ವೀರಾಜಪೇಟೆ, ಜು. 14: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನದ ಬೆಳಗಿನಿಂದ ಇಂದು ಬೆಳಗಿನ 8 ಗಂಟೆವರೆಗೆ ಒಟ್ಟು 2.6 ಇಂಚುಗಳಷ್ಟು ಮಳೆ ಸುರಿದಿದೆ. ಇಂದು ಬೆಳಗ್ಗಿನಿಂದಲೇ ಈ ವಿಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು ಅಪರಾಹ್ನ ಮಳೆಯ ರಭಸ ಬಿರುಸುಗೊಂಡಿದೆ.
ಬಿಟ್ಟಂಗಾಲ, ವಿ.ಬಾಡಗ, ಬಾಳುಗೋಡು, ಪೆರುಂಬಾಡಿ, ಆರ್ಜಿ, ಕದನೂರು ಸೇರಿದಂತೆ ವಿವಿಧೆಡೆಗಳಲ್ಲಿ ಸಾಧಾರಣಾ ಮಳೆಯಾಗುತ್ತಿದ್ದರೂ ಗದ್ದೆಗಳು ಜಲಾವೃತ್ತಗೊಂಡು ನೀರು ಮಂದಗತಿಯಲ್ಲಿ ಇಳಿಮುಖ ವಾಗುತ್ತಿರುವದರಿಂದ ನಾಟಿ ಕೆಲಸಕ್ಕೆ ಅಡಚಣೆ ಉಂಟಾಗಿದೆ. ಈ ವಿಭಾಗದಲ್ಲಿ ರೈತರು ನಾಟಿ ಕೆಲಸಕ್ಕೆ ಸಿದ್ಧತೆ ನಡೆಸಿದ್ದರೂ ಜಲಾವೃತ ಗದ್ದೆಯಿಂದ ನಾಟಿ ಮಾಡಲು ಸಾಧ್ಯವಾಗುತ್ತಿಲ್ಲ. ಪೂರ್ಣ ಪ್ರಮಾಣದಲ್ಲಿ ಮಳೆ ಕಡಿಮೆಯಾಗುವ ತನಕ ನಾಟಿ ಕೆಲಸ ಮುಂದುವರೆಸಲು ಸಾಧ್ಯವಿಲ್ಲ. ವೀರಾಜಪೇಟೆ ವಿಭಾಗದ ಕೆಲವು ಕಡೆ ಗದ್ದೆಯ ಜಲಾವೃತ್ತ ಹಾಗೂ ಮಳೆ ಮುಂದುವರೆದರೆ ಸಸಿ ಮಡಿಗಳು ಕೊಳೆಯುವ ಸಾಧ್ಯತೆ ಇದೆ ಎಂದು ಈ ವಿಭಾಗದ ರೈತರು ಆತಂಕ ವ್ಯಕ್ತ ಪಡಿಸಿದ್ದಾರೆ.
ಕೊಡಗು ಕೇರಳ ಗಡಿ ಪ್ರದೇಶವಾದ ಪೆರುಂಬಾಡಿ, ಮಾಕುಟ್ಟದಲ್ಲಿಯೂ ಮಳೆ ಚುರುಕುಗೊಂಡಿದೆ. ಮಾಕುಟ್ಟದ ಮಾರ್ಗವಾಗಿ ಕೇರಳ ರಾಜ್ಯ ಸಂಪರ್ಕಿಸಲು ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಿದ್ದರೂ ಲಘು ವಾಹನಗಳು ಸೂಕ್ಷ್ಮತೆಯಿಂದ ಸಂಚರಿಸಬೇಕಾಗಿದೆ. ಪೆರುಂಬಾಡಿ ಗೇಟ್‍ನಿಂದ ಮಾಕುಟ್ಟಕ್ಕೆ ತೆರಳ ಬೇಕಾದ ರಾಜ್ಯ ಹೆದ್ದಾರಿ ರಸ್ತೆಯ ಎಡ ಭಾಗದಲ್ಲಿ ಈಚೆಗಿನ ಭಾರೀ ಮಳೆಯಿಂದ ಬೆಟ್ಟದ ಕೆಳಗಿನ ತಪ್ಪಲಿನಲ್ಲಿ ಅನೇಕ ಮರಗಳು ಬೇರು ಸಮೇತ ಬಾಗಿದ್ದು ಯಾವ ಸಮಯದಲ್ಲಾದರೂ
ಈ ಮರಗಳು ರಸ್ತೆಗೆ ಉರುಳುವ ಸಾಧ್ಯತೆ ಇದೆ. ಇದರಿಂದಾಗಿ ಆತಂಕದ ಪರಿಸ್ಥಿತಿಯಲ್ಲಿ ಲಘು ವಾಹನಗಳು ನಿಧಾನವಾಗಿ ಚಲಿಸುತ್ತಿವೆ.
