ಮಡಿಕೇರಿ, ಜು. 13: ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಳೆಯಿಂದ ಹಾನಿಯಾಗಿರುವ ಬಂಟ್ವಾಳ-ಮೈಸೂರು ರಸ್ತೆ (ಬಿ.ಎಂ ರಸ್ತೆ), ಎವಿ ಶಾಲೆ ಬಳಿ ಮನೆ ಕುಸಿತ ಹಾಗೂ ಭಗವತಿ ನಗರ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ನಗರದ ಹೊರ ವಲಯದ ಮಂಗಳೂರು ರಸ್ತೆ ಬಿರುಕು ಬಿಟ್ಟು, ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಈ ಸ್ಥಳವನ್ನು ಶಾಸಕರು ವೀಕ್ಷಣೆ ಮಾಡಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹೆದ್ದಾರಿಗಳು ಕುಸಿಯುವ ಹಂತಕ್ಕೆ ಬಂದಿವೆ. ಇದನ್ನು ಸರಿಪಡಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕಿದೆ ಎಂದು ಸಲಹೆ ಮಾಡಿದರು.“ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವದರಿಂದ ಮಡಿಕೇರಿಯಿಂದ ಮಂಗಳೂರು ಮಾರ್ಗದ ರಸ್ತೆಯ ಒಂದು ಬದಿ ಇಳಿಜಾರಿನಿಂದ ಕೂಡಿದೆ. ಮತ್ತೊಂದು ಬದಿ ಬೆಟ್ಟ-ಗುಡ್ಡಗಳಿಂದ ಕೂಡಿದೆ, ಇದರಿಂದ ರಸ್ತೆ ಬಿರುಕು ಬಿಡುವ ಸಾಧ್ಯತೆ ಹೆಚ್ಚಿದ್ದು, ಈ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ವಹಿಸುವದು ಅಗತ್ಯ ಎಂದು ಶಾಸಕರು ತಿಳಿಸಿದರು.”
ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಮುಂದುವರೆದಿದೆ. ಹಾಗೆಯೇ ಆಗಸ್ಟ್ ವರೆಗೂ ಮಳೆಯಾಗುವದರಿಂದ ಇನ್ನಷ್ಟು ಎಚ್ಚರಿಕೆ ವಹಿಸಬೇಕಿದೆ. ಸರ್ಕಾರ ಆ ನಿಟ್ಟಿನಲ್ಲಿ ಮಳೆ ಹಾನಿ ಸಂಬಂಧ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಿದೆ ಎಂದು ಎಂ.ಪಿ.ಅಪ್ಪಚ್ಚುರಂಜನ್ ಅವರು ಒತ್ತಾಯಿಸಿದರು.
ಶಿರಾಡಿ ಘಾಟ್ ರಸ್ತೆ ಮಾರ್ಗದಲ್ಲಿ ಜುಲೈ 16 ರಿಂದ ವಾಹನ ಸಂಚಾರಕ್ಕೆ ಅವಕಾಶ ಮಾಡುವದರಿಂದ ಬಂಟ್ವಾಳ-ಮೈಸೂರು ಮಾರ್ಗದ ರಸ್ತೆಗೆ ಒತ್ತಡ ಕಡಿಮೆಯಾಗುವ ಸಾಧ್ಯತೆ ಇದೆ. ಆದರೂ ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ಬದಲಿಸಿ, ಅಧಿಕ ಭಾರದ ವಾಹನಗಳನ್ನು ಮೇಕೇರಿ ಮಾರ್ಗ ಸಂಚಾರಕ್ಕೆ ಅವಕಾಶ ಮಾಡುವದು ಅಗತ್ಯ ಎಂದು ಶಾಸಕರು ಸಲಹೆ ಮಾಡಿದರು.
ಜೂನ್ ಮೊದಲ ವಾರದಲ್ಲಿ ಸುರಿದ ಧಾರಾಕರ ಮಳೆ ಹಾಗೂ ಕಳೆದ ಒಂದು ವಾರದಿಂದ ಸುರಿಯುತ್ತಿರುವ ವ್ಯಾಪಕ ಮಳೆಗೆ ವಾಸದ ಮನೆ, ಹಾನಿ, ವಿದ್ಯುತ್ ಕಂಬಗಳು, ರಸ್ತೆಗಳು ಹೀಗೆ ಅಪಾರ ಪ್ರಾಮಾಣದಲ್ಲಿ ಹಾನಿಯಾಗಿದ್ದು, ಕೂಡಲೇ ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ತಿಳಿಸಿದರು.
ಈಗಾಗಲೇ ಮಳೆ ಹಾನಿ ಸಂಬಂಧ 10 ಕೋಟಿ ರೂ ಬಿಡುಗಡೆಯಾಗಿದ್ದು, ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡಬೇಕು. ಹಾಗೂ ರಸ್ತೆ ಮತ್ತಿತರ ಹಾನಿಗೆ ಬಳಸುವಂತಾಗಬೇಕು. ಈ ಸಂಬಂಧ ಜಿಲ್ಲಾಧಿಕಾರಿಯವರ ಜೊತೆ ಚರ್ಚಿಸಲಾಗಿದ್ದು, ತ್ವರಿತ ಪರಿಹಾರ ವಿತರಣೆಗೆ ಕ್ರಮವಹಿಸಲು ತಿಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುಂದುವರೆದಿರುವದರಿಂದ ಮಳೆ ಹಾನಿ ಪ್ರದೇಶಗಳಿಗೆ ತಾ. 14 ರಂದು (ಇಂದು) ಸೂರ್ಲಬ್ಬಿ, ಹಮ್ಮಿಯಾಲ, ಮುಟ್ಲು, ಕಡಗದಾಳು, ಕತ್ತಲೆಕಾಡು, ಕಾಲೂರು ಮತ್ತಿತರ ಕಡೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವದು ಎಂದು ಅವರು ತಿಳಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಸ್.ಪ್ರಕಾಶ್, ಸದಸ್ಯರಾದ ಲಕ್ಷ್ಮಿ, ಅನಿತಾ ಪೂವಯ್ಯ, ಉನ್ನಿಕೃಷ್ಣ, ಕೆ.ಎಸ್.ರಮೇಶ್, ಸಂಗೀತಾ ಪ್ರಸನ್ನ, ಸವಿತಾ ರಾಕೇಶ್, ಪೊಲೀಸ್ ಇನ್ಸ್ಪೆಕ್ಟರ್ ಐ.ಪಿ.ಮೇದಪ್ಪ, ಪೌರಾಯುಕ್ತರಾದ ಬಿ.ಶುಭಾ, ಲೋಕೋಪಯೋಗಿ ಇಲಾಖೆಯ ಎಇಇ ಇಬ್ರಾಹಿಂ, ರಾಷ್ಟ್ರೀಯ ಹೆದ್ದಾರಿ ಸಹಾಯಕ ಎಂಜಿನಿಯರ್ ಹಾಲಪ್ಪ ಇತರರು ಇದ್ದರು.