ಕೂಡಿಗೆ, ಜು. 14: ಸರಕಾರದ ನಿಯಮಾನುಸಾರವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವಂತೆ ಕೊಡಗು ಜಿಲ್ಲೆಯಲ್ಲಿಯೂ ಸಹ ರೇಷ್ಮೆ ಇಲಾಖೆಯ ಕಚೇರಿ ಇದೆ. ಕೊಡಗು ಜಿಲ್ಲೆಯಲ್ಲಿ ಹೆಚ್ಚು ಮಳೆ ಬೀಳುವದರಿಂದ ಜಿಲ್ಲೆಯ ಮೂರು ತಾಲೂಕುಗಳಲ್ಲಿ ರೇಷ್ಮೆ ಬೆಳೆಯನ್ನು ಮಾಡಲು ಸಾಧ್ಯವಾಗುತ್ತಿಲ್ಲ.

ಬದಲಿಗೆ ಸೋಮವಾರಪೇಟೆ ತಾಲೂಕು ಮತ್ತು ಮಡಿಕೇರಿ ತಾಲೂಕಿನ ಕೆಲವು ಭಾಗಗಳಲ್ಲಿ 25 ವರ್ಷಗಳಿಂದಲೂ ಆಯಾ ಭಾಗದ ರೈತರುಗಳು ಕಷ್ಟ-ನಷ್ಟಗಳ ನಡುವೆ ತಮ್ಮ ಜಮೀನುಗಳಲ್ಲಿ ಹಿಪ್ಪನೇರಳೆ ಗಿಡಗಳನ್ನು ನೆಟ್ಟು ರೇಷ್ಮೆ ಮೊಟ್ಟೆಯನ್ನು ತಂದು ರೇಷ್ಮೆ ಬೆಳೆಯನ್ನು (ಗೂಡು) ಬೆಳೆದು ಮಾರಾಟ ಮಾಡುತ್ತಿದ್ದರು. ಆದರೆ ರೈತರಿಗೆ ಉತ್ತೇಜನ ಮತ್ತು ತರಬೇತಿ ನೀಡಿ ಸೂಕ್ತ ಮಾಹಿತಿ ನೀಡಲು ಕಳೆದ 10 ವರ್ಷಗಳಿಂದ ಜಿಲ್ಲೆಯ ರೇಷ್ಮೆ ಇಲಾಖೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸರಕಾರ ನೇಮಕ ಮಾಡದೆ ಬರಿ ಮಾತಿಗಷ್ಟೆ ಉತ್ತೇಜನ ನೀಡುವಂತೆ ಹೇಳುತ್ತಾ ಬಂದಿದೆ.

ಆದ್ದರಿಂದ ಜಿಲ್ಲೆಯಲ್ಲಿ ರೇಷ್ಮೆ ಉತ್ಪಾದನೆ ಕಡಿಮೆಯಾಗುತ್ತಿದ್ದು, ರೇಷ್ಮೆ ಬೆಳೆಯುವ ರೈತರು ಕೂಡಾ ಕಡಿಮೆಯಾಗುತ್ತಿದ್ದಾರೆ. ರೈತರುಗಳು ತಮ್ಮ ಅಲ್ಪ ಜಮೀನಿನಲ್ಲಿ ಹಿಪ್ಪನೇರಳೆ ಗಿಡಗಳನ್ನು ನೆಟ್ಟಿದ್ದನ್ನು ಕಿತ್ತು ತಮ್ಮ ಆರ್ಥಿಕ ಮೌಲ್ಯವನ್ನು ವೃದ್ಧಿಸಿಕೊಳ್ಳಲು ಬೇರೆ ಬೆಳೆಗಳನ್ನು ಅವಲಂಬಿಸುತ್ತಿದ್ದಾರೆ.