ಮರಬಿದ್ದು ಹಾನಿ
ಗಾಳಿ, ಮಳೆಗೆ ಕಂಡಂಗಾಲ ಗ್ರಾಮದ ಮಂದಮಾಡ ಇ. ಸೈಬತ್ ಎಂಬುವವರ ಮನೆಗೆ ಮರ ಬಿದ್ದು ಹಾನಿಯಾಗಿದೆ.
ಮನೆಯ ಸಮೀಪವಿದ್ದ ಮರ ಗಾಳಿಗೆ ವಿದ್ಯುತ್ ತಂತಿಯೊಂದಿಗೆ ಮನೆ ಮೇಲೆ ಬಿದ್ದಿತ್ತು. ಇದರಿಂದಾಗಿ ವಿದ್ಯುತ್ ಹರಿದು ಮನೆಯ ಟಿ.ವಿ ಕೆಟ್ಟು ಹೋಗಿದೆ. ಇದರಂತೆ ಮನೆಯ ಹೆಂಚು ಮುರಿದಿದೆ. 8 ಮೇಲ್ಚಾವಣಿಯ ಶೀಟ್‍ಗಳು ಮುರಿದು ಹೋಗಿದೆ. ಮನೆಯಲ್ಲಿ ಯಾರು ಇಲ್ಲದ ಹಗಲು ಹೊತ್ತಿನಲ್ಲಿ ಘಟನೆ ನಡೆದಿದೆ. ಸ್ಥಳೀಯರ ಸಹಾಯದಲ್ಲಿ ಮರವನ್ನು ತೆರವುಗೊಳಿಸಲಾಗಿದೆ.
ಶುಂಠಿ ಬೆಳೆ ಹಾನಿ
ಕೂಡಿಗೆ: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಸಿದ್ದಲಿಂಗಪುರ ವ್ಯಾಪ್ತಿಗಳಲ್ಲಿ 250ಕ್ಕೂ ಅಧಿಕ ಎಕರೆಗಳಲ್ಲಿ ರೈತರು ಬೆಳೆದಿದ್ದ ಜೋಳ ಮತ್ತು ಶುಂಠಿ ಬೆಳೆ ಸಂಪೂರ್ಣ ಹಾನಿಯಾಗಿವೆ.
ಅಲ್ಲದೆ, ಇನ್ನುಳಿದ ಕೆಲವು ಭಾಗಗಳಲ್ಲಿ ಕಳೆದ ಎರಡು ತಿಂಗಳಿನಿಂದ ಮಳೆ ಬಿಡುವು ಕೊಡದೆ ಜೋಳ ಬಿತ್ತನೆ ಮಾಡಲಾಗಿಲ್ಲ. ಸಹಕಾರ ಸಂಘಗಳಿಂದ ಸಾಲದ ರೂಪದಲ್ಲಿ ರೈತರು ತೆಗೆದುಕೊಂಡಿರುವ ಗೊಬ್ಬರ, ಜೋಳದ ಬಿತ್ತನೆ ಬೀಜಗಳನ್ನು ಬಿತ್ತನೆ ಮಾಡದೆ ಮನೆಯಲ್ಲಿ ಇರಿಸಿಕೊಂಡಿದ್ದಾರೆ. ಇದೀಗ ಕೃಷಿ ಭೂಮಿಗಳನ್ನು ಉಳುಮೆ ಮಾಡಲು ಆಗದೆ ಪಾಳುಬಿಟ್ಟಂತಾಗಿದೆ.
