ್ದರೆ, ಆಲೂರುಸಿದ್ದಾಪುರಕ್ಕೆ 38 ಇಂಚು ದಾಖಲಾಗಿದೆ.
ಮಾದಾಪುರದಲ್ಲಿ ಮಳೆಯೊಂದಿಗೆ ಆನೆ ಕಾಟ: ತಾಲೂಕಿನ ಮಾದಾಪುರ ವ್ಯಾಪ್ತಿಯಲ್ಲಿ ಮಳೆಯೊಂದಿಗೆ ಆನೆ ಕಾಟವೂ ಪ್ರಾರಂಭವಾಗಿದೆ. ಕಳೆದ ವಾರವಷ್ಟೇ ಕುಂಬೂರಿನಲ್ಲಿ ಹುಲಿ ಹೆಜ್ಜೆಗಳು ಪ್ರತ್ಯಕ್ಷಗೊಂಡಿವೆ. ಭಾರೀ ಮಳೆಯಿಂದ ಮಾದಾಪುರ ಹೊಳೆ ತುಂಬಿ ಹರಿಯುತ್ತಿದ್ದು, ಹೊಳೆ ಪಾತ್ರದ ಪ್ರದೇಶಗಳಿಗೆ ನೀರು ನುಗ್ಗಿದೆ. ಮಾದಾಪುರಕ್ಕೆ 55 ಇಂಚು ಮಳೆಯಾಗಿದ್ದು, ಗರ್ವಾಲೆಗೆ 100, ಶಿರಂಗಳ್ಳಿಗೆ 85 ಇಂಚಿನಷ್ಟು ಮಳೆ ಸುರಿದಿದೆ ಎಂದು ಗ್ರಾ.ಪಂ. ಸದಸ್ಯ ನಾಪಂಡ ಉಮೇಶ್ ಮಾಹಿತಿಯಿತ್ತಿದ್ದಾರೆ.
ಕುಂದಳ್ಳಿಯಲ್ಲಿ ಹೊಳೆಗೆ ಜಾರಿದ ಮಣ್ಣಿನ ಗುಡ್ಡ : ಕುಂದಳ್ಳಿ ಗ್ರಾಮದಲ್ಲಿ ಮಣ್ಣಿನ ಗುಡ್ಡವೊಂದು ಅತೀ ಶೀತದಿಂದ ಹೊಳೆಗೆ ಜಾರಿದೆ. ಪರಿಣಾಮ ಹೊಳೆಯ ನೀರು ಪಕ್ಕದ ಜಾಗದಲ್ಲಿ ಹರಿಯುತ್ತಿದ್ದು, ಗದ್ದೆಗಳು ಜಲಾವೃತಗೊಂಡಿವೆ. ಕುಂದಳ್ಳಿ ವ್ಯಾಪ್ತಿಗೆ ಇದುವರೆಗೆ 104 ಇಂಚು ಮಳೆಯಾಗಿದೆ ಎಂದು ವಿಎಸ್ಎಸ್ಎನ್ ಅಧ್ಯಕ್ಷ ದಿನೇಶ್ ತಿಳಿಸಿದ್ದಾರೆ.
ಐಗೂರಿನಲ್ಲಿ ಹರಿಯುವ ಚೋರನ ಹೊಳೆಯಲ್ಲಿ ನೀರಿನ ಪ್ರಮಾಣ ಅಧಿಕವಾಗಿದ್ದು, ಹೊಳೆ ಬದಿಯಲ್ಲಿರುವ ಮೋಹನ್ದಾಸ್, ಭಗವತಿ ವಿಶ್ವ, ಇಂದಿರ ಚೆಲುವ, ಶಶಿ ಲೋಕನಾಥ್, ಸಂಕೇಶ್ ಅವರುಗಳ ವಾಸದ ಮನೆ ಬಾಗಿಲಿಗೆ ಹೊಳೆ ನೀರು ನುಗ್ಗುತ್ತಿದೆ.
ಐಗೂರಿನಲ್ಲಿ 55, ಕಾಜೂರಿನಲ್ಲಿ 45 ಇಂಚಿನಷ್ಟು ಮಳೆ ದಾಖಲಾಗಿದೆ. ಚೋರನ ಹೊಳೆ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಎಂದು ಸ್ಥಳೀಯರಾದ ಮೋಹನ್ದಾಸ್ ಮತ್ತು ಅವಿಲಾಶ್ ಮಾಹಿತಿ ಒದಗಿಸಿದ್ದಾರೆ.
ಕುಂಬೂರಿಗೆ 54 ಇಂಚು : ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹರದೂರಿಗೆ 44, ಹೊಸತೋಟ ಭಾಗಕ್ಕೆ 43 ಇಂಚು ಮಳೆಯಾಗಿದೆ ಎಂದು ಸಲೀಂ ತಿಳಿಸಿದ್ದಾರೆ. ಕುಂಬೂರು ವ್ಯಾಪ್ತಿಯಲ್ಲಿ ಇದುವರೆಗೆ 54 ಇಂಚು ಮಳೆಯಾಗಿದೆ ಎಂದು ಯೋಗಾನಂದ ಮಾಹಿತಿಯಿತ್ತಿದ್ದಾರೆ.
ಪ್ರ್ರಸಕ್ತ ಸಾಲಿನ ಭಾರೀ ಮಳೆ-ಗಾಳಿಗೆ 284 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಈಗಾಗಲೇ 250 ಕಂಬಗಳನ್ನು ನೂತನವಾಗಿ ಅಳವಡಿಸಲಾಗಿದೆ. ಇದರೊಂದಿಗೆ ಟ್ರಾನ್ಸ್ಫಾರ್ಮರ್, ವಿದ್ಯುತ್ ತಂತಿಗಳನ್ನು ಅಳವಡಿಸುವ ಕಾರ್ಯವೂ ನಡೆದಿದೆ ಎಂದು ಇಲಾಖೆಯ ಸಹಾಯಕ ಅಭಿಯಂತರ ಧನಂಜಯ್ ‘ಶಕ್ತಿ’ಗೆ ತಿಳಿಸಿದ್ದಾರೆ.
ತಾಲೂಕಿನಾದ್ಯಂತ ಮಳೆ ಬಿರುಸುಗೊಂಡಿದ್ದು, ಅಲ್ಲಲ್ಲಿ ಹಾನಿ ಪ್ರಕರಣಗಳು ವರದಿಯಾಗಿವೆ. ಬಹುತೇಕ ಕಡೆಗಳಲ್ಲಿ ವಾಸದ ಮನೆಗಳು ಕುಸಿದುಬಿದ್ದಿದ್ದು, ಜನತೆ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ.
ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲು ಶೆಟ್ಟಳ್ಳಿಯಲ್ಲಿ ನೀಲಕಂಠಪ್ಪ ಎಂಬವರಿಗೆ ಸೇರಿದ ಶೆಡ್ ಅತೀ ಶೀತಕ್ಕೆ ಕುಸಿದುಬಿದ್ದಿದ್ದು, ಛಾವಣಿ ನೆಲಕ್ಕಚ್ಚಿದೆ.
- ವಿಜಯ್ ಹಾನಗಲ್