ಕೊಡಗು ಜಿಲ್ಲೆಯ ಕೂಡಿಗೆಯಲ್ಲಿನ ರೇಷ್ಮೆ ಕೃಷಿ ಕ್ಷೇತ್ರಕ್ಕೆ ರೇಷ್ಮೆ ಇಲಾಖೆಯ ರಾಜ್ಯ ಆಯುಕ್ತರು ಭೇಟಿ ನೀಡಿ ಈ ಕ್ಷೇತ್ರದ ಪ್ರಗತಿಯ ಬಗ್ಗೆ ಪರಿಶೀಲಿಸಿ, ಇಲಾಖೆಗೆ ಸೇರಿದ ಜಾಗವನ್ನು ಬೇರೆ ಬೇರೆ ಇಲಾಖೆಗಳಿಗೆ ನೀಡುವದನ್ನು ಗಮನಿಸಿದ್ದಾರೆ. ಜಿಲ್ಲೆಯಲ್ಲಿ ರೇಷ್ಮೆ ಬೆಳೆಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಈಗಿರುವ ರೇಷ್ಮೆ ಕೃಷಿ ಕ್ಷೇತ್ರದ ಜಾಗವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಇಲಾಖೆಯಿಂದ ಮಾಹಿತಿ ಪಡೆದು ಈ ಕೇಂದ್ರದ ಅಭಿವೃದ್ಧಿಗೆ 47 ಲಕ್ಷ ರೂಗಳನ್ನು ಮಂಜೂರು ಮಾಡಲಾಗಿದೆ.

ಈ ಹಣದಲ್ಲಿ ಕಚೇರಿ ಕಟ್ಟಡದ ನವೀಕರಣ, ರೇಷ್ಮೆ ಇಲಾಖೆಯ ಸುತ್ತ ತಡೆಗೋಡೆ ನಿರ್ಮಾಣ, ಹಾರಂಗಿ ನದಿಯ ಸನಿಹಕ್ಕೆ ತಂತಿ ಬೇಲಿ ನಿರ್ಮಾಣ, ಇಲ್ಲಿ ಬೆಳೆಯಲಾಗಿರುವ ಹಿಪ್ಪನೇರಳೆ ಬೆಳೆಗೆ ಬೋರ್‍ವೆಲ್ ಕೊರೆಸಲು ಹಾಗೂ ರೇಷ್ಮೆ ಬಿತ್ತನೆ ಕೋಟೆ ಹಾಗೂ ಗೂಡು ನಿರ್ವಹಣೆ ಕೊಠಡಿಗಳ ದುರಸ್ಥಿ ಕಾಮಗಾರಿ ನಡೆಯುತ್ತಿದೆ.

ಕೂಡಿಗೆ ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಯನ್ನು ನೀಡಿದ್ದು, ಜಿಲ್ಲೆಯ ರೇಷ್ಮೆ ಗೂಡು ರಾಜ್ಯದಲ್ಲಿ ಉತ್ಕøಷ್ಟ ಬಿತ್ತನೆ ಗೂಡಾಗಿದ್ದು, ಈ ಗೂಡನ್ನು ರೇಷ್ಮೆ ಮೊಟ್ಟೆ ಉತ್ಪಾದನೆಗಾಗಿ ಬಳಸಲಾಗುತ್ತಿದೆ.

ಅಲ್ಲದೆ, ಈ ಕ್ಷೇತ್ರದಲ್ಲಿ ವರ್ಷಂಪ್ರತಿ 2 ಎಕರೆ ಪ್ರದೇಶದಲ್ಲಿ ಹಿಪ್ಪ ನೇರಳೆ ನಾಟಿ ಮಾಡಿ ಸಿಬ್ಬಂದಿಗಳ ಕೊರತೆಯ ನಡುವೆಯು ಚಾಕಿ ಮಾಡಿದ 215 ಮೊಟ್ಟೆಯನ್ನು ಇಟ್ಟು 48 ಸಾವಿರ ಗೂಡುಗಳನ್ನು ಉತ್ಪಾದನೆ ಮಾಡಲಾಗಿದೆ. ಇಲಾಖೆಯು ನೀಡಿದ ಗುರಿಯನ್ನು ಈ ಸಾಲಿನಲ್ಲಿ ಕೂಡಿಗೆ ಕ್ಷೇತ್ರ ಸಾಧಿಸಿದೆ ಎಂದು ರೇಷ್ಮೆ ಪರಿವೀಕ್ಷಕ ಮಹೇಶ್ ತಿಳಿಸಿದ್ದಾರೆ.

- ಕೆ.ಕೆ.ನಾಗರಾಜಶೆಟ್ಟಿ