ಈ ವ್ಯಾಪ್ತಿಯ ನೂರಾರು ರೈತರು ತಮ್ಮ ಆರ್ಥಿಕ ಮಟ್ಟವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯನ್ನು ಬೆಳೆದಿದ್ದಾರೆ. ಆದರೆ, ಅತಿಯಾದ ಮಳೆಯಿಂದ ಶುಂಠಿ ಬೆಳೆ ಕೊಳೆಯುತ್ತಿದೆ. ಅಲ್ಲದೆ, ಶುಂಠಿ ಬೆಳೆಗೆ ಮಹಾಕಾಳಿ ಮತ್ತು ಕರಿಕಡ್ಡಿ ರೋಗ ಈಗಾಗಲೇ ಹರಡಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ.
ತಾಲೂಕು ಕೃಷಿ ಇಲಾಖೆಯವರು ಖುದ್ದಾಗಿ ರೈತರ ಕೃಷಿ ಭೂಮಿಗೆ ಭೇಟಿ ನೀಡಿ, ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಕುಶಾಲನಗರ ಹೋಬಳಿ ರೈತರು ಆಗ್ರಹಿಸಿದ್ದಾರೆ.
ಕುಶಾಲನಗರ: ಕುಶಾಲನಗರ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕ್ಷೀಣಿಸಿದ್ದರೂ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಮಾತ್ರ ತಗ್ಗಿಲ್ಲ. ಕುಶಾಲನಗರ ಮೂಲಕ ಹರಿಯುವ ನದಿಯಲ್ಲಿ ಗರಿಷ್ಠ ಪ್ರಮಾಣದ ನೀರು ಹರಿಯುತ್ತಿದ್ದು ಅಪಾಯದ ಮಟ್ಟ ಮೀರಿ ನೀರು ಗದ್ದೆ ಹೊಲಗಳಿಗೆ ನುಗ್ಗಿದೆ. ಕಳೆದ 4 ದಿನಗಳಿಂದ ನೀರಿನ ಹರಿವಿನ ಪ್ರಮಾಣದಲ್ಲಿ ಕುಸಿತ ಕಂಡುಬಂದಿಲ್ಲ.
ಹಾರಂಗಿ ಜಲಾಶಯಕ್ಕೆ ಒಳಹರಿವು 13324 ಕ್ಯೂಸೆಕ್ ಇದ್ದು ನದಿಗೆ 14335 ಕ್ಯೂಸೆಕ್ಸ್ ಪ್ರಮಾಣದಷ್ಟು ಹರಿಸಲಾಗುತ್ತಿದೆ. ಕಾಲುವೆ ಮೂಲಕ 750 ಕ್ಯೂಸೆಕ್ಸ್ ನೀರು ಹರಿಸಲಾಗಿದೆ ಎಂದು ಅಣೆಕಟ್ಟು ವಿಭಾಗದ ಅಧಿಕಾರಿ ನಾಗರಾಜ್ ತಿಳಿಸಿದ್ದಾರೆ. ಈ ಸಾಲಿನಲ್ಲಿ ಜಲಾಶಯಕ್ಕೆ ಒಟ್ಟು 14.12 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದ್ದು ಜಲಾಶಯದಲ್ಲಿ 7.71 ಟಿಎಂಸಿ ನೀರು ಸಂಗ್ರಹವಿದೆ. ನದಿಗೆ ಈ ಸಾಲಿನಲ್ಲಿ 5.75 ಟಿಎಂಸಿ, ಕಾಲುವೆ ಮೂಲಕ 0.2 ಟಿಎಂಸಿ ಪ್ರಮಾಣದ ನೀರು ಹರಿಸಲಾಗಿದೆ ಎಂದು ನಾಗರಾಜ್ ಮಾಹಿತಿ ನೀಡಿದ್ದಾರೆ.
ಸಿದ್ದಾಪುರ: ಗಾಳಿ ಮಳೆಗೆ ಸಿಲುಕಿ ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಅಂಚೆತಿಟ್ಟು ನಿವಾಸಿ ಹೆಚ್.ಜೆ. ಸುರೇಶ್ ಎಂಬವರ ಮನೆ ಭಾಗಶಃ ಕುಸಿದುಬಿದ್ದಿದೆ. ಅದೃಷ್ಟವಶಾತ್ ಯಾವದೇ ಪ್ರಾಣ ಹಾನಿ ಸಂಭವಿಸಿಲ್ಲ.ಈ ಬಗ್ಗೆ ಸುರೇಶ್ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರಿಗೆ ದೂರು ನೀಡಿದ್ದಾರೆ.