ಮಡಿಕೇರಿ, ಜು. 14: ಬಹುಮತ ಸಿಗದಿದ್ದರು ಜನರ ನಿರೀಕ್ಷೆಗೆ ವಿರುದ್ಧವಾಗಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ರೈತರ ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ಗೊಂದಲವನ್ನು ಸೃಷ್ಟಿಸುವ ಮೂಲಕ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಬಿಜೆಪಿ ಕೃಷಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಬಸವರಾಜು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಾಲಮನ್ನಾ ವಿಚಾರದಲ್ಲಿ ಸರ್ಕಾರ ಯಾವದೇ ಸ್ಪಷ್ಟ ನಿಲುವನ್ನು ಪ್ರಕಟಿಸದೆ ಇರುವದರಿಂದ ಹಳೆಯ ಸಾಲ ಮನ್ನಾ ಆಗದೆ, ಹೊಸ ಸಾಲವನ್ನು ಪಡೆಯಲೂ ಸಾಧ್ಯವಾಗದೆ ರೈತರು ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ನಡುವೆ ರಾಜ್ಯದಲ್ಲಿ ಅತಿವೃಷ್ಟಿಯಿಂದ ಕೃಷಿ ಕ್ಷೇತ್ರ ಸಂಪÀÇರ್ಣವಾಗಿ ನಾಶವಾಗಿದ್ದು, ಈ ಸಂಕಷ್ಟದ ಪರಿಸ್ಥಿತಿಯಲ್ಲ್ಲೂ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲವೆಂದು ಬಸವರಾಜು ಆರೋಪಿಸಿದರು.
ರೈತರ ಸಂಪÀÇರ್ಣ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದ ಅವರು, ಮುಖ್ಯಮಂತ್ರಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದಲ್ಲಿ ರಾಜ್ಯದ ರೈತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಕೃಷಿ ಮೋರ್ಚಾ ಪ್ರತಿ ತಾಲ್ಲೂಕು ಮಟ್ಟದಲ್ಲಿ ಪ್ರವಾಸ ಕೈಗೊಂಡು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ಬಸವರಾಜು ಎಚ್ಚರಿಕೆ ನೀಡಿದರು.
ಕೃಷಿ ಮೋರ್ಚಾದ ಕೊಡಗು ಉಸ್ತುವಾರಿ ನಂಜುಂಡೇಗೌಡ ಮಾತನಾಡಿ, ಹೆಚ್.ಡಿ. ಕುಮಾರಸ್ವಾಮಿ ಅವರು ಚುನಾವಣೆ ಸಂದರ್ಭ ರೈತರ ಎಲ್ಲಾ ಸಾಲಗಳ ಮೊತ್ತ 53 ಸಾವಿರ ಕೋಟಿ ರೂ.ಗಳನ್ನು ಮನ್ನಾ ಮಾಡುವದಾಗಿ ಭರವಸೆ ನೀಡಿದ್ದರು. ಅಲ್ಲದೆ, ಜೆಡಿಎಸ್‍ನ ಪ್ರಣಾಳಿಕೆಗೆ ಒಪ್ಪಿಗೆ ಸೂಚಿಸುವ ಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸುವದಾಗಿ ತಿಳಿಸಿದ್ದರು. ಆದರೆ, ಇಂದು ನಮಗೆ ಬಹುಮತ ಬಂದಿಲ್ಲವೆಂದು ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಮರೆತು ರೈತರನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಇನ್ನೂ ನಿಂತಿಲ್ಲ, ಕೃಷಿ ಮೋರ್ಚಾ ಆರು ವಿಭಾಗಗಳಲ್ಲಿ ತಂಡವನ್ನು ರಚಿಸಿ ರಾಜ್ಯವ್ಯಾಪಿ ಸಂಚರಿಸಿ ರೈತರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಲಿದೆ. ಇದಕ್ಕೆ ಸೂಕ್ತ ಸ್ಪಂದನ ದೊರೆಯದಿದ್ದಲ್ಲಿ ರಾಜ್ಯ ವ್ಯಾಪಿ ರೈತ ಪರ ಹೋರಾಟವನ್ನು ರೂಪಿಸುವದಾಗಿ ಎಚ್ಚರಿಕೆ ನೀಡಿದರು.
ಕೃಷಿ ಮೋರ್ಚಾದ ಜಿಲ್ಲಾಧ್ಯಕ್ಷ ತಾಕೇರಿ ಪೊನ್ನಪ್ಪ ಮಾತನಾಡಿ, ನೂತನ ಸಮ್ಮಿಶ್ರ ಸರ್ಕಾರ ರೈತರ ಆರೋಗ್ಯ ವಿಮೆ ಯಶಸ್ವಿನಿ ಯೋಜನೆಯನ್ನು ಕಸಿದುಕೊಂಡಿದೆ ಎಂದು ಆರೋಪಿಸಿದರು. ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸದಿದ್ದಲ್ಲಿ ಕೊಡಗು ಬಂದ್ ಹೋರಾಟವನ್ನು ಕೂಡ ಕೈಗೆತ್ತಿಕೊಳ್ಳುವದಾಗಿ ಎಚ್ಚರಿಕೆ ನೀಡಿದರು. 2015-16ನೇ ಸಾಲಿನಲ್ಲಿ ಕಾಫಿ ಬೆಳೆಗಾರರಿಗೆ ಮಳೆ ಹಾನಿ ಪರಿಹಾರವನ್ನು ಘೋಷಿಸಲಾಗಿತ್ತಾದರೂ, ಇಲ್ಲಿಯವರೆಗೆ ಪರಿಹಾರದ ಚೆಕ್ ವಿತರಣೆಯಾಗಿಲ್ಲ. ಮುಂದಿನ 15 ದಿನಗಳ ಒಳಗೆ ಫಲಾನುಭವಿಗಳಿಗೆ ಚೆಕ್‍ನ್ನು ವಿತರಿಸದಿದ್ದಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರ ರೈತರ 14 ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿರುವದನ್ನು ಕೃಷಿ ಮೋರ್ಚಾ ಸ್ವಾಗತಿಸುವದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಕೊಡಗು ಉಸ್ತುವಾರಿ ಮಲ್ಲಣ್ಣ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂಗೀರ ಸತೀಶ್ ಹಾಗೂ ತಾಲೂಕು ಅಧ್ಯಕ್ಷ ಬೆಪ್ಪುರನ ಮೇದಪ್ಪ ಉಪಸ್ಥಿತರಿದ್ದರು.